ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೋವಿಕ್ ಚಕ್ರವರ್ತಿಯ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ಸ್ ಕೋರ್ಟ್ ಶುಕ್ರವಾರ (ಸೆಪ್ಟೆಂಬರ್ 11, 2020) ವಜಾಗೊಳಿಸಿದೆ.
ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಡ್ರಗ್ಸ್ ಜಾಲದ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಎನ್ ಸಿಬಿ ಇದೀಗ ರಿಯಾ ವಿರುದ್ಧ ಮಾದಕ ವಸ್ತು ನಿಯಂತ್ರಣ ಕಾಯ್ದೆ(ಎನ್ ಡಿಪಿಎಸ್)ಯಡಿ ದೂರು ದಾಖಲಿಸಿತ್ತು.
ವರದಿಯ ಪ್ರಕಾರ ರಿಯಾ ಚಕ್ರವರ್ತಿ ಸೇರಿದಂತೆ ಎಲ್ಲಾ ಆರು ಮಂದಿಯ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ ಎಂದು ತಿಳಿಸಿದೆ. ಎನ್ ಸಿಬಿ ಅಧಿಕಾರಿಗಳು ಸತತ ಮೂರು ದಿನಗಳ ಕಾಲ ವಿಚಾರಣೆ ನಡೆಸಿದ್ದ ನಂತರ ರಿಯಾ ಚಕ್ರವರ್ತಿ ಹಾಗೂ ಸಹೋದರ ಶೋವಿಕ್ ನನ್ನು ಮಂಗಳವಾರ ಬಂಧಿಸಿದ್ದರು. ಇದಕ್ಕೂ ಮುನ್ನ ಸುಶಾಂತ್ ಸಿಂಗ್ ಇಬ್ಬರು ಆಪ್ತರನ್ನು ಎನ್ ಸಿಬಿ ಬಂಧಿಸಿತ್ತು.
ಇದನ್ನೂ ಓದಿ: ರಿಯಾ ಚಕ್ರವರ್ತಿಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನ, ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್
ಈ ಪ್ರಕರಣದಲ್ಲಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವುದಾಗಿ ಆರೋಪಿಸಿದ್ದ ರಿಯಾ ಚಕ್ರವರ್ತಿ ಸ್ಥಳೀಯ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿರುವುದಾಗಿ ವರದಿ ಹೇಳಿದೆ. ಜಾರಿ ನಿರ್ದೇಶನಾಲಯದಿಂದ ಅಧಿಕೃತವಾಗಿ ಮಾತುಕತೆ ನಡೆದ ನಂತರ ಎನ್ ಸಿಬಿ ತನಿಖೆಯನ್ನು ಕೈಗೆತ್ತಿಕೊಂಡಿತ್ತು.
ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಭಾರೀ ಪ್ರಮಾಣದ ಡ್ರಗ್ಸ್ ಬಳಕೆ, ಸಾಗಾಟ, ಸೇವನೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಎನ್ ಸಿಬಿ ತನಿಖೆಯನ್ನು ಚುರುಕುಗೊಳಿಸಿತ್ತು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ನಟ ಸುಶಾಂತ್ ಸಾವಿಗಿಂತ ಮೊದಲು “ರಿಯಾ ಚಕ್ರವರ್ತಿ” ಮನೆಯಿಂದ ಹೊರಬಿದ್ದಿದ್ದೇಕೆ?