ಕಾರವಾರ: ದಾಂಡೇಲಿ ಹಾಗೂ ಜೋಯಿಡಾ ಭಾಗದ ರೆಸಾರ್ಟ್‌ಗಳು ಹಾಗೂ ಜಲ ಸಾಹಸ ಕ್ರೀಡೆ ನಡೆಸುವ ರೆಸಾರ್ಟ್‌ಗಳ ಸರ್ವೇಗೆ ಜಿಲ್ಲಾಡಳಿತ ಮುಂದಾಗಿದ್ದು, ಈ ಹೊಣೆಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಿದೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರವಾಸೋದ್ಯಮ ಉತ್ತೇಜನ ಹಾಗೂ ಪ್ರವಾಸಿಗರ ರಕ್ಷಣೆ ಜೊತೆ ಜೊತೆಯಾಗಿ ಮಾಡಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಪ್ರವಾಸೋದ್ಯಮ ಇಲಾಖೆ, ಜಂಗಲ್ ಲಾಡ್ಜ್ಸ್ ಅಧಿಕಾರಿಗಳು, ಎಸ್ಪಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದರು. ರಾಜ್ಯ ಮುಖ್ಯ ಕಾರ್ಯದರ್ಶಿಗಳು ಸಹ ರಿವರ್ ರಾಫ್ಟ್ ಬಗ್ಗೆ ಸೂಕ್ತ ಕ್ರಮಕ್ಕೆ ಹಾಗೂ ಪ್ರವಾಸೋದ್ಯಮಕ್ಕೆ ಪೂರಕ ಕ್ರಮದ ಬಗ್ಗೆ ಸೂಕ್ತ ಕ್ರಿಯಾಶೀಲತೆಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ಸಭೆ ನಡೆದಿತ್ತು ಎನ್ನಲಾಗಿದೆ.
ರೆಸಾರ್ಟ್‌ಗಳ ಎಲ್ಲ ಕಾಗದ ಪತ್ರ ಪರಿಶೀಲನೆ ಜೊತೆಗೆ, ಸುರಕ್ಷತೆಗೆ ಅವರು ಕೈಗೊಂಡಿರುವ ಕ್ರಮ, ನೌಕರರ ವಿಮೆ ಸೌಲಭ್ಯ, ಬೋಟಿಂಗ್ ಹಾಗೂ ಈಜು ತರಬೇತಿಯ ಬಗ್ಗೆ ಪಡೆದ ಪ್ರಮಾಣ ಪತ್ರ, ಸಾರಂಗ ಪ್ರಮಾಣ ಪತ್ರ, ಸುರಕ್ಷತಾ ಸಾಮಾಗ್ರಿ, ತುರ್ತು ಸಂದರ್ಭಗಳಲ್ಲಿ ತೋರಬೇಕಾದ ಕೌಶಲ್ಯತನದ ಕುರಿತು ಎಲ್ಲ ರೆಸಾರ್ಟ್ ಮಾಲೀಕರು ಹಾಗೂ ಸಿಬ್ಬಂದಿ ಜೊತೆ ಚರ್ಚಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಪ್ರವಾಸೋದ್ಯಮ ಸಹ ಬೆಳೆಯಬೇಕು ಹಾಗೂ ಶಿಸ್ತು ಪಾಲನೆಯೂ ಆಗಬೇಕು, ಪರಿಸರವೂ ಉಳಿಯಬೇಕು ಹಾಗೂ ಪ್ರವಾಸಿಗರಿಗೆ ಸಂತೋಷದ ಜೊತೆಗೆ ಅವರ ಜೀವ ರಕ್ಷಣೆಯೂ ಆಗಬೇಕು ಎಂಬ ನಿಟ್ಟಿನಲ್ಲಿ ಕೆಲ ಕಟ್ಟು ನಿಟ್ಟಿನ ನಿಯಮ ರೂಪಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಕಾನೂನು ಬದ್ಧವಾಗಿ ಚಟುವಟಿಕೆ ಮಾಡುತ್ತಿರುವವರಿಗೆ ಯಾವುದೇ ತೊಂದರೆ ಇಲ್ಲ. ಪ್ರವಾಸಿಗರ ಹಿತ ರಕ್ಷಣೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆ ಜೊತೆ ಜೊತೆಗೆ ಸಾಗಬೇಕು ಎಂಬ ನಿಟ್ಟಿನಿಂದ ದಾಂಡೇಲಿ ಭಾಗದ ಪ್ರವಾಸಿ ಚಟುವಟಿಕೆಗಳ ಸರ್ವೇಗೆ ಇಲಾಖೆ ಮುಂದಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಮನವಿಗೆ ಸ್ಪಂದಿಸಿದ ಸಿಎಸ್: ಕಾಳಿ ನದಿಯ ಇಳವಾ ಸಮೀಪ ಇರುವ ವೈಟ್ ವಾಟರ್ ರೆಸಾರ್ಟ್ ಮಾಲಿಕ ನೋಬರ್ಟ್ ಎಫ್. ಮೆನಂಜಿಸ್ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕಾನೂನುಬದ್ಧವಾಗಿ ಜಲ ಸಾಹಸ ಕ್ರೀಡೆಗಳನ್ನು 300 ಮೀಟರ್ ವ್ಯಾಪ್ತಿಯಲ್ಲಿ ಮಾಡುತ್ತಿರುವ ಬಗ್ಗೆ ಹಾಗೂ ತರಬೇತಿ ಹೊಂದಿದ ಜಲ ಸಾಹಸಿಗಳು ರಿವರ್ ಡ್ರೆçವರ್ಗಳನ್ನು ಇಟ್ಟು ಕೊಂಡಿದ್ದು, ಗೈಡ್ ಗಳು ಸಹ ಅರ್ಹತಾ ಪ್ರಮಾಣ ಪತ್ರ ಹೊಂದಿದ್ದ ಬಗ್ಗೆ ಗಮನಸೆಳೆದಿದ್ದರು. ಈ ಮನವಿಗೆ ಸ್ಪಂದಿಸಿದ ಮುಖ್ಯ ಕಾರ್ಯದರ್ಶಿಗಳು, ನಿಯಮಗಳ ಪ್ರಕಾರ ಈ ರೀತಿಯ ಪರಿಶೀಲನೆ ಮತ್ತು ಅಗತ್ಯ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ರವಾನಿಸಲಾಗಿದೆ ಎಂದು ರೆಸಾರ್ಟ್ ಉದ್ಯಮಿ ನೋಬರ್ಟ್ ಮೆನಂಜಿಸ್‌ಗೆ ಪ್ರತಿಕ್ರಿಯಿಸಿದ್ದಾರೆ.
ಪ್ರವಾಸಿಗರ ಪ್ರಭಾವಿ ಆಕರ್ಷಣೆ: ಜಿಲ್ಲೆಯಲ್ಲಿ ದಾಂಡೇಲಿ-ಜೋಯಿಡಾ ಅವಳಿ ತಾಲೂಕುಗಳು ಪ್ರವಾಸೋದ್ಯಮದ ಸ್ಟಾರ್ ಸ್ಥಾನದಲ್ಲಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯದಿಂದ ರಜಾ ದಿನಗಳಲ್ಲೇ ಪ್ರವಾಸಿಗರು ದಾಂಡೇಲಿಗೆ ಆಗಮಿಸಿ, ಜೋಯಿಡಾಕ್ಕೆ ಜಲ ಸಾಹಸ ಕ್ರೀಡೆಗಳ ಮನೋರಂಜನೆಗಾಗಿ ಆಗಮಿಸುತ್ತಾರೆ. ಕೋವಿಡ್ ನಂತರ ಪ್ರವಾಸಿ ಚಟುವಟಿಕೆ ಈ ಎರಡೂ ತಾಲೂಕಿನಲ್ಲಿ ಚೇತರಿಸಿಕೊಂಡಿದೆ. ಹಾಗಾಗಿ ಇಲ್ಲಿ ಪ್ರವಾಸೋದ್ಯಮವನ್ನು ದೀರ್ಘ ಕಾಲ ನಿಲ್ಲಿಸುವುದು ಜಾಣತನವಲ್ಲ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಮುನ್ನೆಚ್ಚರಿಕೆಗಾಗಿ ಕ್ರಮಗಳು: ಚೇತರಿಸಿಕೊಂಡಿರುವ ಪ್ರವಾಸೋದ್ಯಮವನ್ನು ಹತ್ತಿಕ್ಕುವ ವಿಚಾರ ಜಿಲ್ಲಾಡಳಿತಕ್ಕೂ ಇಲ್ಲ. ಆದರೆ ಉದ್ಯಮ ನಡೆಸುವವರನ್ನು ಎಚ್ಚರಿಸುವುದು ಅಧಿಕಾರಿಗಳ ಕರ್ತವ್ಯ. ಸುರಕ್ಷತೆಗೆ ಆದ್ಯತೆ ನೀಡಿ ಎಂದು ಹೇಳಲು ಕಂದಾಯ, ಅರಣ್ಯ, ಪೊಲೀಸ್ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳು ಮುಂದಾಗಿವೆ. ಎಲ್ಲವನ್ನು ಸರಿಯಾದ ಕ್ರಮದಲ್ಲಿ, ದಾಖಲೆಗಳನ್ನು ಇಟ್ಟುಕೊಂಡು ಉದ್ಯಮ ನಡೆಸಿ ಎಂಬ ಸಲಹೆ ಬರತೊಡಗಿದೆ. ಸುರಕ್ಷರಾ ಕ್ರಮಗಳಿಗೆ ಆದ್ಯತೆ ನೀಡಿ, ಪ್ರವಾಸಿಗರಿಗೆ ತಿಳಿವಳಿಕೆ ನೀಡಿ ಚಟುವಟಿಕೆ ನಡೆಸಿ ಎಂಬುದು ಅಧಿಕಾರಿಗಳ ಸಲಹೆಯಾಗಿದೆ.
ಉದ್ಯಮಿಗಳ ಅಳಲು: ಈಗತಾನೇ ಕೋವಿಡ್‌ನಿಂದ ಹೊರ ಬಂದು, ಕೆಲ ವಿದ್ಯಾರ್ಥಿಗಳ ಪರೀಕ್ಷೆ ಮುಗಿದಿದ್ದು, ಕುಟುಂಬದ ಜೊತೆ ಪ್ರವಾಸ ಬರುತ್ತಿದ್ದಾರೆ. ಪ್ರವಾಸೋದ್ಯಮ ಚಟುವಟಿಕೆ ಈಗತಾನೆ ಗರಿಗೆದರಿದೆ. ಮಳೆಗಾಲಕ್ಕೆ ಮುನ್ನ ಮಾತ್ರ ಪ್ರವಾಸಿ ಚಟುವಟಿಕೆ ಇರುತ್ತವೆ. ಮೇ ಕೊನೆಯವಾರದಲ್ಲಿ ಪ್ರವಾಸಿ ಚಟುವಟಿಕೆ ಮುಕ್ತಾಯವಾಗುತ್ತವೆ. ಮಳೆಗಾಲದ ಪ್ರವಾಸೋದ್ಯಮ ತೀರಾ ವಿರಳ. ಈಗ ಉಳಿದಿರುವುದು ಆರು ವಾರಗಳ ಅವಧಿ ಅಂದರೆ 40 ದಿನ ಮಾತ್ರ. ಹಾಗಾಗಿ ಬೇಗನೇ ಜಲ ಸಾಹಸ ಕ್ರೀಡೆಗಳಿಗೆ ಅನುಮತಿ ನೀಡಲಿ ಎಂಬುದು ರೆಸಾರ್ಟ್ ಮಾಲೀಕರ ಬೇಡಿಕೆ.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ದಾಂಡೇಲಿ-ಜೋಯಿಡಾ ಭಾಗದಲ್ಲಿ ಎಲ್ಲ ಪ್ರವಾಸಿ ಚಟುವಟಿಕೆಗಳನ್ನು ಪರಿಶೀಲಿಸಿ ಸರ್ವೇ ಮಾಡಲಾಗುವುದು. ಪ್ರವಾಸೋದ್ಯಮವೂ ಬೆಳೆಯಬೇಕು, ಪ್ರವಾಸಿಗನೂ ರಕ್ಷಣೆಯಾಗಬೇಕು ಎಂಬುದು ಸರ್ವೇಯ ಉದ್ದೇಶ. –
ಜಯಂತ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ಉತ್ತರ ಕನ್ನಡ
– ನಾಗರಾಜ್ ಹರಪನಹಳ್ಳಿ