Advertisement

ಜಿಲ್ಲೆಗೆ ಪ್ರವೇಶಿಸುವವರ ಮೇಲೆ ಕಣ್ಗಾವಲು

03:07 PM Apr 18, 2020 | mahesh |

ಹಾಸನ: ಕೋವಿಡ್ -19 ಸೋಂಕು ನಿಯಂತ್ರಿಸಲು ಇನ್ನೂ ಮೂರು ವಾರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಹೊರಗಿನಿಂದ ಜಿಲ್ಲೆಯನ್ನು ಪ್ರವೇಶಿಸುವವರ ಮೇಲೆ ಕಣ್ಗಾವಲಿಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೂ ಕೊರೊನಾ ಪ್ರಕರಣಗಳು ಕಂಡು ಬಂದಿಲ್ಲ. ಇದೇ ಪರಿಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಲು ಜನರು ಸಹಕಾರ ನೀಡಬೇಕು. ಹೊರ ಜಿಲ್ಲೆಯವರು ಹಾಸನ ಜಿಲ್ಲೆಗೆ ಪ್ರವೇಶಿಸುವುದನ್ನು ತಡೆಯಲು ಗಡಿಯಲ್ಲಿ 15 ಚೆಕ್‌ಪೋಸ್ಟ್‌ ಹಾಗೂ ನಗರ ಹಾಗೂ ಪಟ್ಟಣಗಳಲ್ಲಿ 23 ಸೇರಿ ಒಟ್ಟು 38 ಚೆಕ್‌ ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅನುಮತಿ ಪಡೆದು ಬರುತ್ತಿರುವವನ್ನು ಚೆಕ್‌ಪೋಸ್ಟ್‌ಗಳಲ್ಲಿಯೇ ಪರೀಕ್ಷೆ ಮಾಡಿಸೀಲ್‌ ಹಾಕಿ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗುತ್ತಿದೆ.

ಚೆಕ್‌ಪೋಸ್ಟ್‌ನಲ್ಲಿರುವವರ ಕಣ್ತಪ್ಪಿಸಿ ಒಳ ದಾರಿಗಳ ಮೂಲಕ ಹೊರ ಜಿಲ್ಲೆಗಳಿಂದ ಬರುವವರ ಬಗ್ಗೆ ಪಿಡಿಒಗಳು ನಿಗಾ ವಹಿಸಲಿದ್ದಾರೆ. ಅಂತಹವರು ಪತ್ತೆಯಾದರೆ 15 ದಿನ ಕ್ವಾರಂ ಟೈನ್‌ನಲ್ಲಿಡಲಾಗುವುದು. ಮೇ3 ರವರೆಗೂ ಅಂತರ ಜಿಲ್ಲಾ ಸಂಚಾರಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

500 ರೂ., 1000 ರೂ. ದಂಡ: ಪೊಲೀಸ್‌ ಸಿಬ್ಬಂದಿಯ ಜೊತೆಗೆ ಕೆಎಸ್‌ಆರ್‌ಟಿಸಿಯ 50 ನೌಕರರನ್ನು ಸೇವೆ ಸೇರಿಸಿಕೊಳ್ಳಲಾಗಿದೆ. ನಿಯಮ ಉಲ್ಲಂಘಿಸಿ ಓಡಾಡುವ ಬೈಕ್‌ ಸವಾರರಿಗೆ 500 ರೂ., ಲಘು ವಾಹನಗಳಿಗೆ ಸಾವಿರ ರೂ. ದಂಡ ವಿಧಿಸಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳದ ದಿನಸಿ, ತರಕಾರಿ ಅಂಗಡಿ ಮಾಲೀಕರಿಗೆ 500 ರೂ. ದಂಡ ವಿಧಿಸಲಾಗುವುದು ಎಂದರು.

1.20 ಕೋಟಿ ರೂ. ಖರ್ಚು: ಕೋವಿಡ್ -19 ನಿಯಂತ್ರಣ ಕ್ರಮಗಳಿಗೆ ಸರ್ಕಾರ ಹಾಸನ ಜಿಲ್ಲೆಗೆ 1.20 ಕೋಟಿ ರೂ. ಬಿಡುಗಡೆ ಮಾಡಿತ್ತು. ಅದರಲ್ಲಿ ಒಂದು ಕೋಟಿ ರೂ.ಗಳನ್ನು ಅಗತ್ಯ ಸಾಮಗ್ರಿಗಳ ಖರೀದಿಗೆ ಬಳಸಲಾಗುತ್ತಿದೆ. ಎಲ್ಲಾ ತಹಶೀಲ್ದಾರಿಗೂ ತಲಾ 2 ಲಕ್ಷ ರೂ. ಬಿಡುಗಡೆ ಮಾಡಿ. ಎನ್‌ ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮಾಗದರ್ಶಿ ಸೂತ್ರಗಳ ಪ್ರಕಾರ ಖರ್ಚು ಮಾಡಬೇಕೆಂದು ಲಿಖೀತ ಸೂಚನೆ ನೀಡಿದ್ದು, ಹಣದ ಅಗತ್ಯವಿದ್ದರೆ ಮತ್ತೆ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

ಈರುಳ್ಳಿ, ಬೆಳ್ಳುಳ್ಳಿ ಮಾರಾಟ: ಜಿಲ್ಲೆಯ 175 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಈರುಳ್ಳಿ, ಬೆಳ್ಳುಳ್ಳಿ ಮಾರಾಟದ ವ್ಯವಸ್ಥೆ ಮಾಡಿದ್ದು, ರೈತರು ಬೆಳೆದ ಹಣ್ಣು, ತರಕಾರಿ ಮಾರಾಟವಾಗದೇ ನಷ್ಟವಾಗಿದ್ದರೆ ಅದರ ಬಗ್ಗೆ ಸಮೀಕ್ಷೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ ಎಂದು ಹೇಳಿದರು.

2912 ಕೇಸ್‌ ದಾಖಲು: ಎಸ್ಪಿ ಶ್ರೀನಿವಾಸಗೌಡ ಮಾತನಾಡಿ, ಲಾಕ್‌ಡೌನ್‌ ಉಲ್ಲಂಘನೆ ಸಂಬಂಧ 2,912 ಕೇಸ್‌ ದಾಖಲು ಮಾಡಿದ್ದು, 16.13 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದುವರೆಗೂ 188 ಜನರು ಒಳದಾರಿಗಳಲ್ಲಿ ನುಸುಳಿ ಬಂದಿದ್ದು, ಅವರನ್ನು ಪತ್ತೆಹಚ್ಚಿ ಕ್ವಾರಂಟೈನ್‌ನಲ್ಲಿಡಲಾಗಿದೆ ಎಂದು ತಿಳಿಸಿದರು.

ನರೇಗಾದಡಿ 1,944 ಕಾಮಗಾರಿ: ಜಿಪಂ ಸಿಇಒ ಪರಮೇಶ್‌ ಅವರು ಮಾತನಾಡಿ, ಲಾಕ್‌ಡೌನ್‌ ಜಾರಿಯ ನಂತರ ಕೆಲಸದ ಅಗತ್ಯವಿದ್ದವರಿಗೆ ಮಹಾತ್ಮಗಾಂಧಿ ನರೇಗಾಡಡಿ 1,944 ಕಾಮಗಾರಿ ಆರಂಭವಾಗಿವೆ ಎಂದರು. ಡಿಎಚ್‌ಒ ಡಾ.ಸತೀಶ್‌ ಕುಮಾರ್‌, ಉಪವಿಭಾಗಾಧಿಕಾರಿ ಡಾ.ನವೀನ್‌ಭಟ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next