ದೀಪಾವಳಿಗೆ ಇನ್ನೂ ಐದು ದಿನ ಇರುವಾಗಲೇ “ಸುಸ್ಸರ್‌ಬತ್ತಿ’ ಹಿಡಿದು ಬಂದುಬಿಟ್ಟಿದ್ದರು ಮುಗಿಲ್. ಈ ಹಿಂದೆ ಅವರು ನಾಲ್ಕು ಚಿತ್ರಗಳನ್ನು ಕನ್ನಡದಲ್ಲಿ ನಿರ್ದೇಶಿಸಿದ್ದರು. ಈಗ ಅವರು ತಮ್ಮ ಐದನೇ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ತಮ್ಮ ಹೊಸ ಚಿತ್ರಕ್ಕೆ “ಸುರ್‌ಸುರ್‌ಬತ್ತಿ’ ಎಂದು ಹೆಸರಿಟ್ಟಿದ್ದಾರೆ ಮುಗಿಲ್. ಈಗಾಗಲೇ ಅವರು ಚಿತ್ರವನ್ನು ಮುಗಿಸಿದ್ದಾರೆ. ಈ ಖುಷಿಯಲ್ಲಿ ಅವರು ತಮ್ಮ ತಂಡದೊಂದಿಗೆ ಮಾಧ್ಯಮದವರೆದರುರು ಪ್ರತ್ಯಕ್ಷರಾಗಿದ್ದಾರೆ.
“ಸುರ್‌ಸುರ್‌ಬತ್ತಿ’ ಚಿತ್ರದಲ್ಲಿ ಆರವ್ (ಬಸವಟ್ಟಿ ಲೋಕೇಶ್) ಮತ್ತು ವೈಷ್ಣವಿ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಹಿರಿಯ ನಟಿ ಊರ್ವಶಿ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರವ್‌ನ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು, ಅಂದಿನ ಪತ್ರಿಕಾಗೋಷ್ಠಿಯ ಹೈಲೈಟ್ ಎಂದರೆ ತಪ್ಪಿಲ್ಲ. “ಚಿತ್ರದಲ್ಲಿ ಸೆಂಟಿಮೆಂಟ್ ಮತ್ತು ಕಾಮಿಡಿ ಎರಡೂ ಇದೆ.
ಈ ಚಿತ್ರದಲ್ಲಿ ಯಾರೂ ವಿಲನ್ ಅಲ್ಲ, ಪರಿಸ್ಥಿತಿಗಳೇ ವಿಲನ್ ಎಂದರೆ ತಪ್ಪಿಲ್ಲ. ಹೊಸಬರೆಲ್ಲಾ ಸೇರಿ ಒಂದೊಳ್ಳೆಯ ಚಿತ್ರವನ್ನು ಮಾಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ, ಕನ್ನಡದ ಜನತೆ ಸಾಕಷ್ಟು ಹೊಸಬರನ್ನು ಪ್ರೋತ್ಸಾಹಿಸುವುದನ್ನು ನಾನು ನೋಡಿದ್ದೇನೆ. ಇಲ್ಲಿ ಆರವ್‌ಗೆ ಒಂದೊಳ್ಳೆಯ ಪಾತ್ರವಿದೆ. ಅವರ ಕಾಮಿಡಿ ಟೈಮಿಂಗ್ ಬಹಳ ಚೆನ್ನಾಗಿದೆ. ಬಹಳ ನೈಜವಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ’ ಎಂದು ಅವರು ಹೇಳಿದರು.
ಇನ್ನು ಚಿತ್ರದಲ್ಲಿ ಡಬ್ಬಿಂಗ್ ಮಾಡಿದ್ದಾಗಿ ಹೇಳಿಕೊಂಡ ಅವರು, “ನಾನು “ಕೋತಿಗಳು ಸಾರ್ ಕೋತಿಗಳು’ ಚಿತ್ರದಲ್ಲಿ ನಟಿಸುವಾಗ ಹಿರಿಯ ಪತ್ರಕರ್ತರು ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡಬೇಕು ಎಂದು ಹೇಳಿದ್ದರು. ಅಲ್ಲಿಂದ ನನ್ನ ಪಾತ್ರಗಳಿಗೆ ನಾನೇ ಡಬ್ಬಿಂಗ್ ಮಾಡಿಕೊಂಡು ಬಂದಿದ್ದೇನೆ. ಈ ಚಿತ್ರದಲ್ಲೂ ಮುಂದುವರೆಸಿದ್ದೇನೆ’ ಎಂದು ಅವರು ಹೇಳಿದರು. ಬಸವಟ್ಟಿ ಲೋಕೇಶ್ ಅಲಿಯಾಸ್ ಆರವ್ ಈ ಹಿಂದೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು.
ಈ ಹಿಂದೆ “ಚತುಭುಜ’ ಎಂಬ ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಅವರಿಂದ ಒಂದು ಪಾತ್ರವನ್ನು ಮಾಡಿಸಬೇಕು ಎಂದು ಮುಗಿಲ್ ಹೊರಟಾಗ, ಹಲವರು ಬೇಡ ಎಂದಿದ್ದರಂತೆ. ಆರವ್ ಅವರನ್ನಿಟ್ಟುಕೊಂಡು ಸಿನಿಮಾ ಮಾರ್ಕೆಟಿಂಗ್ ಮಾಡುವುದು ಕಷ್ಟ ಎಂದಿದ್ದರಂತೆ. ಆದರೂ ಅವಕಾಶ ಕೊಟ್ಟ ನಿರ್ದೇಶಕರ ಧೈರ್ಯವನ್ನು ಮೆಚ್ಚಿಕೊಳ್ಳುತ್ತಲೇ, ಚಿತ್ರ ಚೆನ್ನಾಗಿ ಮೂಡಿ ಬಂದಿರುವುದಾಗಿ ಹೇಳಿಕೊಂಡರು. ವೈಷ್ಣವಿಗೆ ಈ ಚಿತ್ರ ಒಳ್ಳೆಯ ಅನುಭವ ನೀಡಿತಂತೆ. ಅದೆಲ್ಲವನ್ನೂ ಅವರು ಹೇಳಿಕೊಂಡರು.
“ಸುರ್‌ಸುರ್‌ಬತ್ತಿ’ ಚಿತ್ರವನ್ನು ಕುಮಾರ್ ನಿರ್ಮಿಸಿದ್ದು, ಚಿತ್ರ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರ ಕಳೆದ ನವೆಂಬರ್‌ನಲ್ಲೇ ಪ್ರಾರಂಭವಾಗಿದ್ದು, ಕುಶಾಲನಗರ, ರಾಮನಗರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಪೃಥ್ವಿರಾಜ್ ಕುಲಕರ್ಣಿ ಮತ್ತು ಲೋಕೇಶ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎ.ಸಿ. ಮಹೇಂದರ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.