Advertisement

ಸರ್ವೇ ಸಂದರ್ಭ ಲಕ್ಷಣ ಪತ್ತೆ: ಬೆಳೆಗಾರರಿಗೆ ಆತಂಕ

01:13 AM Feb 05, 2022 | Team Udayavani |

ಪುತ್ತೂರು: ಹಲವು ದಶಕಗಳಿಂದ ಸುಳ್ಯ ತಾಲೂಕಿನ ಅಡಿಕೆ ತೋಟಗಳನ್ನು ಹಿಂಡಿ ಹಿಪ್ಪೆ ಮಾಡಿರುವ ಹಳದಿ ಎಲೆ ರೋಗವು ಪುತ್ತೂರು ತಾಲೂಕಿಗೂ ವಿಸ್ತರಿಸಿದ್ದು, ಕೆಲವು ಗ್ರಾಮಗಳಲ್ಲಿ ರೋಗ ಲಕ್ಷಣಗಳು ಬೆಳಕಿಗೆ ಬಂದಿವೆ.
ಔಷಧವೇ ಇಲ್ಲದ ರೋಗ ಇದು. ಅಡಿಕೆ ಗಿಡ ಸಂಪೂರ್ಣ ನಾಶದಂಚಿಗೆ ತಲುಪುವ ಈ ರೋಗ ತೀವ್ರ ವಾಗಿ ಹರಡುತ್ತಿದ್ದು, ಉಭಯ ತಾಲೂಕುಗಳ ಪ್ರಮುಖ ವಾಣಿಜ್ಯ ಬೆಳೆಯ ಅಸ್ತಿತ್ವದ ಮೇಲೆ ಕರಿ ನೆರಳು ಬಿದ್ದಿದೆ.

Advertisement

ಪುತ್ತೂರಿಗೆ ವಿಸ್ತರಣೆ
40 ವರ್ಷಗಳ ಹಿಂದೆ ಸಂಪಾಜೆ, ಅರಂತೋಡು ಭಾಗದಲ್ಲಿ ಕಾಣಿಸಿಕೊಂಡ ಈ ರೋಗ ಅಲ್ಲಿನ ತೋಟಗಳನ್ನು ಸಂಪೂರ್ಣವಾಗಿ ನಾಶ ಮಾಡಿದೆ. ಕಡಬ ತಾಲೂಕಿನ ಕಾಣಿಯೂರು ಪರಿಸರದ ಕೆಲವು ತೋಟಗಳಲ್ಲಿ ರೋಗ ಲಕ್ಷಣ ಕಂಡುಬಂದಿತ್ತು. ಈಗ ಪುತ್ತೂರು ತಾಲೂಕಿನ ಗ್ರಾಮಕ್ಕೆ ವಿಸ್ತರಿಸಿದೆ. ರೋಗದ ನಿಯಂತ್ರಣಕ್ಕೆ ವಿಜ್ಞಾನಿಗಳ ತಂಡ ಹಲವು ಪ್ರಯತ್ನ ನಡೆಸಿದರೂ ಫಲ ನೀಡಿಲ್ಲ.

ಕೊಡಿಪ್ಪಾಡಿಯಲ್ಲಿ ರೋಗ ಲಕ್ಷಣ
ತಾಲೂಕಿನ ಕೊಡಿಪ್ಪಾಡಿ, ಕುಟ್ರಪ್ಪಾಡಿ ಗ್ರಾಮಗಳಲ್ಲಿ ಹಳದಿ ರೋಗ ಬಾಧಿತ ಅಡಿಕೆ ಮರಗಳು ಪತ್ತೆಯಾಗಿವೆ. ವಿಟ್ಲ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಸರ್ವೇ ವೇಳೆ ಇದು ಕಂಡುಬಂದಿದೆ. ಅಂತಿಮ ವರದಿ ಸಲ್ಲಿಕೆಯ ಬಳಿಕ ಉಳಿದ ಗ್ರಾಮಗಳ ಚಿತ್ರಣ ಸಿಗಲಿದೆ. ಐದಾರು ಗ್ರಾಮಗಳಲ್ಲಿ ರೋಗ ಲಕ್ಷಣ ಇರುವ ಮಾಹಿತಿ ಲಭ್ಯವಾಗಿದೆ. ವಿಟ್ಲ ವ್ಯಾಪ್ತಿಯಲ್ಲಿ 15ಕ್ಕೂ ಅಧಿಕ ತೋಟಗಳಲ್ಲಿ ರೋಗ ಲಕ್ಷಣ ಪತ್ತೆಯಾಗಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

1,043.38 ಹೆಕ್ಟೇರ್‌ ಬಾಧಿತ ಪ್ರದೇಶ
ದ.ಕ. ಜಿಲ್ಲೆಯಲ್ಲಿ ಅಡಿಕೆ ಹಳದಿ ರೋಗದಿಂದ ಸುಳ್ಯ ತಾಲೂಕಿನ ಬಾಧಿತ ಪ್ರದೇಶಗಳ ವ್ಯಾಪ್ತಿ ಮತ್ತು ತೀವ್ರತೆಯ ಅಂಕಿಅಂಶಗಳನ್ನು ನಿಖರ ಅಧ್ಯಯನ ಮಾಡಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಲುವಾಗಿ ಜನವರಿಯಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಸಂಪಾಜೆ, ಅರಂತೋಡು, ಆಲೆಟ್ಟಿ, ಉಬರಡ್ಕ, ಮರ್ಕಂಜ,ನೆಲ್ಲೂರು ಕೆಮ್ರಾಜೆ, ಮಡಪ್ಪಾಡಿ, ಕೊಡಿಯಾಲ, ಕೊಲ್ಲಮೊಗ್ರು, ಹರಿಹರ ಪಳ್ಳತ್ತಡ್ಕ ಗ್ರಾ.ಪಂಚಾಯತ್‌ ವ್ಯಾಪ್ತಿಯಲ್ಲಿ 13,993 ಸರ್ವೇ ನಂಬರ್‌ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ್ದು, ಒಟ್ಟು 7,048 ಸರ್ವೇ ನಂಬರ್‌ ವ್ಯಾಪ್ತಿಯಲ್ಲಿ ರೋಗ ಬಾಧೆ ಕಂಡುಬಂದಿತ್ತು. 1,043.38 ಹೆಕ್ಟೇರ್‌ಗಳಲ್ಲಿ ಸುಮಾರು 14,29,440 ಅಡಿಕೆ ಮರಗಳು ರೋಗಬಾಧಿತ ಎಂದು ಪರಿಗಣಿಸಿ ವರದಿ ಸಲ್ಲಿಸಲಾಗಿದೆ.

ಪರಿಹಾರ ಮರೀಚಿಕೆ
ಹಳದಿ ರೋಗ ಬಾಧಿತ ಪ್ರದೇಶದ ಬೆಳೆಗಾರರ ನೆರವಿಗೆಂದು ಬಜೆಟ್‌ನಲ್ಲಿ ಮೀಸಲಿರಿಸಿದ 25 ಕೋ.ರೂ. ಅನುದಾನವನ್ನು ಸಂಶೋಧನೆಗೆ ಬಳಸಲು ನಿರ್ಧರಿಸಿದ್ದು, ಬೆಳೆಗಾರರಿಗೆ ನಷ್ಟ ಪರಿಹಾರ ದೊರೆಯುವುದು ಅನುಮಾನ. 8.5 ಕೋ.ರೂ.ಗಳನ್ನು ಶಿವಮೊಗ್ಗ ತೋಟಗಾರಿಕೆ ಸಂಶೋಧನ ಕೇಂದ್ರಕ್ಕೂ ಉಳಿದ ಮೊತ್ತವನ್ನು ತೋಟಗಾರಿಕೆ ಇಲಾಖೆ ಮೂಲಕ ಹಳದಿ ರೋಗ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಲೆಂದು ಮೀಸಲಿಡ ಲಾಗಿದೆ. ಹಾಗಾಗಿ ಎಕರೆಗೆ ಇಂತಿಷ್ಟು ಪರಿಹಾರ ಪಡೆದು ಪರ್ಯಾಯ ಬೆಳೆಗೆ ಹೊರಳುವ ಕೃಷಿಕರ ಕನಸು ಭಗ್ನವಾಗಿದೆ.

Advertisement

ಹಳದಿ ರೋಗದ ಲಕ್ಷಣ
ಅಡಿಕೆ ಮರದ ಎಲೆಗಳ ಅಂಚು ಹಳದಿ ಬಣ್ಣಕ್ಕೆ ತಿರುಗಿ ಬಳಿಕ ಪೂರ್ತಿ ಎಲೆ ಹಳದಿ, ಹಸುರು ಪಟ್ಟಿಯಿಂದ ಆವೃತವಾಗುವುದು. ಎಲೆ ಒಣಗುವುದು, ರೋಗ ಬಾಧೆಯ ಮರದ ಅಡಿಕೆಯು ಕಂದು ಬಣ್ಣದ್ದಾಗಿದ್ದು, ಬಳಕೆಗೆ ಯೋಗ್ಯವಾಗಿರುವುದಿಲ್ಲ, ಕೆಲವು ವರ್ಷಗಳಲ್ಲಿ ಅಡಿಕೆ ಮರವು ಸಂಪೂರ್ಣವಾಗಿ ಒಣಗಿ ಸಾಯುತ್ತವೆ.

ಪುತ್ತೂರು ತಾಲೂಕಿ ನಲ್ಲಿಯೂ ಹಳದಿ ಎಲೆ ರೋಗದ ಲಕ್ಷಣ ಕಂಡು ಬಂದಿದೆ. ಹಳದಿ ರೋಗದ ಬಗ್ಗೆ ತಾಲೂಕಿನ ಗ್ರಾಮಗಳಲ್ಲಿ ಸರ್ವೇ ನಡೆದಿದ್ದು, ಪೂರ್ಣಗೊಂಡ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.
-ಡಾ| ಸಿ.ಟಿ. ಜೋಸೆ
ಮುಖ್ಯಸ್ಥರು, ವಿಟ್ಲ ಸಿಪಿಸಿಆರ್‌ಐ

ಹಳದಿ ರೋಗ ಕ್ಷಿಪ್ರವಾಗಿ ಹಬ್ಬುತ್ತಿದ್ದು, ಪುತ್ತೂರಿನ ಕೊಡಿಪ್ಪಾಡಿ ಗ್ರಾಮದಲ್ಲಿಯೂ ಕಂಡುಬಂದಿದೆ. ಈ ಬಗ್ಗೆ ಸಿಪಿಸಿಆರ್‌ಐಯವರು ತತ್‌ಕ್ಷಣ ವರದಿ ನೀಡಬೇಕು. ತೋಟಗಾರಿಕೆ ಇಲಾಖೆಯು ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.
-ಸಂಜೀವ ಮಠಂದೂರು
ಶಾಸಕ, ಪುತ್ತೂರು

 

 

Advertisement

Udayavani is now on Telegram. Click here to join our channel and stay updated with the latest news.

Next