Advertisement
ಕಳೆದ ಒಂದು ವರ್ಷದ ಅಂಕಿಅಂಶಗಳನ್ನು ಗಮನಿಸಿದರೆ ಅತ್ಯಂತ ಅವಧಿಪೂರ್ವವಾಗಿ ಮತ್ತು ತೀರಾ ಅವಧಿಪೂರ್ವವಾಗಿ ಜನಿಸುವ ಶಿಶುಗಳ ಬದುಕುಳಿಯುವಿಕೆ ಪ್ರಮಾಣವು ಶೇ. 75ರಷ್ಟಿದ್ದು, ಇದು ಈ ವಿಭಾಗದ ವಿಶ್ವಾಸಾರ್ಹತೆಯನ್ನು ಸೂಚಿಸುತ್ತದೆಯಲ್ಲದೆ, ಕಳೆದ ಹಲವು ವರ್ಷಗಳಿಂದೀಚೆಗೆ ಎನ್‌ಐಸಿಯು ವಿಭಾಗವನ್ನು ಪ್ರಸ್ತುತ ಸ್ವತಂತ್ರ ವಿಭಾಗವಾಗಿ ಬೆಳೆಸಿದ್ದರ ಹಿಂದಿರುವ ಅತ್ಯಂತ ಕಠಿನ ಪರಿಶ್ರಮವನ್ನು ಸೂಚಿಸುತ್ತದೆ.
Related Articles
Advertisement
ಸಾಮಾನ್ಯವಾಗಿ ನಮ್ಮ ದೇಶದಲ್ಲಿ 24 ವಾರಗಳ ಗರ್ಭಸ್ಥ ಶಿಶು ಅವಧಿಪೂರ್ವ ಜನನವಾದರೆ ಬದುಕುಳಿಯುವುದು ಕಾರ್ಯಸಾಧ್ಯವಲ್ಲ ಎಂದು ಪರಿಗಣಿಸಲ್ಪಡುತ್ತದೆಯಾದರೂ ಶಿಶುವಿನ ಹೆತ್ತವರ ಆಗ್ರಹದ ಮೇರೆಗೆ ನಾವು ನಮ್ಮ ಸಂಪೂರ್ಣ ಶ್ರಮ ವಹಿಸಿ ಕಾರ್ಯಪ್ರವೃತ್ತರಾದೆವು. ಪ್ರಸ್ತುತ ಶಿಶು 2.8 ತೂಕ ಗಳಿಸಿಕೊಂಡಿದ್ದು, ಹೆಚ್ಚು ಕಡಿಮೆ ಆಮ್ಲಜನಕದ ನೆರವಿಲ್ಲದೆ ಉಸಿರಾಡುತ್ತಿದೆ ಮತ್ತು ಶೀಘ್ರವೇ ಹೆತ್ತವರ ಜತೆಗೆ ಮನೆ ಸೇರಲಿದೆ. ಈ ಯಶಸ್ಸನ್ನು ಸಾಧಿಸಲು ನಮ್ಮ ವೈದ್ಯರು, ದಾದಿಯರು, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು ಚಿಕಿತ್ಸಕರು ಹಗಲಿರುಳು ಶ್ರಮಿಸಿದ್ದಾರೆ.
ಅತ್ಯಾಧುನಿಕ ತಾಂತ್ರಿಕ ಆರೈಕೆಯನ್ನು ಒದಗಿಸುವುದರ ಜತೆಗೆ ನಮ್ಮ ಎನ್‌ಐಸಿಯು ಸೌಲಭ್ಯವು ತಾಯಂದಿರು ಮಾತ್ರವಲ್ಲದೆ ತಂದೆ ಹಾಗೂ ಅಜ್ಜ-ಅಜ್ಜಿಯರಿಂದ ಕಾಂಗರೂ ಆರೈಕೆಯನ್ನು ಕೂಡ ಅನುಷ್ಠಾನಗೊಳಿಸುತ್ತಿದೆ. ಇದರಲ್ಲಿ ಆರೈಕೆದಾರರು ಎನ್ ಐಸಿಯುನಲ್ಲಿ ವೈದ್ಯಕೀಯ ತಂಡದ ಮೇಲ್ವಿಚಾರಣೆಯಡಿ ವಿಶೇಷ ಆರಾಮ ಕುರ್ಚಿಯಲ್ಲಿ ಕುಳಿತು ಸ್ಥಿರ ಆರೋಗ್ಯ ಹೊಂದಿರುವ ಅವಧಿಪೂರ್ವ ಶಿಶುವನ್ನು ಎದೆಯ ಮೇಲೆ ಮಲಗಿಸಿಕೊಂಡು ಕಾಂಗರೂ ಆರೈಕೆ ಒದಗಿಸುತ್ತಾರೆ. ಅವಧಿಪೂರ್ವ ಜನಿಸಿದ ಶಿಶುಗಳ ದೀರ್ಘಕಾಲೀನ ನರಶಾಸ್ತ್ರೀಯ ಬೆಳವಣಿಗೆಯಲ್ಲಿ ಇದು ಮಹತ್ವದ ಪಾತ್ರ ವಹಿಸುವುದರಿಂದ ಅವಧಿಪೂರ್ವ ಜನಿಸಿದ ಎಲ್ಲ ಶಿಶುಗಳಿಗೆ ದಿನವೊಂದಕ್ಕೆ ಕನಿಷ್ಠ 8 ತಾಸುಗಳ ಕಾಲ ಈ ಆರೈಕೆ ಒದಗಿಸಬೇಕು ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡುತ್ತದೆ.
ಅವಧಿಪೂರ್ವ ಜನಿಸಿದ ಎಲ್ಲ ಶಿಶುಗಳ ಕುಟುಂಬಗಳು ಶಿಶು ಆರೈಕೆಯಲ್ಲಿ ಸಕ್ರಿಯವಾಗಿ, ಸಂತೋಷದಿಂದ ಭಾಗವಹಿಸುವುದರಿಂದ ಕಸ್ತೂರ್ಬಾ ಆಸ್ಪತ್ರೆಯ ಎನ್‌ಐಸಿಯು ಕಾಂಗರೂ ಆರೈಕೆಯ ಈ ಪ್ರಮಾಣವನ್ನು ಶೇ. 90 ಪ್ರಕರಣಗಳಲ್ಲಿ ಸಾಧಿಸಲು ಶಕ್ತವಾಗಿದೆ. ನಮ್ಮ ಶಿಶುಗಳ ಕುಟುಂಬಗಳು ನಮ್ಮ ಮೇಲೆ ಇರಿಸಿರುವ ವಿಶ್ವಾಸ ಮತ್ತು ನಂಬಿಕೆಯೇ ನಮಗೆ ಅತ್ಯಂತ ಸ್ಪೂರ್ತಿದಾಯಕವಾಗಿದೆ ಎಂದು ವಿಭಾಗದ ಕಾಂಗರೂ ಆರೈಕೆಯ ಇನ್ ಚಾರ್ಜ್ ಆಗಿರುವ ಡಾ| ಶ್ರುತಿ ಭಾರದ್ವಾಜ್ ಹೇಳುತ್ತಾರೆ.
ಅವಧಿಪೂರ್ವ ಜನಿಸಿದ ಶಿಶುಗಳ ಸಹಿತ ಎಲ್ಲ ಶಿಶುಗಳಿಗೆ ತಾಯಂದಿರು ತಮ್ಮದೇ ಸ್ತನ್ಯವನ್ನು ಆಹಾರವಾಗಿ ಉಣಿಸುವುದನ್ನು ಕಸ್ತೂರ್ಬಾ ಆಸ್ಪತ್ರೆಯು ಸದಾ ಪ್ರೋತ್ಸಾಹಿಸುತ್ತದೆ. ಆಸ್ಪತ್ರೆಗೆ ನೂತನ ಮಾನವ ಎದೆಹಾಲು ಬ್ಯಾಂಕ್ ಮಂಜೂರುಗೊಂಡಿದ್ದು, ತಮ್ಮ ಅವಧಿಪೂರ್ವ ಶಿಶುವಿಗೆ ತಮ್ಮದೇ ಎದೆಹಾಲನ್ನು ಉಣಿಸಲು ಅಶಕ್ತರಾದ ತಾಯಂದಿರು ಪ್ಯಾಶ್ಚರೀಕೃತ ಮಾನವ ಎದೆಹಾಲನ್ನು ಒದಗಿಸುವುದಕ್ಕಾಗಿ ಕಾರ್ಯಾರಂಭಗೊಳ್ಳಲಿದೆ.
ನಮ್ಮ ಅತ್ಯಂತ ಪುಟಾಣಿ ರೋಗಿಗಳಿಗೆ ನಾವು ಒದಗಿಸುವ ಆರೈಕೆಯನ್ನು ಇನ್ನಷ್ಟು ಉತ್ತಮಪಡಿಸಲು ಇದೊಂದು ಹೊಸ ಸೇರ್ಪಡೆ ಎಂದು ಈ ಹೊಸ ಹೆಜ್ಜೆಯನ್ನು ಸಾಧ್ಯವಾಗಿಸುವಲ್ಲಿ ಮುಂಚೂಣಿಯಲ್ಲಿರುವ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ| ಅವಿನಾಶ್ ಶೆಟ್ಟಿ ಹೇಳಿದ್ದಾರೆ.
ಅವಧಿಪೂರ್ವ ಶಿಶುಗಳು ಎನ್‌ಐಸಿಯು ಆರೈಕೆಯಲ್ಲಿದ್ದು ಮನೆಗೆ ತೆರಳಿದರಷ್ಟೇ ಸಾಲದು. ಇಂತಹ ಶಿಶುಗಳ ಅನುಸರಣ ಚಿಕಿತ್ಸೆ-ಆರೈಕೆಯೂ ಅಷ್ಟೇ ಪ್ರಾಮುಖ್ಯವಾದುದಾಗಿದೆ. ಹೀಗಾಗಿ ಎನ್‌ಐಸಿಯುನಲ್ಲಿದ್ದು ಬಿಡುಗಡೆ ಹೊಂದಿರುವ ಅವಧಿಪೂರ್ವ ಜನಿಸಿದ ಶಿಶುಗಳನ್ನು ಯಾವುದೇ ಸಂಭಾವ್ಯ ನರಶಾಸ್ತ್ರೀಯ ಬೆಳವಣಿಗೆ ವಿಳಂಬಕ್ಕಾಗಿ ನಮ್ಮ ವಿಭಾಗದಿಂದ ನಡೆಸಲಾಗುತ್ತಿರುವ ನ್ಯೂರೊ ಡೆವಲಪ್‌ಮೆಂಟಲ್ ಫಾಲೊ ಅಪ್ ಕ್ಲಿನಿಕ್‌ನಲ್ಲಿ ನಿಯಮಿತವಾಗಿ ತಪಾಸಣೆಗೆ ಒಳಪಡಿಸಲಾಗುತ್ತದೆ. ನೇತ್ರತಜ್ಞರು, ಆಡಿಯಾಲಜಿ ತಜ್ಞರು, ಆಕ್ಯುಪೇಶನಲ್ ಥೆರಪಿಸ್ಟ್‌ಗಳು ಮತ್ತು ಫಿಸಿಯೋಥೆರಪಿಸ್ಟ್‌ಗಳು ಇಂತಹ ಫಾಲೊಅಪ್ ತಪಾಸಣೆಗಳ ಸಂದರ್ಭಗಳಲ್ಲಿ ಸದಾ ಲಭ್ಯರಿದ್ದು, ಈ ಪುಟಾಣಿ ಗ್ರಾಹಕರಿಗೆ ಅತ್ಯುತ್ಕೃಷ್ಟ ಫಲಿತಾಂಶಗಳು ಲಭಿಸುವುದನ್ನು ಖಾತರಿಪಡಿಸುತ್ತಿದ್ದಾರೆ.
–ಸರ್ಜನ್ ವೈ|ಅ| ಶೀಲಾ ಎಸ್. ಮಥಾಯ್,
ಎನ್‌ಎಂ, ವಿಎಸ್‌ಎಂ (ನಿ.)
ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರು,
ನಿಯೋನೇಟಾಲಜಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ನಿಯೋನೇಟಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)