ಮೈಸೂರು: ನಗರದ ವಿವಿಧ ಭಾಗಗಳಲ್ಲಿ ಅರಸರ ಕಾಲದಲ್ಲಿ ನಿರ್ಮಾಣವಾಗಿದ್ದ ಕಟ್ಟಡಗಳು ಸೂಕ್ತ ನಿರ್ವಹಣೆ ಇಲ್ಲದೇ ಶಿಥಿಲವಾಗಿದ್ದು, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕುಸಿಯುವ ಹಂತ ತಲುಪಿವೆ. ಮೈಸೂರಿನಲ್ಲಿ ಇತ್ತೀಚೆಗೆ ನಿರಂತರವಾಗಿ ಸುರಿ ಯುತ್ತಿರುವ ಮಳೆಯಿಂದ ಪಾರಂಪರಿಕ ಕಟ್ಟಡಗಳು ಶಿಥಿಲಗೊಂಡಿದ್ದು, ಛಾವಣಿಯ ಗಾರೆ ಕಳಚಿ ಬೀಳುತ್ತಿರುವುದು ಒಂದೆಡೆಯಾದರೆ, ಕಟ್ಟಡಗಳು ತೇವಗೊಂಡು ಮತ್ತಷ್ಟು ಶಿಥಿಲಾವಸ್ಥೆ ತಲುಪಿವೆ.
ಇದೇ ರೀತಿ ಮಳೆ ಮುಂದುವರಿದರೆ ಯಾವ ಕ್ಷಣದಲ್ಲಾದರೂ ಕಟ್ಟಡಗಳು ಕುಸಿದು ಬೀಳುವ ಆತಂಕ ಎದುರಾಗಿದೆ. ನಗರದ ಹೃದಯ ಭಾಗ ದಲ್ಲಿರುವ ದೇವರಾಜ ಮಾರುಕಟ್ಟೆ, ದೊಡ್ಡಗಡಿಯಾರ, ಜಯಲಕ್ಷ್ಮೀ ವಿಲಾಸ ಅರಮನೆ, ಕೆ.ಆರ್. ಆಸ್ಪತ್ರೆ, ಅಗ್ನಿ ಶಾಮಕ ಠಾಣೆ, ಜಿಲ್ಲಾ ಧಿಕಾರಿ ಕಚೇರಿ, ಕಾಡಾ ಕಚೇರಿ ಸೇರಿದಂತೆ 10ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಕುಸಿದು ಬೀಳುವ ಹಂತ ತಲುಪಿವೆ.
ಪ್ರತ್ಯೇಕ ಅನುದಾನ ಇಲ್ಲ: ವಿವಿಧ ಇಲಾಖೆ ಹಾಗೂ ಸಾರ್ವಜನಿಕ ಬಳಕೆಯಲ್ಲಿರುವ ಪಾರಂಪರಿಕ ಕಟ್ಟಡಗಳ ನಿರ್ವಹಣೆಗೆ ಪ್ರತಿ ತಿಂಗಳು ಲಕ್ಷಾಂತರ ಹಣ ಅಗತ್ಯವಿದೆ. ಆದರೆ ಇದಕ್ಕೆ ಪ್ರತ್ಯೇಕ ಅನುದಾನ ಲಭ್ಯವಾಗದೇ ಇರುವುದರಿಂದ ಇಲಾಖೆಯವರಾಗಲಿ, ಸ್ಥಳೀಯ ಸಂಸ್ಥೆಗಳಾಗಲಿ ಕಟ್ಟಡಗಳ ನಿರ್ವ ಹಣೆ ಜವಾಬ್ದಾರಿ ಹೊರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿಯೇ ಲ್ಯಾನ್ಸ್ ಡೌನ್, ದೇವರಾಜ ಮಾರುಕಟ್ಟೆ, ಅಗ್ನಿಶಾಮಕ ಠಾಣೆ, ಜಯಲಕ್ಷ್ಮೀ ವಿಲಾಸ ಅರಮನೆ ಕುಸಿದು ಬಿದ್ದಿವೆ.
”ಪಾರಂಪರಿಕ ಕಟ್ಟಡಗಳ ರಕ್ಷಣೆ ಮತ್ತು ನಿರ್ವಹಣೆ ಬಗ್ಗೆ ಕಟ್ಟಡಗಳ ಮಾಲೀಕತ್ವ ಹೊಂದಿರುವ ಸಂಸ್ಥೆ ಮತ್ತು ಇಲಾಖೆಗೆ ನಾವು ಮಾರ್ಗದರ್ಶನವನ್ನಷ್ಟೇ ಮಾಡಬಹುದು. ಈ ಹಿಂದೆ ಎಲ್ಲಾ ಪಾರಂಪರಿಕ ಕಟ್ಟಡಗಳನ್ನು ಪರಿಶೀಲಿಸಿ ಸಮರ್ಪಕ ನಿರ್ವಹಣೆಗೆ ಸಲಹೆ ನೀಡಿದ್ದೆವು. ಆದರೆ ಅದು ಅನುಷ್ಠಾನವಾಗಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ.”
● ಬಿ.ಆರ್. ಪೂರ್ಣಿಮಾ, ಆಯುಕ್ತರು ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ.
“ಕೆ.ಆರ್. ಆಸ್ಪತ್ರೆಯ ಕಟ್ಟಡಗಳು ಭಾರೀ ಮಳೆಯಿಂದಾಗಿ ಶಿಥಿಲವಾಗಿವೆ. ಅದಕ್ಕಾಗಿ ಛಾವಣಿಗೆ ಟಾರ್ ಶೀಟ್ ಹಾಕಲಾಗುತ್ತಿದೆ. ಜೊತೆಗೆ ಸೆಮಿ ವಾರ್ಡ್‌ಗಳಲ್ಲಿದ್ದ ರೋಗಿಗಳನ್ನು ಸುಸ್ಥಿತಿಯಲ್ಲಿರುವ ಕಟ್ಟಡಗಳಿಗೆ ರವಾನೆ ಮಾಡಲಾಗಿದೆ. ನಿರ್ಗತಿಕರ ಚಿಕಿತ್ಸಾ ಕೇಂದ್ರ ಸಂಪೂರ್ಣವಾಗಿ ಶಿಥಿಲವಾಗಿರುವುದರಿಂದ ಕಟ್ಟಡ ಬಳಿ ಯಾರೂ ಹೋಗದಂತೆ ಬಂದ್ ಮಾಡಿದ್ದೇವೆ.”
– ಡಾ|ನಂಜುಂಡಸ್ವಾಮಿ, ವೈದ್ಯಕೀಯ ಅಧೀಕ್ಷಕ ಕೆ.ಆರ್. ಆಸ್ಪತ್ರೆ.
ತ್ರಿಶಂಕು ಸ್ಥಿತಿಯಲ್ಲಿ ಅವಳಿ ಕಟ್ಟಡಗಳ ಭವಿಷ್ಯ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೆಗ್ಗುರುತಾದ ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡಗಳು ಶಿಥಿಲಗೊಂಡು ಹತ್ತಾರು ವರ್ಷಗಳುರುಳಿದರೂ ಎರಡೂ ಕಟ್ಟಡಗಳ ಭವಿಷ್ಯ ಅತಂತ್ರವಾಗಿದೆ. ಇತ್ತ ಸಂಪೂರ್ಣ ಶಿಥಿಲಗೊಂಡಿರುವು ದರಿಂದ ಕಟ್ಟಡಗಳು ಯಾವ ಸಂದರ್ಭದಲ್ಲಾದೂ ಕುಸಿದು ಬೀಳುವ ಸ್ಥಿತಿ ತಲುಪಿವೆ. ಮೈಸೂರಿನ ಪರಂಪರೆ ಹಾಗೂ ಅಸ್ಮಿತೆಯಾಗಿರುವ ಈ ಅವಳಿ ಕಟ್ಟಡಗಳು ನಗರದ ಹೃದಯ ಭಾಗದಲ್ಲಿದ್ದು, ಶತಮಾನ ಪೂರೈಸಿವೆ.
ಆದರೆ ಸಮರ್ಪಕ ನಿರ್ವಹಣೆ ಕೊರತೆಯಿಂದ 2012ರಲ್ಲಿ ಲ್ಯಾನ್ಸ್‌ಡೌನ್ ಕಟ್ಟಡದ ಒಂದು ಭಾಗದ ಕುಸಿದು ನಾಲ್ವರು ಮೃತಪಟ್ಟಿದ್ದರೆ, 2016 ಆಗಸ್ಟ್ 28ರಂದು ದೇವರಾಜ ಮಾರುಕಟ್ಟೆಯ ಉತ್ತರ ಭಾಗದಲ್ಲಿರುವ ಸ್ವಾಗತ ಕಮಾನು ಕುಸಿದು ಬಿದ್ದಿತ್ತು. ಹೀಗಿದ್ದರೂ ಎರಡೂ ಕಟ್ಟಡ ವನ್ನು ನವೀಕರಣ ಮಾಡುವ ಅಥವಾ ಕಟ್ಟಡ ನೆಲಸಮ ಮಾಡದೇ ಹಾಗೆ ಬಿಟ್ಟಿರುವುದ ರಿಂದ ಮತ್ತಷ್ಟು ಶಿಥಿಲವಾಗಿವೆ.
ನಗರದಲ್ಲಿ ಇತ್ತೀಚೆಗೆ ನಿರಂತರವಾಗಿ ಸುರಿಯುತ್ತಿ ರುವ ಭಾರೀ ಮಳೆಯಿಂದ ಎರಡೂ ಕಟ್ಟಡಗಳು ಯಾವ ಕ್ಷಣದಲ್ಲಾದರೂ ಕುಸಿಯುವ ಸ್ಥಿತಿಯಲ್ಲಿವೆ. ಹೀಗಿದ್ದರೂ ಒಂದಷ್ಟು ಮಂದಿ ಎರಡೂ ಕಟ್ಟಡಗಳನ್ನು ನವೀಕರಣ ಮಾಡಿ ಸಂರಕ್ಷಿಸುವಂತೆ ಒತ್ತಾಯಿಸಿದರೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಟ್ಟಡವನ್ನು ನೆಲಸಮಗೊಳಿಸುವುದೇ ಸೂಕ್ತ ಎನ್ನುತ್ತಿದ್ದಾರೆ.
ಇತ್ತ ಹೈಕೋರ್ಟ್ ಸಹ ತಜ್ಞರ ಸಲಹೆಯಂತೆ ಕಟ್ಟಡಗಳನ್ನು ತೆರವು ಮಾಡುವಂತೆ ನಿರ್ದೇಶಿಸಿದ್ದರೂ ಈವರೆಗೆ ಸರ್ಕಾರ ಕಟ್ಟಡಗಳ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಅವು ಮತ್ತಷ್ಟು ದುರಾವಸ್ಥೆ ತಲುಪಲು ಕಾರಣವಾಗಿದೆ.
ಕಟ್ಟಡ ಭವಿಷ್ಯ ಹೇಳಿದ್ದ 3 ತಜ್ಞ ಸಮಿತಿ: ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಕಟ್ಟಡಗಳೆರಡು ಅವಳಿ-ಜವಳಿ ಸಂಕೀರ್ಣಗಳು. ಒಂದರ ಗುಣ- ಅವಗುಣಗಳು, ಸಾಧಕ-ಬಾಧಕಗಳು ಮತ್ತು ಪರಿಣಾಮ- ದುಷ್ಪರಿಣಾಮಗಳು ಪರಸ್ಪರ ಎರಡಕ್ಕೂ ತಟ್ಟಿವೆ. ಒಂದು ಉಳಿದು, ಇನ್ನೊಂದು ಅಳಿಯಲು ಸಾಧ್ಯವಿಲ್ಲ. ಉಳಿದರೆ ಎರಡು ಉಳಿಯಬೇಕು, ಅಳಿ ದರೆ ಎರಡು ಅಳಿಯಬೇಕು. ಈ ಕಟ್ಟಡಗಳ ಸದ್ಯದ ಪರಿಸ್ಥಿತಿ ಅರಿಯಲು ಸರ್ಕಾರ ಪಾರಂಪರಿಕ ತಜ್ಞರ ಸಮಿತಿ ರಚಿಸಿತ್ತು. ನಂತರ ಪಾಲಿಕೆಯೂ ಕಟ್ಟಡದ ವಸ್ತುಸ್ಥಿತಿ ಅರಿಯಲು ಮತ್ತೂಂದು ಸಮಿತಿ ರಚಿಸಿತು.
ಈ ಎರಡೂ ಸಮಿತಿಗಳು ಎರಡೂ ಕಟ್ಟಡಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ ವರದಿ ನೀಡಿದ್ದವು. ಪಾಲಿಕೆ ರಚಿಸಿದ್ದ ಟಾಸ್ಕ್ಫೋರ್ಸ್ ಸಮಿತಿಯು ಕಟ್ಟಡವನ್ನು ಪರಿಶೀಲಿಸಿ, ತನ್ನ ವರದಿಯಲ್ಲಿ ಕಟ್ಟಡವನ್ನು ಧ್ವಂಸಗೊಳಿಸಿ, ನೂತನ ಕಟ್ಟಡ ಮರುನಿರ್ಮಾಣಕ್ಕೆ ಶಿಫಾರಸು ಮಾಡಿತು. ಆದರೆ, ಮತ್ತೂಂದು ಸಮಿತಿ ಯಾದ ಪಾರಂಪರಿಕ ತಜ್ಞರ ಸಮಿತಿ ಮಾರುಕಟ್ಟೆ ಕಟ್ಟಡ ಪಾರಂಪರಿಕ ಕಟ್ಟಡವಾಗಿದ್ದು, ಅದನ್ನು ಸಂರಕ್ಷಣೆ ಮಾಡಬೇಕಾಗಿದ್ದು, ಕಟ್ಟಡದ ನವೀಕರಣ ಕಾಮಗಾರಿ ಯನ್ನು ಮುಂದುವರಿಸಲು ಹೇಳಿತು. ಇದರಿಂದಾಗಿ ಎರಡು ರೀತಿಯ ಅಭಿಪ್ರಾಯಗಳು ವ್ಯಕ್ತವಾದವು.
ಇದನ್ನೂ ಓದಿ:- ಸುಳ್ಳು ಮತ್ತು ಮೋಸ ಕಾಂಗ್ರೆಸ್ ರಕ್ತದಲ್ಲೇ ಇದೆ: ನಳಿನ್ ಕುಮಾರ್ ಕಟೀಲ್
ಬಳಿಕ ನ್ಯಾಯಾಲಯ ಮಧ್ಯ ಪ್ರವೇಶಿಸಿ ಮತ್ತೂಂದು ಸಮಿತಿ ರಚಿಸಿ, ಸಮೀಕ್ಷೆ ನಡೆಸುವಂತೆ ಸೂಚಿಸಿತ್ತು. ಅದರಂತೆ ಜಿಲ್ಲಾಧಿಕಾರಿಗಳು ಮೈಸೂರಿನ ಎಲ್ಲಾ ಕ್ಷೇತ್ರಗಳ ಪರಿಣಿತ ತಜ್ಞರ ಸಮಿತಿ ರಚಿಸಿ ಆದೇಶ ಹೊರಡಿಸಿದ್ದರು. ಅದರಂತೆ ತಜ್ಞರ ಸಮಿತಿ ಎರಡೂ ಕಟ್ಟಡಗಳ ಅಧ್ಯಯನ ನಡೆಸಿ, ಕಟ್ಟಡಗಳು ಶಿಥಿಲವಾಗಿರುವುದನ್ನು ಒಪ್ಪಿಕೊಂಡಿದ್ದವು.
ನಂತರ 2021ರ ಆರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರು ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಕಟ್ಟಡಗಳನ್ನು ವೀಕ್ಷಿಸಿ ಬಳಿಕ ಎರಡೂ ಕಟ್ಟಡಗಳನ್ನು ಕೆಡವಿ ಅದೇ ಮಾದರಿಯಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದರು. ಇದಾದ ಬಳಿಕ ಅಕ್ಟೋಬರ್‌ನಲ್ಲಿ ಮೈಸೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಎರಡೂ ಕಟ್ಟಡಗಳನ್ನು ಕೆಡವಿ ಪಾರಂಪರಿಕ ಶೈಲಿಯಲ್ಲೇ ಮರು ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದರು.
ಇತ್ತ ಕೆಲ ಸಂಘ ಸಂಸ್ಥೆಗಳು ಸೇವ್ ಹೆರಿಟೇಜ್ ಬಿಲ್ಡಿಂಗ್ ಹೆಸರಿನಲ್ಲಿ ಅಹಿ ಅಭಿಯಾನ ನಡೆಸಿ ಕಟ್ಟಡ ಕೆಡವದಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಇಷ್ಟಾದರೂ ಸರ್ಕಾರವಾಗಲಿ, ಸ್ಥಳೀಯ ಜನಪ್ರತಿ ನಿಧಿಗಳಾಗಲಿ ಕಟ್ಟಡದ ಅಳಿವು-ಉಳಿವಿನ ಬಗ್ಗೆ ಕಾರ್ಯೋನ್ಮೊಖವಾಗದೆ ತಟಸ್ಥವಾಗಿ ಉಳಿದಿರುವುದು ಅಪಾಯಕ್ಕೆ ಎಡೆ ಮಾಡಿದಂತಾಗಿದೆ.
“ಎರಡೂ ಕಟ್ಟಡಗಳು ಸಂಪೂರ್ಣ ಶಿಥಿಲವಾಗಿರುವುದರಿಂದ ಎಷ್ಟೇ ಹಣ ಖರ್ಚು ಮಾಡಿ ನವೀಕರಣ ಮಾಡಿದರೂ ಪ್ರಯೋಜನವಿಲ್ಲ. ಅದಕ್ಕಾಗಿ ಸರ್ಕಾರ ಎರಡೂ ಕಟ್ಟಡಗಳನ್ನು ನೆಲಸಮ ಮಾಡಿ, ಅದೇ ಮಾದರಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಿದೆ. 3 ತಿಂಗಳಲ್ಲಿ ಕೆಲಸ ಆರಂಭವಾಗಲಿದೆ.”.●
ಸುನಂದ ಫಾಲನೇತ್ರ, ಮೇಯರ್ ಮೈಸೂರು ಮಹಾನಗರ ಪಾಲಿಕೆ.
ಅವನತಿಯಲ್ಲಿರುವ ಕಟ್ಟಡಗಳು –
ಸ್ಥಳೀಯ ಸಂಸ್ಥೆಗಳ ಅಸಮ ರ್ಪಕ ನಿರ್ವಹಣೆ ಹಾಗೂ ಪುರಾತತ್ವ ಇಲಾಖೆ ನಿರ್ಲಕ್ಷ್ಯದಿಂದ ಈಗಾ ಗಲೇ ಕುಸಿದು ಬಿದ್ದಿರುವ ಲ್ಯಾನ್ಸ್ ಡೌನ್, ದೇವರಾಜ ಮಾರುಕಟ್ಟೆ ಕಟ್ಟಡಗಳ ಸಾಲಿಗೆ ಮಾನಸ ಗಂಗೊ ತ್ರಿಯ ಜಯಲಕ್ಷ್ಮೀ ವಿಲಾಸ ಅರ ಮನೆ, ಅಗ್ನಿಶಾಮಕ ಠಾಣೆ ಕಟ್ಟಡ ಸೇರ್ಪಡೆಯಾಗಿವೆ.
ಉಳಿದಂತೆ ನಗರದ ದೊಡ್ಡಾಸ್ಪತ್ರೆಯಾದ ಕೆ.ಆರ್. ಆಸ್ಪತ್ರೆ ಕಟ್ಟಡ, ದೊಡ್ಡ ಗಡಿಯಾರ, ಜಿಲ್ಲಾಧಿಕಾರಿಗಳ ಕಚೇರಿ ಮುಂದಿನ ಸರದಿಗಾಗಿ ಕಾದು ನಿಂತಿವೆ. ತಕ್ಷಣವೇ ಸ್ಥಳೀಯ ಸಂಸ್ಥೆ ಹಾಗೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಈ ಕಟ್ಟಡಗಳೂ ಕುಸಿಯುವ ಸಾಧ್ಯತೆಗಳಿದೆ ಎಂದು ಪಾರಂಪರಿಕ ತಜ್ಞರು ಎಚ್ಚರಿಸಿದ್ದಾರೆ.
– ಸತೀಶ್ ದೇಪುರ