ನವದೆಹಲಿ: ಐಸಿಸಿ ಟಿ 20 ರ‍್ಯಾಂಕಿಂಗ್ ನಲ್ಲಿ ಭಾರತದ ಬ್ಯಾಟ್ಸ್ ಮ್ಯಾನ್ ಸೂರ್ಯಕುಮಾರ್ ಯಾದವ್ ಹೊಸ ಸಾಧನೆ ಮಾಡಿದ್ದು, ನಂಬರ್ 1 ಆಗಿ ಹೊರ ಹೊಮ್ಮಿದ್ದಾರೆ.
ಟಿ 20 ವಿಶ್ವಕಪ್ ನಲ್ಲಿ ಎರಡು ಅರ್ಧ ಶತಕಗಳನ್ನು ಸಿಡಿಸಿದ ನಂತರ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ಥಾನದ ಮೊಹಮ್ಮದ್ ರಿಜ್ವಾನ್(2) ಮತ್ತು ನ್ಯೂಜಿ ಲ್ಯಾಂಡ್ ನ ಡೆವೊನ್ ಕಾನ್ವೆ(3) ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಆಕ್ರಮಿಸಿಕೊಂಡಿದ್ದಾರೆ.
ಯಾದವ್ ಸಿಡ್ನಿಯಲ್ಲಿ ನೆದರ್ಲೆಂಡ್ ವಿರುದ್ಧ 25 ಎಸೆತಗಳಲ್ಲಿ ಔಟಾಗದೆ 51 ರನ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಪರ್ತ್‌ನಲ್ಲಿ 40 ಎಸೆತಗಳಲ್ಲಿ 68 ರನ್ ಗಳಿಸಿದ್ದರು.
ಯಾದವ್ ಟಿ 20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ 23 ನೇ ಆಟಗಾರ ಮತ್ತು ಸೆಪ್ಟೆಂಬರ್ 2014 ರಿಂದ ಡಿಸೆಂಬರ್ 2017 ರವರೆಗೆ ವಿವಿಧ ಅವಧಿಗಳಲ್ಲಿ 1,013 ದಿನಗಳನ್ನು ಅಗ್ರಸ್ಥಾನದಲ್ಲಿ ಕಳೆದ ವಿರಾಟ್ ಕೊಹ್ಲಿ ನಂತರ ಟಿ20 ಕ್ರಿಕೆಟ್‌ನಲ್ಲಿ ನಂ. 1 ತಲುಪಿದ ಎರಡನೇ ಭಾರತೀಯ ಆಟಗಾರರಾಗಿದ್ದಾರೆ.
ಯಾದವ್ ಅವರ 863 ರೇಟಿಂಗ್ ಭಾರತೀಯ ಆಟಗಾರನೊಬ್ಬನ ಎರಡನೇ ಅತ್ಯುತ್ತಮ ಅಂಕಗಳಾಗಿವೆ, ಸೆಪ್ಟೆಂಬರ್ 2014 ರಲ್ಲಿ ಕೊಹ್ಲಿ ಗಳಿಸಿದ 897 ಅಂಕಗಳು ಅತ್ಯಧಿಕವಾಗಿದೆ.
ವಿರಾಟ್ ಕೊಹ್ಲಿ 638 ರೇಟಿಂಗ್ ಪಾಯಿಂಟ್ಸ್ ಗಳೊಂದಿಗೆ 10 ನೇ ರ‍್ಯಾಂಕ್ ಪಡೆದಿದ್ದಾರೆ. ನಾಯಕ ರೋಹಿತ್ ಶರ್ಮಾ 15 ನೇ ಸ್ಥಾನದಲ್ಲಿದ್ದಾರೆ. ಆಲ್ ರೌಂಡರ್ ಗಳ ಪೈಕಿ ಹಾರ್ದಿಕ್ ಪಂದ್ಯ 3 ನೇ ಸ್ಥಾನದಲ್ಲಿದ್ದಾರೆ.