ಹಾವೇರಿ: ಜಿಲ್ಲೆಯಲ್ಲಿ ಹೋಂ ಕ್ವಾರೆಂಟೈನ್ ನಲ್ಲಿರುವವರ ಚಟುವಟಿಕೆ ಮೇಲೆ ತೀವ್ರ ನಿಗಾ ವಹಿಸಲು ಪೊಲೀಸ್ ಬೀಟ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು ತಿಳಿಸಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.ಮನೆಯಲ್ಲಿ ಇರುವಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಕಾಲಕಾಲಕ್ಕೆ ಮನೆಗೆ ಭೇಟಿ ನೀಡಿ ಹೋಂ ಕ್ವಾರಂಟೈನ್ ವ್ಯಕ್ತಿಗಳ ಫೋಟೋವನ್ನು ಪೊಲೀಸ್ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಕಳುಹಿಸಲು ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಲಾಕ್‌ಡೌನ್ ಮೇ 3ರ ವರೆಗೆ ವಿಸ್ತರಿಸಲಾಗಿದ್ದು ಲಾಕ್‌ಡೌನ್ ಅನುಷ್ಠಾನಕ್ಕೆ ಏ. 20ರ ವರೆಗೆ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲನೆ ಮಾಡಲು ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ವಶಪಡಿಸಿಕೊಳ್ಳುವುದು, ದಂಡ ಹಾಕುವುದು, ಪ್ರಕರಣ ದಾಖಲಿಸುವುದು, ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ನೀಡದಂತೆ ಮಾಡಲಾಗಿದೆ. ಇದರ ಜತೆಗೆ ಒಳರಸ್ತೆಗಳಲ್ಲಿಯೂ ಬ್ಯಾರಿಕೇಡ್ ಹಾಕಲಾಗಿದೆ. ಗಡಿ ಪ್ರದೇಶ ಸೇರಿದಂತೆ ಎಲ್ಲ 24 ಚೆಕ್‌ಪೋಸ್ಟ್‌ಗಳಲ್ಲಿ ಕಣ್ಗಾವಲು ವಹಿಸಲಾಗಿದೆ. ತರಕಾರಿ, ದಿನಸಿ ಸೇರಿದಂತೆ ಎಲ್ಲ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ ವಹಿಸಲಾಗಿದೆ ಎಂದರು.
ಲಾಕ್‌ಡೌನ್ ಆದ ಅವಧಿಯಿಂದ ಈವರೆಗೆ 5116 ವಾಹನಗಳಿಗೆ ದಂಡ ಹಾಕಲಾಗಿದೆ. 25.12 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. 839 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 12 ಅಬಕಾರಿ ಪ್ರಕರಣಗಳನ್ನು ಪತ್ತೆ ಮಾಡಿ 5.50 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವುದನ್ನು ನಿಲ್ಲಿಸಿ ಮನೆಯಲ್ಲಿಯೇ ಉಳಿದು ಕೋವಿಡ್ 19 ನಿಯಂತ್ರಣಕ್ಕೆ ಸಹಕರಿಸಬೇಕು. ವೈದ್ಯಕೀಯ ಕಾರಣ ತುರ್ತು ಸಂದರ್ಭಗಳಲ್ಲಿ ವಿನಾಯಿತಿ ನೀಡಲಾಗುವುದು. ತರಕಾರಿ, ದಿನಸಿ, ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧ ಇಲ್ಲ. ದಿನಸಿ ಅಂಗಡಿಗಳ ತೆರೆಯಲು ಯಾವುದೇ ಸಮಯದ ನಿರ್ಬಂಧ ಇಲ್ಲ. ಆದರೆ, ಸಾಮಾಜಿಕಅಂತರ ಕಾಯ್ದುಕೊಳ್ಳಬೇಕು ಎಂದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‌ಪಿ ವಿಜಯಕುಮಾರ ಇದ್ದರು.