Advertisement

ಗ್ಯಾರಂಟಿಗಳ ಸಮೀಕ್ಷೆ- ಪಕ್ಷದ ಸಂಸ್ಥಾಪನ ದಿನದಂದು ಚಾಲನೆ: ಡಿಕೆಶಿ ಘೋಷಣೆ

12:39 AM Nov 20, 2023 | Team Udayavani |

ಬೆಂಗಳೂರು: ವಿಪಕ್ಷಗಳ ಆರೋಪಗಳ ಬೆನ್ನಲ್ಲೇ ಕಾಂಗ್ರೆಸ್‌ ಈಗ ತನ್ನ ಗ್ಯಾರಂಟಿಗಳ ಸಮೀಕ್ಷೆಗೆ ಮುಂದಾಗಿದ್ದು, ಪಕ್ಷದ ಸಂಸ್ಥಾಪನ ದಿನದಂದೇ ಈ ಕಾರ್ಯಕ್ಕೆ ಚಾಲನೆ ನೀಡಲು ನಿರ್ಧರಿಸಿದೆ.

Advertisement

ಗೃಹಜ್ಯೋತಿ, ಗೃಹಲಕ್ಷ್ಮಿ ಸಹಿತ ನಾಲ್ಕು ಗ್ಯಾರಂಟಿಗಳು ಬಹು ತೇಕ ಜನರಿಗೆ ತಲುಪುತ್ತಲೇ ಇಲ್ಲ. ಸರಕಾರ ಬರೀ ಸುಳ್ಳು ಹೇಳುತ್ತಿದೆ ಎಂದು ಎಚ್‌.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸರಕಾರವು ಅಧಿಕಾರಿಗಳಿಂದ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ. ಜತೆಗೆ ಪಕ್ಷದ ವತಿ ಯಿಂದಲೂ ಸಮೀಕ್ಷೆಗೆ ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳೂ ಆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ರವಿವಾರ ಇಂದಿರಾ ಗಾಂಧಿ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಕ್ಷದಿಂದಲೂ ಗ್ಯಾರಂಟಿ ಸಮೀಕ್ಷೆ ನಡೆಸಲಾಗುವುದು. ಇದೇ ನ. 28 ಕಾಂಗ್ರೆಸ್‌ ಸಂಸ್ಥಾಪನ ದಿನ. ಅಂದೇ ಈ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಅದಕ್ಕೆ ಮುನ್ನ ಸಮಿತಿ ರಚಿಸಲಾಗುವುದು. ಅದರಲ್ಲಿ ಬ್ಲಾಕ್‌, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧ್ಯಕ್ಷರು, ಕಾರ್ಯಕರ್ತರು, ನಾಯಕರು ಇರಲಿದ್ದಾರೆ ಎಂದರು.

ಪ್ರತೀ ಮನೆಗೆ ಹೋಗಿ ಸಮೀಕ್ಷೆ
ಅಧಿಕಾರಿಗಳು ಸಮೀಕ್ಷೆ ಮಾಡಲಿ-ಬಿಡಲಿ. ಆದರೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಈ ವಿಷಯದಲ್ಲಿ ಗಂಭೀರವಾಗಿರಬೇಕು. ಸಮೀಕ್ಷೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಡೆಸಬೇಕು. ಪ್ರತೀ ಮನೆಗೆ ಭೇಟಿ ನೀಡಿ, ಎಷ್ಟು ಯೋಜನೆಗಳು ತಲುಪಿವೆ? ತಲುಪಿಲ್ಲ ಎಂದಾದರೆ ಅದಕ್ಕೆ ಅಡತಡೆಗಳು ಏನು? ಮಾರ್ಪಾಡುಗಳು ಏನಾದರೂ ಆಗಬೇಕಿದೆಯೇ? ಸುಧಾರಣೆಗಳ ಆವಶ್ಯಕತೆ ಇದೆಯೇ ಎಂಬ ಸಲಹೆ ಅಥವಾ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು ಎಂದು ಸೂಚಿಸಿದರು.

Advertisement

ಕಾಂಗ್ರೆಸ್‌ ಸರಕಾರವು ನುಡಿದಂತೆ ನಡೆದು ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಮತಗಳ ಮೂಲಕ ಇದರ ಲಾಭ ಪಡೆಯಬೇಕು. ಬಿಜೆಪಿ ಅಥವಾ ಜೆಡಿಎಸ್‌ಗೆ ಮತ ಚಲಾಯಿಸಿದರೆ ಈ ಗ್ಯಾರಂಟಿಗಳನ್ನು ನೀಡದಂತೆ ಯಾವುದಾದರೂ ಕಾನೂನು ತರಲಿವೆ ಎಂಬ ಸಂದೇಶವನ್ನು ಜನರಿಗೆ ತಲುಪಿಸಬೇಕು ಎಂದು ಇದೇ ವೇಳೆ ಕಿವಿಮಾತು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next