ಮುಂಬೈ: ವಾಂಖೆಡೆ ಅಂಗಳದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಮುಖಾಮುಖಿಯಲ್ಲಿ ರೋಹಿತ್ ಬಳಗ ಭರ್ಜರಿ ಜಯ ಸಾಧಿಸಿದೆ. ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಅಬ್ಬರ ಮುಂದೆ ಆರ್ ಸಿಬಿ ಬೌಲರ್ ಗಳು ಮಂಕಾದರು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 199 ರನ್ ಕಲೆ ಹಾಕಿತು. ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ಕೇವಲ 16.3 ಓವರ್ ನಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 200 ರನ್ ಮಾಡಿ ವಿಜಯ ಸಾಧಿಸಿತು.
52 ರನ್ ಗೆ ಎರಡು ವಿಕೆಟ್ ಕಳೆದುಕೊಂಡಾಗ ಕ್ರೀಸ್ ಗೆ ಬಂದ ಸೂರ್ಯಕುಮಾರ್, ಕೇವಲ 35 ಎಸೆತದಲ್ಲಿ 83 ರನ್ ಚಚ್ಚಿದರು. ಆರು ಸಿಕ್ಸರ್ ಮತ್ತು ಏಳು ಬೌಂಡರಿ ಬಾರಿಸಿದ ಸೂರ್ಯ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.
ಇದೇ ವೇಳೆ ಸೂರ್ಯಕುಮಾರ್ ಯಾದವ್ ಅವರು ಐಪಿಎಲ್ ನಲ್ಲಿ ಮೂರು ಸಾವಿರ ರನ್ ಗಡಿ ದಾಟಿದರು. 119ನೇ ಐಪಿಎಲ್ ಇನ್ನಿಂಗ್ಸ್ ನಲ್ಲಿ ಸೂರ್ಯ ಈ ಮೈಲಿಗಲ್ಲು ದಾಟಿದರು. ಅಲ್ಲದೆ ಇದೇ ಸಮಯದಲ್ಲಿ ಐಪಿಎಲ್ ನಲ್ಲಿ ನೂರು ಸಿಕ್ಸರ್ ಬಾರಿಸಿದ ದಾಖಲೆಯೂ ಬರೆದರು. ಸದ್ಯ ಸೂರ್ಯ ಹೆಸರಿನಲ್ಲಿ 102 ಸಿಕ್ಸರ್ ಗಳಿವೆ.