ಹೈದರಾಬಾದ್: ಟಾಲಿವುಡ್ ಸಿನಿರಂಗದ ಜನಪ್ರಿಯ ನಟ, ನಿರ್ದೇಶಕ ಸೂರ್ಯ ಕಿರಣ್ (48) ಸೋಮವಾರ(ಮಾ.11 ರಂದು) ನಿಧನ ಹೊಂದಿದರು.
ಕಳೆದ ಕೆಲ ಸಮಯದಿಂದ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಾ.11 ರಂದು ಚೆನ್ನೈನ ತಮ್ಮ ನಿವಾಸದಲ್ಲಿ ಅವರು ನಿಧನರಾದರು ಎಂದು ವರದಿ ತಿಳಿಸಿದೆ.
ಸಿನಿಪಯಣ.. ಬಾಲನಟನಾಗಿ ಬಣ್ಣದ ಲೋಕಕ್ಕೆ ಎಂಟ್ರಿಯಾದ ಅವರು,1978 ರಲ್ಲಿ ಬಂದ ʼಸ್ನೇಹಿಕನ್ ಒರು ಪೆನ್ನುʼ ಎನ್ನುವ ಮಲಯಾಳಂ ಸಿನಿಮಾದಲ್ಲಿ ನಟಿಸಿ ಸಿನಿಮಾರಂಗಕ್ಕೆ ಬಂದರು. ಇದಾದ ಬಳಿಕ ಮಲಯಾಳಂನಲ್ಲಿ ಮೊದಲ ಬಾರಿ 3ಡಿ ಸ್ವರೂಪದಲ್ಲಿ ಚಿತ್ರೀಕರಿಸಲಾದ ಫ್ಯಾಂಟಸಿ ಚಿತ್ರ ʼಮೈ ಡಿಯರ್ ಕುಟ್ಟಿಚತನ್ʼ ನಲ್ಲಿನ ಅವರ ಪ್ರಧಾನ ಪಾತ್ರದ ಅಭಿನಯ ಜನಪ್ರಿಯತೆಗೆ ಕಾರಣವಾಯಿತು.
ಬಾಲನಟನಾಗಿದ್ದಾಗಲೇ ಸೂರ್ಯ ಕಿರಣ್ ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡಿದ್ದರು. ಕಮಲ್ ಹಾಸನ್ ಅವರ ʼಕಡಲ್ ಮೀಂಗಲ್ʼ, ರಜಿನಿಕಾಂತ್ ಅವರ ʼರಂಗ, ʼಪಡಿಕ್ಕಡವನ್ʼ, ʼಮೌನ ಗೀತಂಗಲ್ʼ ಸಿನಿಮಾದಲ್ಲಿ ನಟಿಸಿದ್ದರು. ಅಮಿತಾಭ್ ಬಚ್ಚನ್, ಕಮಲ್ ಹಾಸನ್, ರಜಿನಿಕಾಂತ್, ಮಾಧವಿ ಮತ್ತು ಪೂನಂ ಧಿಲ್ಲೋನ್ ಒಳಗೊಂಡ ಬಾಲಿವುಡ್ ಚಿತ್ರ ‘ಗೆರಾಫ್ತಾರ್’ ಸಿನಿಮಾದಲ್ಲೂ ಕಿರಣ್ ನಟಿಸಿ ಗಮನ ಸೆಳೆದಿದ್ದರು.
ನಟನೆ ಬಳಿಕ ನಿರ್ದೇಶನಕ್ಕಿಳಿದ ಕಿರಣ್ ಸೂರ್ಯ ʼಸತ್ಯಂʼ , ʼಧನ 51ʼ ಸಿನಿಮಾಗಳನ್ನು ಮಾಡಿ ನಿರ್ದೇಶನದಲ್ಲೂ ಸೈ ಎನ್ನಿಸಿಕೊಂಡರು. ʼಬ್ರಹ್ಮಾಸ್ತ್ರಂʼ (2006), ʼರಾಜು ಭಾಯಿʼ (2007) ಮತ್ತು ʼಚಾಪ್ಟರ್ʼ 6 (2010) ಸಿನಿಮಾಗಳನ್ನು ಮಾಡಿದರು. ಆದರೆ ಈ ಸಿನಿಮಾಗಳು ಅಷ್ಟಾಗಿ ಯಶಸ್ಸು ಕಂಡಿಲ್ಲ.
ಸಿನಿಮಾರಂಗ ವಿರಾಮ ಪಡೆದುಕೊಂಡ ಬಳಿಕ ಅವರು, ಮತ್ತೆ ಸುದ್ದಿಯಾದದ್ದು 2020 ರಲ್ಲಿ ಬಿಗ್ ಬಾಸ್ ತೆಲುಗು -4 ನಲ್ಲಿ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಬರುವ ಮೂಲಕ. ಆದರೆ ಕೆಲವೇ ದಿನಗಳಲ್ಲಿ ಅವರು ಎಲಿಮಿನೇಟ್ ಆದರು.
ಸೂರ್ಯ ಕಿರಣ್ ನಟಿ ಕಾವೇರಿ ಅಲಿಯಾಸ್ ಕಲ್ಯಾಣಿ ಅವರನ್ನು ಮದುವೆಯಾಗಿದ್ದರು. ಆದರೆ, ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ನಂತರ, ಕಿರಣ್ ಕಾವೇರಿ ಅವರೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಬಹಿರಂಗಪಡಿಸಿದ್ದರು.
ಕಿರಣ್ ಅವರ ಇತ್ತೀಚಿನ ಚಿತ್ರ ʼಅರಸಿʼ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಕೂಡ ನಾಯಕಿಯಾಗಿ ನಟಿಸಿದ್ದಾರೆ.