Advertisement

ಪಿಯು ಪಾಸಾದವರಿಲ್ಲದ ಹಳ್ಳಿಗಳ ಪತ್ತೆಗೆ ಪಣ

01:05 PM Aug 28, 2017 | Team Udayavani |

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯು ರಾಜ್ಯದಲ್ಲಿ ಪದವೀಧರರಿಲ್ಲದ ಹಳ್ಳಿಗಳನ್ನು ಗುರುತಿಸಿದ ಮಾದರಿಯಲ್ಲೇ ಪಿಯು ಪಾಸಾಗದವರು ಇಲ್ಲದ ಹಳ್ಳಿಗಳೆಷ್ಟು ಎಂಬ ಸಮೀಕ್ಷೆ ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಪಿಯು, ಪದವಿ ಹಾಗೂ ಸ್ನಾತಕೋತ್ತರ ಪದವಿಗೂ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನೂರಕ್ಕಿಂತ ಅಧಿಕ ಜನವಸತಿ ಹೊಂದಿರುವ ಹಳ್ಳಿಗಳಲ್ಲಿ ಕನಿಷ್ಠ ಒಬ್ಬರಾದರೂ ಪದವೀಧರರು ಇರಲೇಬೇಕು ಅಥವಾ ಇಲ್ಲದ ಕಡೆಗಳಲ್ಲಿ ಸೃಷ್ಟಿಸಬೇಕೆಂಬ ಮೂಲ ಉದ್ದೇಶದಿಂದ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆ ಆಯಾ ರಾಜ್ಯಗಳಲ್ಲಿ ಈ ಬಗ್ಗೆ ಸಮೀಕ್ಷೆ ನಡೆಸಲು ಸೂಚಿಸಿದೆ.

Advertisement

ರಾಜ್ಯದ ಕಾಲೇಜು ಶಿಕ್ಷಣ ಇಲಾಖೆ ಸಮೀಕ್ಷೆ ನಡೆಸಿ 2 ಸಾವಿರಕ್ಕೂ ಅಧಿಕ ಹಳ್ಳಿಗಳಲ್ಲಿ ಪದವೀಧರರಿಲ್ಲ ಎಂಬುದನ್ನು ಪತ್ತೆಹಚ್ಚಿದೆ. ಜತೆಗೆ ಅಂಥ ಹಳ್ಳಿಗಳಿಗೆ ಪದವಿ ಕಾಲೇಜಿನ ಪ್ರಾಂಶುಪಾಲರನ್ನು ಹಾಗೂ ಪ್ರಾಧ್ಯಾಪಕರನ್ನು ಕಳುಹಿಸಿ, ಪದವೀಧರರನ್ನು ಹೊಂದಿಲ್ಲದೇ ಇರುವುದಕ್ಕೆ ಕಾರಣವೇನು ಎಂಬುದನ್ನು ಪಟ್ಟಿ ಮಾಡಿದೆ. ಇದಕ್ಕಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ.

ಪಿಯು ಇಲಾಖೆಯಿಂದ ಸಮೀಕ್ಷೆ: ಹಳ್ಳಿಗೊಬ್ಬ ಪದವೀಧರ ಇರಬೇಕಾದರೆ, ಎಸ್ಸೆಸ್ಸೆಲ್ಸಿ ಅಥವಾ ಪಿಯು ಪೂರೈಸಿದವರು ಇರಲೇಬೇಕು. ವಯಸ್ಕರ ಶಿಕ್ಷಣ ಮೂಲಕ ಸಾಕ್ಷರಸ್ಥರನ್ನಾಗಿ ಮಾಡಬಹುದು. ಆದರೆ, ಪದವೀಧರರನ್ನು ಸೃಷ್ಟಿಸಲು ಸಾಧ್ಯವಿಲ್ಲ. ಹೀಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ರಾಜ್ಯದ 200ಕ್ಕಿಂತ ಅಧಿಕ ಜನ ವಸತಿ ಪ್ರದೇಶದಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿ, ಪಿಯು ಓದದೇ ಇರುವ ಹಾಗೂ ಈವರೆಗೂ ಒಬ್ಬರೂ ಪಿಯು ಪೂರೈಸದ ಹಳ್ಳಿಗಳನ್ನು ಗುರುತಿಸಲು ಕಾರ್ಯತಂತ್ರ ರೂಪಿಸಿದೆ.

ಗ್ರಾಮೀಣ ಭಾಗದ ಯುವಜನರು ಪದವಿ ಪೂರ್ವ ಶಿಕ್ಷಣ ಪಡೆಯಬೇಕೆಂಬ ನಿಟ್ಟಿನಲ್ಲಿ ಸರ್ಕಾರವು ಸುಧಾರಣಾ ಕ್ರಮ ತೆಗೆದುಕೊಳ್ಳುತ್ತಿದೆ. ಇನ್ನೂರು ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆಯಿದ್ದು, ಒಬ್ಬರೂ ಸಹ ಪಿಯು ತರಗತಿಗೆ ಸೇರಿಲ್ಲದ ಅಥವಾ ಪಿಯು ಪಾಸಾಗದಿರುವ ಹಳ್ಳಿಗಳನ್ನು ಗುರುತಿಸಿ, ಆ ಹಳ್ಳಿಗಳಲ್ಲಿ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲಾಗುತ್ತದೆ. ಎಸ್ಸೆಸ್ಸೆಲ್ಸಿ ನಂತರ ಪಿಯು ಶಿಕ್ಷಣಕ್ಕೆ ಪ್ರವೇಶ ಪಡೆಯದೇ ಇರುವುದು ಹಾಗೂ ಪಿಯು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿರುವ ಅಭ್ಯರ್ಥಿಗಳಿಗೆ ಪಿಯು ಪೂರೈಸಲು ಪ್ರೋತ್ಸಾಹ ನೀಡುವುದು ಮತ್ತು ಕಾಲೇಜು ಸೇರಿಕೊಳ್ಳಲು ಇರುವ ಸಮಸ್ಯೆಗೆ ಸೂಕ್ತ ಮಾರ್ಗದರ್ಶನ ಇಲಾಖೆ ಅಧಿಕಾರಿಗಳಿಂದ ನೀಡಲಾಗುತ್ತದೆ.

ಪ್ರಾಂಶುಪಾಲರಿಗೆ ಸಮೀಕ್ಷೆ ಹೊಣೆ
ಪಿಯು ಪೂರೈಸಿದವರನ್ನು ಹೊಂದಿಲ್ಲದ ಹಳ್ಳಿಗಳನ್ನು ಪಿಯು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಮೂಲಕ ಪತ್ತೆ ಮಾಡಲಾಗುತ್ತದೆ. ಪಿಯು ಇಲಾಖೆ ಜಿಲ್ಲಾ ಉಪನಿರ್ದೇಶಕರ ಮಾರ್ಗದರ್ಶನದಂತೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ತಮ್ಮ ವ್ಯಾಪ್ತಿಯಲ್ಲಿ ಪಿಯು ಪೂರೈಸದಿರುವ ಹಳ್ಳಿಗಳನ್ನು ಗುರುತಿಸಿ ಆ.30ರೊಳಗೆ ಮಾಹಿತಿಯನ್ನು ಇಲಾಖೆಯ ಕೇಂದ್ರ ಕಚೇರಿಗೆ ತಲುಪಿಸಬೇಕು. ಸಮೀಕ್ಷೆ ಹೇಗೆ ಮಾಡಬೇಕು ಎಂಬುದರ ಮಾನದಂಡವನ್ನು ನೀಡಲಾಗಿದೆ. ಹಳ್ಳಿಯ ಹೆಸರು, ಹಳ್ಳಿಯ ಕೋಡ್‌, ವಿದ್ಯಾರ್ಥಿಯ ಹೆಸರು, ವಿಳಾಸ, ವಯಸ್ಸು, ಪಿಯು ಸೇರಿಕೊಳ್ಳದಿರಲು ಅಥವಾ ಪಾಸಾಗದಿರುವ ಕಾರಣ, ವಿದ್ಯಾರ್ಥಿ ಸಹಿ ಇತ್ಯಾದಿ ಅಂಶಗಳನ್ನು ಪ್ರಾಂಶುಪಾಲರು ಅಥವಾ ಉಪನ್ಯಾಸಕರು ಭರ್ತಿ ಮಾಡಬೇಕು. ಇದಕ್ಕೆ ಸಂಬಂಧಿಸಿದ ಪೂರಕ ಮಾಹಿತಿಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪಡೆಯಲಿದ್ದಾರೆ.

Advertisement

ಪಿಯು ಪೂರೈಸಿದ ವಿದ್ಯಾರ್ಥಿಗಳಿಲ್ಲದ ಹಳ್ಳಿಗಳನ್ನು ಪಟ್ಟಿ ಮಾಡಲಾಗುತ್ತಿದೆ. ಪಿಯು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಅಥವಾ ಸೇರಿಕೊಳ್ಳದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿ, ಖಾಸಗಿ ಅಭ್ಯರ್ಥಿಯ ಆಧಾರದಲ್ಲಿ ಪಿಯು ಪರೀಕ್ಷೆ ಬರೆಯಲು ಬೇಕಾದ ವ್ಯವಸ್ಥೆ ಮಾಡಲಿದ್ದೇವೆ.
– ಸಿ.ಶಿಖಾ, ನಿರ್ದೇಶಕಿ, ಪಿಯು ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next