Advertisement

ಸಮಾಜ ಕಲ್ಯಾಣ ಕಾರ್ಯಕ್ರಮ ಮೇಲಿರಲಿ ಕಣ್ಗಾವಲು

04:57 PM Sep 30, 2021 | Team Udayavani |

ಬೀದರ: ವಸತಿ ಶಾಲೆ, ಪ್ರೋತ್ಸಾಹ ಧನ, ಶಿಷ್ಯವೇತನ ಹೀಗೆ ವಿವಿಧ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ಮೇಲೆ ಇಲಾಖೆ ತಾಲೂಕು ಅಧಿ ಕಾರಿಗಳು ಕಣ್ಗಾವಲು ಇಟ್ಟು ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಲಹೆ ಮಾಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಎಸ್‌ ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾರ್ಯಕ್ರಮ ಮತ್ತು ಅನುದಾನದ ಬಳಕೆಯ ಪ್ರಕ್ರಿಯೆ ನಿಗದಿಪಡಿಸಿದ ಸಮಯದಲ್ಲಿ ನಡೆಸಬೇಕು. ಸಂವಿಧಾನದ ಬದ್ಧತೆಯನ್ನು ಹೊಂದಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು.

ನಿಯಮಾನುಸಾರ ಪಡೆದುಕೊಂಡ ಟೆಂಡರ್‌ದಾರರೇ ವಸ್ತುಗಳನ್ನು ಖರೀದಿಸಿ ನೀಡಬೇಕು. ಕರ್ತವ್ಯದಲ್ಲಿ ಲೋಪವಾದರೆ ಯಾರಿಗೂ ರಕ್ಷಣೆ ಕೊಡುವುದಿಲ್ಲ. ಅಂತವರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಅ ಧಿಕಾರಿಗಳಿಗೆ ಎಚ್ಚರಿಸಿದರು.

15 ದಿನ ಗಡುವು-ಅಧಿಕಾರಿಗಳಿಗೆ ನೋಟಿಸ್‌: ಸಮಾಜ ಕಲ್ಯಾಣ ಇಲಾಖೆಯ ಯೋಜನೆಯಡಿ ಮಕ್ಕಳಿಗೆ ಪ್ರೋತ್ಸಾಹ ಧನ ಮಂಜೂರಾತಿಗೆ ತೊಡಕಾಗಿ ಪರಿಣಮಿಸಿರುವ ಆಧಾರ್‌ ಜೋಡಣೆ ಪ್ರಕ್ರಿಯೆಯನ್ನು ಮುಂಬರುವ 15ದಿನದೊಳಗೆ ಪೂರ್ಣಗೊಳಿಸಬೇಕು ಎಂದು ಸಚಿವರು ಇದೇ ವೇಳೆ ಸಂಬಂ ಧಿಸಿದ ಅಧಿಕಾರಿಗಳಿಗೆ ಗಡುವು ವಿಧಿಸಿದರು.

2020-21ನೇ ಸಾಲಿನಲ್ಲಿ ದೌರ್ಜನ್ಯದಲ್ಲಿ ನೊಂದಂತಹ 25 ಯುವಕರ ಕುಟುಂಬಗಳ ಪೈಕಿ 23 ಪ್ರಕರಣಗಳಿಗೆ ಪರಿಹಾರ ಧನ ನೀಡಲಾಗಿದೆ. 21-22ನೇ ಸಾಲಿನಲ್ಲಿ 22 ಕುಟುಂಬಗಳ ಪೈಕಿ 20 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. ಮಟ್ರಿಕ್‌ ಪೂರ್ವ 41,000 ಮಕ್ಕಳಿಗೆ 5.50 ಲಕ್ಷ ರೂ.ನಷ್ಟು ಮತ್ತು ಮೆಟ್ರಿಕ್‌ ನಂತರದ 14,367 ವಿದ್ಯಾರ್ಥಿಗಳಿಗೆ 12.41 ಲಕ್ಷ ರೂ.ನಷ್ಟು ವಿದ್ಯಾರ್ಥಿ ವೇತನ ಮಂಜೂರಿ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಬಸವರಾಜ ಬಡಿಗೇರ್‌ ಸಭೆಗೆ ಮಾಹಿತಿ ನೀಡಿದರು.

Advertisement

ಈ ಸಂದರ್ಭದಲ್ಲಿ ಶಾಸಕ ರಹೀಂಖಾನ್‌, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪೂರೆ, ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌, ಜಿಪಂ ಸಿಇಒ ಜಹೀರಾ ನಸೀಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್‌., ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಪ್ರೋಬೇಷನರಿ ಐಎಎಸ್‌ ಅಧಿಕಾರಿ ಕೀರ್ತನಾ, ಅಪರ ಜಿಲ್ಲಾಧಿಕಾರಿ ಬಿ.ಬಾಬುರೆಡ್ಡಿ, ಸಹಾಯಕ ಆಯುಕ್ತರಾದ ಡಾ| ಭುವನೇಶ ಪಾಟೀಲ, ಗರೀಮಾ ಪನ್ವಾರ, ಜಿಪಂನ ಉಪ ಕಾರ್ಯದರ್ಶಿ ಸೂರ್ಯಕಾಂತ ಎಸ್‌., ಯೋಜನಾ ನಿರ್ದೇಶಕರಾದ ವಿಜಯಕುಮಾರ ಮಡ್ಡೆ, ಮುಖ್ಯ ಯೋಜನಾಧಿಕಾರಿ ಎಸ್‌.ಎಸ್‌. ಮಠಪತಿ ಇದ್ದರು.

ಬೀದರ ಗಡಿ ಜಿಲ್ಲೆಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜನರ ಅಗತ್ಯನುಸಾರ ಕಾರ್ಯಕ್ರಮಗಳನ್ನು ನೀಡಿ ಸಮರ್ಪಕ ಅನುದಾನ ನೀಡಬೇಕು. ವಿದ್ಯಾರ್ಥಿಗಳಿಗೆ ಕಳದೆರಡು ವರ್ಷಗಳಿಂದ ಸ್ಕಾಲರಶೀಪ್‌ ಸಿಕ್ಕಿಲ್ಲ. ಹಾಗಾಗಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದು, ಅರ್ಧಕ್ಕೆ ಶಿಕ್ಷಣ ನಿಲ್ಲುವಂಥ ಪರಿಸ್ಥಿತಿ ಇದೆ. ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
ಈಶ್ವರ ಖಂಡ್ರೆ, ಭಾಲ್ಕಿ ಶಾಸಕ

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ವಹಿಸಬೇಕು. ಸಭೆಗೆ ಅಸಮರ್ಪಕ ಮಾಹಿತಿ ಕೊಡುವುದನ್ನು ಅಧಿಕಾರಿಗಳು ಮುಂದುವರೆದರೆ ತಾವು ಸುಮ್ಮನಿರುವುದಿಲ್ಲ.
ಅರವಿಂದಕುಮಾರ ಅರಳಿ, ಎಂಎಲ್‌ಸಿ

Advertisement

Udayavani is now on Telegram. Click here to join our channel and stay updated with the latest news.

Next