Advertisement

ಜಗದ ಅಧಿನಾಯಕ ಸೂರ್ಯ

01:23 AM Feb 19, 2021 | Team Udayavani |

ಇಂದು ರಥಸಪ್ತಮಿ. ಸೂರ್ಯ ಪಥ ಬದಲಿಸುವ ದಿನ. ಈ ನಿಮಿತ್ತ ಆರೋಗ್ಯದಾಯಕನಾದ ಭಾಸ್ಕರನನ್ನು ನಮಿಸುವ ಕುರಿತು ಈ ಲೇಖನ.

Advertisement

ಜಗತ್ತಿನ ಸಮಸ್ತ ಜೀವಗಳ ಅಸ್ತಿತ್ವಕ್ಕೆ ಕಾರಣವಾಗಿರುವ ಸೂರ್ಯನಿಗೆ ಯಾವುದೇ ಜಾತಿ, ಧರ್ಮವಿಲ್ಲ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುವ ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಸೂರ್ಯ ನಮಸ್ಕಾರ. ಇದಕ್ಕೆ ವೇದ ಕಾಲದಿಂದಲೂ ತನ್ನದೇ ಆದ ಮಹತ್ವವಿದೆ.

ಸಪ್ತ ಕುದುರೆಗಳ ರಥವನ್ನೇರಿದ ಸೂರ್ಯ ತನ್ನ ಪಥವನ್ನು ಉತ್ತರದತ್ತ ತಿರುಗಿಸಿ, ಹೊರಡುವ ಪರ್ವಕಾಲವೇ ಈ ರಥಸಪ್ತಮಿ. ಜಗದ ಅಧಿನಾಯಕ ಸೂರ್ಯ. ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿ ಈ ದಿನ ಸೂರ್ಯೋದಯದ ಸಮಯದಲ್ಲಿ ನದಿಯಲ್ಲಿ ಸ್ನಾನ ಮಾಡಿ, ಸೂರ್ಯನಿಗೆ ಅರ್ಘ್ಯ ನೀಡಿದರೆ ಸಕಲ ದುಃಖಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯೂ ಇದೆ. ರಥಸಪ್ತಮಿಯ ಅನಂತರ ಚಳಿ ಕಡಿಮೆಯಾಗಿ ಬಿಸಿಲಿನ ಪ್ರಖರತೆ ಹೆಚ್ಚುತ್ತದೆ.

ಸೂರ್ಯನ ಪೂಜೆ ಎಕೆ? : ಸೂರ್ಯ ಆರೋಗ್ಯ ಮತ್ತು ಐಶ್ವರ್ಯ ದತ್ತ ಎಂಬ ಕಾರಣಕ್ಕೆ ಆತನನ್ನು ಭಕ್ತಿ- ಭಾವದಿಂದ ಪೂಜಿಸಲಾಗುತ್ತದೆ. ಅಲ್ಲದೆ ಬೆಳಗ್ಗಿನ ಸೂರ್ಯನ ಎಳೆಬಿಸಿಲಲ್ಲಿ ದೇಹಕ್ಕೆ ಶಕ್ತಿ ನೀಡುವ ಅಂಶಗಳಿವೆ ಎಂಬುದೂ ವೈಜ್ಞಾನಿಕವಾಗಿ ಸಾಬೀತಾಗಿದೆ. ದೇಹಕ್ಕೆ ದೇಹಕ್ಕೆ ಅತ್ಯಗ್ಯವಾದ ವಿಟಮಿನ್‌ ಡಿ ಅಂಶ ಸೂರ್ಯಕಿರಣದಲ್ಲಿ ಹೇರಳವಾಗಿರುತ್ತದೆ. ಆದ್ದರಿಂದ ಸೂರ್ಯನನ್ನು ಪೂಜಿಸಲಾಗುತ್ತದೆ.

ಸೂರ್ಯ ನಮಸ್ಕಾರ ಎಂದರೆ ಆಸನ ಮತ್ತು ಪ್ರಾಣಾಯಾಮಗಳ ಮಿಶ್ರಣ. ದೇಹದ ಜಡತ್ವ ಹೋಗಿ, ಮೃದುತ್ವ , ಲಘುತ್ವ ಬರಲು ಸೂರ್ಯ ನಮಸ್ಕಾರ ಸಹಕಾರಿಯಾಗಿದೆ. ಬೆಳಿಗ್ಗೆ ಎದ್ದ ಕೂಡಲೇ ನೇರವಾಗಿ ಯೋಗ ಮಾಡಲು ಕಷ್ಟವಾಗುತ್ತದೆ. ಆರಂಭದಲ್ಲಿ ಸರಳ ವ್ಯಾಯಾಮ ಆನಂತರ ಸೂರ್ಯ ನಮಸ್ಕಾರ ಮಾಡಬೇಕು. ಜ್ಞಾನಿಗಳು ಸೂರ್ಯದೇವನ ಅನುಗ್ರಹವಿದ್ದರೆ ಆರೋಗ್ಯ ಭಾಗ್ಯ ಲಭಿಸುತ್ತದೆ ಎಂದಿದ್ದಾರೆ.

Advertisement

ಮಾನವನ ದೈನಂದಿನ ಚಟುವಟಿಕೆ ಆರಂಭವಾಗುವುದೇ ಸೂರ್ಯೋದಯದ ವೇಳೆ. ಆದ್ದರಿಂದ ಭಾಸ್ಕರನಿಗೆ ನಮಿಸುತ್ತಾ ಸೂರ್ಯದೇವನ ಮಂತ್ರಗಳನ್ನು ಹೇಳುತ್ತಾ ಸೂರ್ಯ ನಮಸ್ಕಾರ ಮಾಡುವುದು ನಮ್ಮ ಕರ್ತವ್ಯ.

ಸೂರ್ಯ ನಮಸ್ಕಾರ ಮಾಡುವಲ್ಲಿ ಮುಖ್ಯವಾಗಿ ಎರಡು ಪ್ರಕಾರಗಳಿವೆ.

12 ಹಂತಗಳಲ್ಲಿ (ಶಶಾಂಕಾಸನ ಸಹಿತ) 10 ಹಂತಗಳಲ್ಲಿ (ಶಶಾಂಕಾಸನ ರಹಿತ)
ಸೂರ್ಯ ನಮಸ್ಕಾರಗಳನ್ನು ಸಾಮೂಹಿಕವಾಗಿ ಅಭ್ಯಾಸ ಮಾಡುವುದರಿಂದ ಆನಂದ ಉತ್ಸಾಹ ಹೆಚ್ಚು ಒದಗಿ ಬರುತ್ತದೆ. ಸೂರ್ಯ ನಮಸ್ಕಾರ ಅಭ್ಯಾಸ ಮಾಡಲು ಸ್ವತ್ಛವಾದ ಗಾಳಿ ಬೆಳಕು ಇರಬೇಕು ಮತ್ತು ಶಾಂತ ಸ್ಥಳದಲ್ಲಿ ಜಮಖಾನ ಹಾಸಿ ಅಭ್ಯಾಸ ಮಾಡಬೇಕು. ಸೂರ್ಯ ನಮಸ್ಕಾರವನ್ನು ಯಾವಾಗಲೂ ಸೂರ್ಯೋದಯ (ಪೂರ್ವ) ಅಥವಾ ಸೂರ್ಯಾಸ್ತದ (ಪಶ್ಚಿಮ) ದಿಕ್ಕಿನಲ್ಲಿ ಮುಖಮಾಡಿ ಮಾಡಲಾಗುವುದು. ಅಭ್ಯಾಸ ಆದ ಮೇಲೆ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬೇಕು.

ಸೂರ್ಯ ನಮಸ್ಕಾರದ ಭಂಗಿಯಲ್ಲಿ ಕೆಲವು ಆಸನಗಳು ಬರುತ್ತವೆ.

ನಮಸ್ಕಾರ ಮುದ್ರೆ 2. ಅರ್ಧಚಕ್ರಾಸನ(ಊರ್ಧ್ವಸನ) 3.ಉತ್ತಾನಾಸನ
4.ಏಕಪಾದ ಪ್ರಸರಣಾಸನ 5. ಚತುರಂಗ ದಂಡಾಸನ ( ದ್ವಿಪಾದ ಪ್ರಸರಣಾಸನ)
6. ಶಶಾಂಕಾಸನ 7. ಸಾಷ್ಟಾಂಗ ನಮನ(ಅಷ್ಟಾಂಗ ನಮಸ್ಕಾರ) 8 ಊರ್ಧ್ವ ಮುಖ ಶ್ವಾನಾಸನ 9. ಅಧೋಮುಖ ಶ್ವಾನಾಸನ

ಸೂರ್ಯ ನಮಸ್ಕಾರದ ಪ್ರಯೋಜನಗಳು: ದೈಹಿಕ ನಿಲುವು ಮತ್ತು ಚಲನಾ ವ್ಯವಸ್ಥೆ ಸುಗಮವಾಗುವುದು. ಹೃದಯ ಕ್ರಿಯೆ ಮತ್ತು ರಕ್ತ ಚಲನೆ ಸುಸೂತ್ರವಾ ಗುವುದು. ಜೀರ್ಣಕ್ರಿಯೆ ಆರೋಗ್ಯಕರವಾಗುವುದು. ಶ್ವಾಸಕೋಶಗಳು ಬಲಿಷ್ಠವಾ ಗುವುವು. ನರವ್ಯೂಹ ಮತ್ತು ಮೆದುಳು ಚುರುಕಾಗುವುದು. ಜ್ಞಾನೇಂದ್ರಿಯಗಳು ಚುರುಕುಗೊಳ್ಳುವುವು, ಕ್ರಿಯಾಶೀಲವಾಗುವುವು. ಶರೀರ ಮೃದುತ್ವ, ಲಘುತ್ವ ಉಂಟಾಗಿ ಮಾನಸಿಕ ಜಡತ್ವ ಮಾಯವಾಗುವುದು.

– ಗೋಪಾಲಕೃಷ್ಣ ದೇಲಂಪಾಡಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next