ದುಬೈ: ಪಾಕಿಸ್ತಾನದ ವಿಕೆಟ್‌ಕೀಪರ್-ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಬುಧವಾರ (ಸೆ 7) ವಾರದ ನವೀಕರಣದ ನಂತರ ಐಸಿಸಿ ಪುರುಷರ ಟಿ 20 ಆಟಗಾರರ ಶ್ರೇಯಾಂಕದಲ್ಲಿ ಬ್ಯಾಟ್ಸ್ ಮ್ಯಾನ್ ಗಳ ಪೈಕಿ ತಮ್ಮ ಆರಂಭಿಕ ಪಾಲುದಾರ ಮತ್ತು ನಾಯಕ ಬಾಬರ್ ಅಜಮ್ ಅವರನ್ನು ಹಿಂದಿಕ್ಕಿದ್ದಾರೆ.
ದುಬೈನಲ್ಲಿ ನಡೆದ ಸೂಪರ್ ಫೋರ್ ಪಂದ್ಯದಲ್ಲಿ ಭಾರತದ ವಿರುದ್ಧ 51 ಎಸೆತಗಳಲ್ಲಿ 71 ರನ್, ಗ್ರೂಪ್ ಎ ಪಂದ್ಯದಲ್ಲಿ 57 ಎಸೆತಗಳಲ್ಲಿ 78 ರನ್ ಗಳಿಸಿದ ರಿಜ್ವಾನ್ ಪ್ಲೇಯರ್ ಆಫ್ ದಿ ಮ್ಯಾಚ್ ಆಗುವ ಮೂಲಕ ಮೊದಲ ಬಾರಿಗೆ ಉನ್ನತ ಸ್ಥಾನವನ್ನು ಪಡೆದುಕೊಂಡರು.
ಒಟ್ಟು 1,155 ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದ ಬಾಬರ್ ಮತ್ತು 313 ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದ ಮಿಸ್ಬಾ-ಉಲ್-ಹಕ್ ನಂತರ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದ ಪಾಕಿಸ್ತಾನದ ಮೂರನೇ ಬ್ಯಾಟ್ಸ್ ಮ್ಯಾನ್ ರಿಜ್ವಾನ್ ಅವರಾಗಿದ್ದಾರೆ.
ಏಷ್ಯಾಕಪ್‌ನಲ್ಲಿ ಕೆಲವು ಉತ್ತಮ ಪ್ರದರ್ಶನಗಳ ನಂತರ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದ ಆಟಗಾರರು ಉತ್ತಮ ಪ್ರಗತಿ ಸಾಧಿಸಿದ್ದು, ಭಾರತದ ಸೂರ್ಯಕುಮಾರ್ ಯಾದವ್ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ.
ಬಾಬರ್ ಅಜಮ್ (ಪಾಕಿಸ್ತಾನ) – 794 ಪಾಯಿಂಟ್ಸ್ ಗಳೊಂದಿಗೆ 2 ನೇ ಸ್ಥಾನ, ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ 792 ಪಾಯಿಂಟ್ಸ್ ಗಳೊಂದಿಗೆ 3 ನೇ ಸ್ಥಾನ, 775 ಪಾಯಿಂಟ್ಸ್ ಗಳೊಂದಿಗೆ ಸೂರ್ಯಕುಮಾರ್ ಯಾದವ್ 4 ನೇ ಸ್ಥಾನ, 731 ಪಾಯಿಂಟ್ಸ್ ಗಳೊಂದಿಗೆ ಇಂಗ್ಲೆಂಡ್ ನ ಡೇವಿಡ್ ಮಲಾನ್ 5ನೇ ಸ್ಥಾನದಲ್ಲಿದ್ದಾರೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಸೂಪರ್ ಫೋರ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 72 ರನ್ ಗಳಿಸಿ ನಾಲ್ಕು ಸ್ಥಾನಗಳ ಮುಂದೆ ಬಂದು 13 ನೇ ಸ್ಥಾನಕ್ಕೆ ತಲುಪಿದ್ದಾರೆ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ 60 ರನ್ ಗಳಿಸಿ ನಾಲ್ಕು ಸ್ಥಾನಗಳನ್ನು ಗಳಿಸಿ ಪಟ್ಟಿಯಲ್ಲಿ 29 ನೇ ಸ್ಥಾನದಲ್ಲಿದ್ದಾರೆ.