Advertisement

ಸುಳ್ಯ-ಮಡಿಕೇರಿ ಪರ್ಯಾಯ ರಸ್ತೆ ಅಭಿವೃದ್ಧಿಗೆ ಇಲ್ಲ ಆಸಕ್ತಿ

10:32 PM Jul 10, 2019 | mahesh |

ಸುಳ್ಯ : ಸುಳ್ಯ ಮತ್ತು ಮಡಿಕೇರಿ ನಡುವಿನ ಪರ್ಯಾಯ ರಸ್ತೆ ಆಗಿರುವ ಸುಳ್ಯದಿಂದ ಆಲೆಟ್ಟಿ, ಬಡ್ಡಡ್ಕ, ಪಾಣತ್ತೂರು, ಕರಿಕೆ ಭಾಗಮಂಡಲ ರಸ್ತೆಯ ಆಯ್ದ ಭಾಗದ ದುರಸ್ತಿಗೆ ಅನುದಾನ ಲಭ್ಯವಿದ್ದರೂ ದುರಸ್ತಿಗೆ ಮನಸ್ಸು ಮಾಡಿಲ್ಲ.

Advertisement

ಸುಳ್ಯ-ಪಾಣತ್ತೂರು ರಸ್ತೆಯಲ್ಲಿ ಸುಳ್ಯ ತಾಲೂಕಿನ 10 ಕಿ.ಮೀ. ಸುಳ್ಯ ಆಲೆಟ್ಟಿ ಬಡ್ಡಡ್ಕದ ಮೂಲಕ ಬಾಟೋಳಿ ಗಡಿ ತನಕ ಡಾಮರು ಆಗಿದ್ದರೂ ಹೊಂಡ-ಗುಂಡಿ ಬಿದ್ದು ರಸ್ತೆ ಹದಗೆಟ್ಟು ಹೋಗಿದೆ. ಕಳೆದ ಮಳೆಗಾಲದ ಮಹಾ ಮಳೆಗೆ ರಸ್ತೆ ಹೊಂಡ-ಗುಂಡಿ ಬಿದ್ದು ಸಂಚಾರ ದುಸ್ತರವಾಗಿದೆ. ನಿರಂತರ ಒತ್ತಾಯ, ಶಾಸಕ ಎಸ್‌. ಅಂಗಾರ ಅವರ ನಿರ್ದೇಶನದ ಮೇರೆಗೆ ಈ ರಸ್ತೆಯ ದುರಸ್ತಿಗೆ ಮಳೆಹಾನಿ ದುರಸ್ತಿ ಯೋಜನೆಯಡಿ 25 ಲಕ್ಷ ರೂ. ಅನುದಾನ ಮೀಸಲಿರಿಸಲಾಗಿತ್ತು. ಆದರೆ ಮತ್ತೂಂದು ಮಳೆಗಾಲ ಬಂದರೂ ರಸ್ತೆಯ ದುರಸ್ತಿ ಕಾರ್ಯ ಮಾತ್ರ ಆಗಿಲ್ಲ.

ಗಾಂಧಿನಗರದಿಂದ ಗುರುಂಪು ತನಕ ಕಾಂಕ್ರೀಟ್ ಮತ್ತು ನಾಗಪಟ್ಟಣದಿಂದ ಗುಂಡ್ಯ ತನಕ ತೇಪೆ ಮಾಡಿ ದುರಸ್ತಿ ಮಾಡಲಾಗಿತ್ತು. ಸಂಪೂರ್ಣ ಹದಗೆಟ್ಟಿರುವ ಗುಂಡ್ಯದಿಂದ ಬಡ್ಡಡ್ಕ ತನಕ ದುರಸ್ತಿ ಬಾಕಿ ಉಳಿದಿದೆ. ಇದೀಗ ಮಳೆಗಾಲ ಆರಂಭಗೊಂಡರೂ ಹೊಂಡಗಳು ಬಾಯ್ದೆರೆದು ಕೆಸರು, ಮಳೆ ನೀರು ನಿಂತು ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ.

ಕಳೆದ ಜನವರಿಯಲ್ಲಿ ಅನುದಾನ ಮಂಜೂರಾಗಿದ್ದರೂ ಹಣ ಬಿಡುಗಡೆಗೆ ವಿಳಂಬ, ಚುನಾವಣ ನೀತಿ ಸಂಹಿತೆ ಮತ್ತಿ ತರ ಕಾರಣಗಳಿಂದ ಟೆಂಡರ್‌ ನಡೆಯಲು ವಿಳಂಬವಾಗಿ ಕಾಮಗಾರಿ ನಡೆಸಲಾಗಲಿಲ್ಲ ಎನ್ನುವುದು ಜಿ.ಪಂ. ಎಂಜಿನಿಯರರು ನೀಡುವ ಉತ್ತರ.

ರಾ.ಹೆ.ಗೆ ಪರ್ಯಾಯ ರಸ್ತೆ
ಸುಳ್ಯ-ಮಡಿಕೇರಿ ರಾ.ಹೆ.ಯ ಪರ್ಯಾಯ ರಸ್ತೆ ಸುಳ್ಯ ಕರಿಕೆ ರಸ್ತೆ. ಕಳೆದ ಮಳೆಗಾಲದಲ್ಲಿ ಭೂಕುಸಿತ, ರಸ್ತೆ ಕೊಚ್ಚಿ ಹೋಗಿ ಸಂಪಾಜೆ-ಮಡಿಕೇರಿ ಮಧ್ಯೆ ರಸ್ತೆ ಮುಚ್ಚಿದಾಗ ಪರ್ಯಾಯ ರಸ್ತೆಯಾಗಿ ಸುಳ್ಯ-ಪಾಣತ್ತೂರು-ಕರಿಕೆ ರಸ್ತೆಯನ್ನು ಬಳಸಿಕೊಳ್ಳಲಾಗಿತ್ತು. ಸುಳ್ಯದಿಂದ ಮಡಿಕೇರಿಗೆ ದಿನಾಲೂ ಸಾವಿರಾರು ವಾಹನಗಳು ಓಡಾಟ ನಡೆಸಿದವು. ಮಡಿಕೇರಿಯಿಂದ ಸುಳ್ಯಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸರ್ವೀಸ್‌ ಕೂಡ ನಡೆಸಿತ್ತು. ಸುಳ್ಯದಿಂದ ಕರಿಕೆ ಮೂಲಕ ಮಡಿಕೇರಿಗೆ 90 ಕಿ.ಮೀ. ದೂರವಿದೆ. ಇದರಲ್ಲಿ ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಸುಳ್ಯ-ಪಾಣತ್ತೂರು ರಸ್ತೆ ಎರಡೂ ರಾಜ್ಯಗಳಲ್ಲಿ ತಲಾ 10 ಕಿ.ಮೀ.ನಂತೆ 20 ಕಿ.ಮೀ. ದೂರವಿದೆ.

Advertisement

ಎರಡೂ ಬದಿ ವಿಸ್ತರಣೆ ಮಾಡಲು ಆಗ್ರಹ
ಅಗಲ ಕಿರಿದಾದ ತಿರುವುಗಳನ್ನೊಳಗೊಂಡ ರಸ್ತೆಯ ಪ್ರಯಾಣ ದುಸ್ತರವಾಗಿದೆ. ಕರ್ನಾಟಕದ ಭಾಗದಲ್ಲಿ 10 ಕಿ.ಮೀ. ರಸ್ತೆ ಡಾಮರು ಕಾಮಗಾರಿ ಆಗಿದ್ದರೂ ಹೊಂಡ-ಗುಂಡಿ ಬಿದ್ದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ. ಇದೀಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಡಿಕೇರಿ ಸಮೀಪ ರಸ್ತೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು ಆತಂಕ ಹೆಚ್ಚಿಸಿದೆ. ಜತೆಗೆ ಪರ್ಯಾಯ ರಸ್ತೆಯ ಸ್ಥಿತಿಯೂ ಅಯೋಮಯವಾಗಿದೆ. ಈಗಾಗಲೇ ಬಸ್‌ಗಳು ಸೇರಿ ನೂರಾರು ವಾಹನಗಳು ಓಡಾಟ ನಡೆಸುತ್ತಿವೆ. ಅನುದಾನವಿದ್ದರೂ ಸಾರ್ವಜನಿಕರಿಗೆ ಬಹೂಪಯೋಗಿ ಸಂಪರ್ಕ ರಸ್ತೆಯ ದುರಸ್ತಿ ಕಾರ್ಯ ನಡೆಸದ ಬಗ್ಗೆ ಸಾರ್ವಜನಿಕರು ಮತ್ತು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯ ಎರಡೂ ಬದಿ ವಿಸ್ತರಣೆ ಮಾಡಿ ದುರಸ್ತಿಪಡಿಸಬೇಕು ಎನ್ನುವ ಬೇಡಿಕೆ ನಿರಂತರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next