ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡ ನಂತರ ಹಲವು ಮಹತ್ವದ ವಿಷಯಗಳು ಹೊರಬಿದ್ದಿದೆ. ಇದೀಗ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ)ಕ್ಕೆ ಲಭ್ಯವಾದ ವಾಟ್ಸಪ್ ಚಾಟ್ಸ್ ನಲ್ಲಿ ಸುಶಾಂತ್ ಸಿಂಗ್ ಆಪ್ತ ಸ್ಯಾಮ್ಯುಯೆಲ್ ಮಿರಾಂಡಾಗೆ ಬಂಧಿತ ಡ್ರಗ್ ಕಿಂಗ್ ಪಿನ್ ಗಳ ಪರಿಚಯ ಇದ್ದಿರುವುದು ಬಯಲಾಗಿದೆ ಎಂದು ವರದಿ ತಿಳಿಸಿದೆ.
ಬಂಧಿತ ಮಾದಕ ವಸ್ತು ಮಾರಾಟದ ಆರೋಪಿಗಳಾದ ಬಸಿತ್ ಪರಿಹಾರ್ ಮತ್ತು ಜೈದ್ ವಿಲಾತ್ರ ರಜಪೂತ್ ಆಪ್ತ ಗೆಳೆಯ ಸ್ಯಾಮ್ಯುಯೆಲ್ ಮಿರಾಂಡನಿಗೆ ಪರಿಚಿತರಾಗಿದ್ದಾರೆ. ಅಷ್ಟೇ ಅಲ್ಲ ಮುಂಬೈನ ಬಾಂದ್ರಾ ನಿವಾಸದಲ್ಲಿ ಭೇಟಿಯಾಗಿದ್ದು, 10 ಸಾವಿರ ರೂ. ಮೌಲ್ಯದ ಡ್ರಗ್ಸ್ ಪ್ಯಾಕೇಟ್ ಅನ್ನು ಖರೀದಿಸಿರುವುದಾಗಿ ವರದಿ ವಿವರಿಸಿದೆ.
ಮೂಲಗಳ ಪ್ರಕಾರ, ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿ ಕೂಡಾ ಬಸಿತ್ ಗೆಳೆಯರಾಗಿದ್ದಾರೆ. ನಂತರ ಡ್ರಗ್ಸ್ ಸರಬರಾಜು ಮಾಡಲು ಶೋವಿಕ್ ಸ್ಯಾಮ್ಯುಯೆಲ್ ಅವರನ್ನು ಬಾಸಿಟ್ ಗೆ ಪರಿಚಯಿಸಿರುವುದಾಗಿ ತಿಳಿಸಿದೆ. ನಂತರ ಬಸಿತ್ ಸ್ಯಾಮ್ಯುಯೆಲ್ ನನ್ನು ಝೈದ್ ಗೆ ಪರಿಚಯಿಸಿರುವುದಾಗಿ ವಿವರಿಸಿದೆ. ಆ ಬಳಿಕ ಝೈದ್ ನೇರವಾಗಿ ಸ್ಯಾಮ್ಯುಯೆಲ್ ಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎಂದು ವರದಿ ತಿಳಿಸಿದೆ.
ಕೆಲವೊಮ್ಮೆ ಸ್ಯಾಮ್ಯುಯೆಲ್ ಝೈದ್ ಬಳಿ ಇದ್ದ ಡ್ರಗ್ಸ್ ತರಲು ಸಿಬ್ಬಂದಿಯನ್ನು ಕಳುಹಿಸುತ್ತಿದ್ದ ಎಂದು ಮೂಲಗಳು ಹೇಳಿವೆ. ಎನ್ ಸಿಬಿ ಈಗಾಗಲೇ ಬಸಿತ್ ಪರಿಹಾರ್ ಮತ್ತು ಝೈದ್ ನನ್ನು ಬಂಧಿಸಿದೆ. ಗೋವಾದಲ್ಲಿರುವ ಮತ್ತೊಬ್ಬ ಡ್ರಗ್ ಪೆಡ್ಲರ್ (ಮಾರಾಟ)ನನ್ನು ಬಂಧಿಸಬೇಕಾಗಿದೆ ಎಂದು ಮೂಲಗಳು ಹೇಳಿವೆ.
ಎನ್ ಸಿಬಿ ಈವರೆಗೆ ನಡೆಸಿದ ತನಿಖೆ ಪ್ರಕಾರ, ಮಾದಕ ವಸ್ತು ಜಾಲದ ಸಂಚಿನಲ್ಲಿ ಶೋವಿಕ್ ಮತ್ತು ಸ್ಯಾಮ್ಯುಯೆಲ್ ಗೆ ಸಂಬಂಧ ಹೊಂದಿದ್ದು, ಇನ್ನಷ್ಟು ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ತಿಳಿಸಿದೆ. ಈ ಆಧಾರದ ಮೇಲೆ ತನಿಖೆ ಮತ್ತು ಬಂಧನ ನಡೆಯುತ್ತಿದೆ. ಇದೀಗ ಎನ್ ಸಿಬಿ ಡ್ರಗ್ ಸಂಚಿನ ಬಗ್ಗೆ ರಿಯಾ ಚಕ್ರವರ್ತಿಯನ್ನು ತನಿಖೆಗೆ ಒಳಪಡಿಸಿರುವುದಾಗಿ ಹೇಳಿದೆ.
ಅಲ್ಲದೇ ಒಂದು ವೇಳೆ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಮಾನಸಿಕ ಒತ್ತಡಕ್ಕೆ ಒಳಗಾಗುವಂತೆ ರಿಯಾ ಚಕ್ರವರ್ತಿ ಕೈವಾಡ ಇದೆಯಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.ಆಕೆಯಿಂದಾಗಿಯೇ ಸುಶಾಂತ್ ಮಾದಕ ವ್ಯಸನಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳಲು ರಿಯಾ ಕಾರಣ ಎಂದು ಸುಶಾಂತ್ ಕುಟುಂಬಸ್ಥರು ಆರೋಪಿಸಿದ್ದು, ತನಿಖೆಯಿಂದ ಈ ಬಗ್ಗೆ ಸತ್ಯ ಹೊರಬರಲಿದೆ ಎಂದು ವರದಿ ತಿಳಿಸಿದೆ.
ಎನ್ ಸಿಬಿ ಈಗಾಗಲೇ ರಿಯಾ ಚಕ್ರವರ್ತಿ, ಶೋವಿಕ್, ಆಕೆಯ ಟ್ಯಾಲೆಂಟ್ ಮ್ಯಾನೇಜರ್ ಜಯಾ ಸಾಹಾ ಮತ್ತು ಗೋವಾ ಮೂಲದ ಹೋಟೆಲ್ ಉದ್ಯಮಿ ಗೌರವ್ ಆರ್ಯ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
ಡ್ರಗ್ಸ್ ಬಳಕೆ ಬಗ್ಗೆ ರಿಯಾ ಚಕ್ರವರ್ತಿ ಮತ್ತು ಗೌರವ್ ಆರ್ಯ ನಡುವೆ ವಾಟ್ಸಪ್ ಸಂದೇಶಗಳ ಮಾತುಕತೆ ನಡೆದಿದೆ. ಅಷ್ಟೇ ಅಲ್ಲ ಸುಶಾಂತ್ ಪ್ರಕರಣದಲ್ಲಿ ಡ್ರಗ್ ಜಾಲದ ಸಂಚಿನ ಬಗ್ಗೆ ಆಕೆ ಡಿಲೀಟ್ ಮಾಡಿರುವ ವಾಟ್ಸಪ್ ಚಾಟ್ಸ್ ಪರೋಕ್ಷ ಸುಳಿವು ನೀಡಿರುವುದಾಗಿ ತಿಳಿಸಿದೆ.
ಸೋಮವಾರ ಮತ್ತು ಮಂಗಳವಾರ ವಿಚಾರಣೆಗೆ ಹಾಜರಾಗಿ ಎಂದು ಜಾರಿ ನಿರ್ದೇಶನಾಲಯ ಗೌರವ್ ಆರ್ಯಗೆ ಸಮನ್ಸ್ ಜಾರಿ ಮಾಡಿದೆ. ಪಿಎಂಎಲ್ ಎ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ಗೌರವ್ ಆರ್ಯ ಹೇಳಿಕೆ ದಾಖಲಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ನಾನು ಯಾವತ್ತೂ ಸುಶಾಂತ್ ಸಿಂಗ್ ಅವರನ್ನು ಭೇಟಿಯಾಗಿಲ್ಲ ಎಂದು ತಿಳಿಸಿರುವ ಗೌರವ್ ಆರ್ಯ, 2017ರಲ್ಲಿ ರಿಯಾ ಚಕ್ರವರ್ತಿಯನ್ನು ಭೇಟಿ ಮಾಡಿರುವುದಾಗಿ ಗೌರವ್ ತಿಳಿಸಿದ್ದು, ಸುಶಾಂತ್ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿರುವುದಾಗಿ ವರದಿ ವಿವರಿಸಿದೆ.