ಬೆಂಗಳೂರು: ಸಂಕ್ರಾಂತಿ ಪ್ರಯುಕ್ತ ಗುಟ್ಟಹಳ್ಳಿಯ ಇತಿಹಾಸ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸಂಕ್ರಾಂತಿಯ ವಿಶೇಷ ಪೂಜೆ ನಡೆಯಿತು. ಸಂಜೆ ಸೂರ್ಯನ ಕಿರಣಗಳು ಶಿವಲಿಂಗ ಸ್ಪರ್ಶಿಸಿದವು. ಈ ವೇಳೆ ದೇವಾಲಯ ಮತ್ತು ಮುಂಜಾನೆಯಿಂದ ರಾತ್ರಿವರೆಗೆ ವಿವಿಧ ಪೂಜೆ ಪುನಸ್ಕಾರಗಳು ನೆರವೇರಿದವು. ಮುಂಜಾನೆಯೇ ಭಕ್ತಲೋಕ ಮಹಾದೇವನ ದರ್ಶನ ಪಡೆದು ಪುನೀತವಾಯಿತು.
ಅಪೂರ್ವ ಕ್ಷಣ: ಸಂಜೆ ವೇಳೆ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯನ ರಶ್ಮಿ ಈಶ್ವರನ ಲಿಂಗದ ಮೇಲೆ
ಬೀಳುವ ಹಿನ್ನೆಲೆಯಲ್ಲಿ ಇದನ್ನು ಕಣ್ತುಂಬಿ ಕೊಳ್ಳಲು ಕಾತರುರರಾಗಿದ್ದ ಭಕ್ತರ ಸಂಖ್ಯೆ ದೊಡ್ಡ ಸಾಲಿನಲ್ಲಿ ನಿಂತಿತ್ತು. ಬೆಳಗ್ಗೆ ಬೆರಳೆಣಿಕೆಯಷ್ಟಿದ್ದ ಭಕ್ತರ ಸಂಖ್ಯೆ ಮಧ್ಯಾಹ್ನವಾಗು ತ್ತಿದಂತೆ ಹೆಚ್ಚಾಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ಆಗಮನವಾಗುವ ನಿರೀಕ್ಷೆ ಯಿದ್ದ ಹಿನ್ನೆಲೆಯಲ್ಲಿ ಸುಗಮ ದರ್ಶನಕ್ಕಾಗಿ ಎಲ್ಲಾ ರೀತಿಯಲ್ಲೂ ಸಿದ್ಧವಾಗಿತ್ತು.
ಹಲವರು ಸರದಿಯ ಸಾಲಿನಲ್ಲಿ ನಿಂತು ಹತ್ತಿರದಿಂದಲೇ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವುದನ್ನು ಕಣ್ತುಂಬಿಕೊಂಡರೆ. ಇನ್ನೂ ಕೆಲವರು ದೊಡ್ಡ ಟಿವಿ ಪರದೆಯ ಮೇಲೆ ಮೂಡಿ ಬರುತ್ತಿದ ದೃಶ್ಯಗಳನ್ನು ನೋಡಿ ಪುನೀತರಾದರು.
ಉತ್ತರಾಯಣ ಪುಣ್ಯಕಾಲ: ಈ ವರ್ಷ ಸಂಕ್ರಾಂತಿ ಜನವರಿ 15ಕ್ಕೆ ಇದೆ. ಆದರೆ ಸೂರ್ಯನ ಕಿರಣ ಪ್ರತಿವರ್ಷದಂತೆ ಜ.14 ರಂದೇ ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಸ್ಪರ್ಶವಾಯಿತು. ಸಂಜೆ 5.20ರ ವೇಳೆ ಸೂರ್ಯನ ಕಿರಣಗಳು ದೇವಸ್ಥಾನದ ದಕ್ಷಿಣ ಕಿಟಕಿಯ ಮೂಲಕ ಹಾದು ಬಸವಣ್ಣನ ಕೋಡುಗಳ ಮಧ್ಯದಿಂದ ಶಿವ ನನ್ನು ಸ್ಪರ್ಶಿಸಿದವು.ಈ ಅಪರೂಪದ ಕ್ಷಣವನ್ನು ಉತ್ತರಾಯಣ ಪುಣ್ಯಕಾಲ ಪ್ರಾರಂಭವೆಂದು ತಿಳಿಯಲಾಗುವುದು.
ಇದೊಂದು ಅಪರೂಪದ ಕ್ಷಣ ಇದನ್ನು ಕಣ್ತುಂಬಿಕೊಂಡರೆ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ದೇವರ ದರ್ಶನ ಪಡೆಯಲು ಬಂದಿದ್ದೇವೆ.
●ಹನುಮಂತರಾಯಪ್ಪ, ಬನ್ನೇರುಘಟ್ಟದ ನಿವಾಸಿ
ನನಗೆ ಸಂಜೆ ವೇಳೆ ಮಾರುದ್ದ ಸಾಲಿನಲ್ಲಿ ನಿಲ್ಲಲು ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರೆ ಜೊತೆಗೆ ಬೆಳಗ್ಗೆಯೇ ಈಶ್ವರನ ದರ್ಶನ ಪಡೆಯಲು ಬಂದಿದ್ದೇನೆ.
●ರುಕ್ಷ್ಮೀಣಮ್ಮ , ಹನುಮಂತನ ನಗರದ ಹಿರಿಯ ವೃದ್ಧೆ