ಎನ್‌ಡಿಎ ಜತೆಗೆ ಅನೇಕ ಸಮೀಕ್ಷಾ ಸಂಸ್ಥೆಗಳೂ ಗುರುವಾರ ಗೆಲುವಿನ ನಗೆ ಬೀರಿವೆ. ಕಳೆದ ಭಾನುವಾರ ಹೊರಬಿದ್ದ ಮತದಾನೋತ್ತರ ಸಮೀಕ್ಷೆಗಳಲ್ಲಿ ಬಹುತೇಕ ಸಂಸ್ಥೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಜಯಭೇರಿ ಬಾರಿಸುತ್ತದೆ ಎಂದು ಭವಿಷ್ಯ ನುಡಿದಿದ್ದವು.
ಈಗ ಈ ಭವಿಷ್ಯ ನಿಜವಾಗುವ ಮೂಲಕ ಈ ಸಂಸ್ಥೆಗಳು ಮತದಾರರ ನಂಬಿಕೆಗೆ ಪಾತ್ರವಾಗಿದೆ. ಕೆಲವೇ ಕೆಲವು ಸಮೀಕ್ಷೆಗಳು ಮಾತ್ರವೇ ವಿಭಿನ್ನ ಫಲಿತಾಂಶ ಸೂಚಿಸಿದ್ದವು. ಆದರೆ ಹೆಚ್ಚಿನ ಸಮೀಕ್ಷಾ ಸಂಸ್ಥೆಗಳು ಸತ್ಯಕ್ಕೆ ಹತ್ತಿರವಾದ ಮಾಹಿತಿ ನೀಡಿದ್ದವು.
ಐಪಿಎಸ್‌ಒಎಸ್( ಎನ್‌ಡಿಎ- 336, ಯುಪಿಎ-82, ಇತರೆ-124), ಟುಡೇಸ್ ಚಾಣಕ್ಯ ನ್ಯೂಸ್ 24( ಎನ್‌ಡಿಎ- 350, ಯುಪಿಎ-95, ಇತರೆ-97), ಇಂಡಿಯಾ ಟುಡೇ- ಆ್ಯಕ್ಸಿಸ್ ಮೈ ಇಂಡಿಯಾ (ಎನ್‌ಡಿಎ- 339-365, ಯುಪಿಎ-77-108, ಇತರೆ-65-95) ಸಮೀಕ್ಷಾ ವರದಿಗಳ ಭವಿಷ್ಯ ನಿಜವಾಗಿವೆ.
ಕಣ್ಣೀರಿಟ್ಟ ಸಿಎಂಡಿ: ಎಕ್ಸಿಟ್ ಪೋಲ್ ಸಮೀಕ್ಷೆ ಬಹಿರಂಗವಾದ ಬಳಿಕ ಅತಿ ಹೆಚ್ಚು ಟೀಕೆಗಳನ್ನು ಎದುರಿಸಿದ್ದ ಆ್ಯಕ್ಸಿಸ್ ಮೈ ಇಂಡಿಯಾ ಸಂಸ್ಥೆಯ ಸಿಎಂಡಿ ಪ್ರದೀಪ್ ಗುಪ್ತಾ, ಫಲಿತಾಂಶದ ಬಳಿಕ ತಮ್ಮ ತಂಡದ ಸಮೀಕ್ಷೆ ನಿಜವಾಗಿದ್ದಕ್ಕೆ ಲೈವ್ ಕಾರ್ಯಕ್ರಮದಲ್ಲಿಯೇ ಭಾವುಕರಾಗಿ ಕಣ್ಣೀರಿಟ್ಟರು.
“ಕಳೆದ 40 ದಿನಗಳಿಂದ ಪ್ರತಿ ಲೋಕಸಭೆ ಮತ್ತು ವಿಧಾನ ಸಭೆ ಕ್ಷೇತ್ರಗಳಲ್ಲಿ ಚುನಾವಣೆ ಸಮೀಕ್ಷೆ ನಡೆಸುತ್ತಿದ್ದ ನನ್ನ ತಂಡದ ಮೇಲೆ ನನಗೆ ಪೂರ್ಣ ವಿಶ್ವಾಸವಿತ್ತು. ಈ ನಮ್ಮ ತಂಡದ ಸಮೀಕ್ಷೆ ನಿಜವಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು. ಸಮೀಕ್ಷೆಯಲ್ಲಿ ಎನ್‌ಡಿಎಗೆ 339-365, ಯುಪಿಎಗೆ 77-108 ಸ್ಥಾನಗಳನ್ನು ಗಳಿಸಲಿವೆ ಎಂದು ಆ್ಯಕ್ಸಿಸ್ ಮೈ ಇಂಡಿಯಾ ತಿಳಿಸಿತ್ತು.