Advertisement

ಸುರಿಬೈಲು ಉನ್ನತೀಕರಿಸಿದ ಹಿ.ಪ್ರಾ. ಶಾಲೆ ಕೃಷಿಯಲ್ಲೂ ಮುಂದೆ

10:54 AM Nov 30, 2018 | Team Udayavani |

ವಿಟ್ಲ: ಕೊಳ್ನಾಡು ಗ್ರಾಮದ ಸುರಿಬೈಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷಿ ಸಂಪದ್ಭರಿತವಾಗಿದೆ. ಆ ನಿಟ್ಟಿನಲ್ಲಿ ಗಮನಿಸುವುದಾದರೆ ಈ ಶಾಲೆ ಬಿಸಿಯೂಟ ಯೋಜನೆಗೆ ಸಂಪೂರ್ಣ ಸ್ವಾವಲಂಬಿಯಾಗಿದೆ. ಸರಕಾರಿ ಶಾಲೆಯ ಈ ಗಮನಾರ್ಹ ಸಾಧನೆ ಇತರರಿಗೆ ಮಾದರಿಯಾಗಿದೆ.

Advertisement

ಸುರಿಬೈಲು ಶಾಲೆಗೆ ಈ ಹಿಂದೆ ಎರಡು ಪ್ರಶಸ್ತಿಗಳು ಲಭಿಸಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿತ್ತು. ಎಸ್‌ಡಿಎಂಸಿ ಅಧ್ಯಕ್ಷರ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ನೇತೃತ್ವದಲ್ಲಿ ಈ ಮಹತ್ಸಾಧನೆ ಗಮನ ಸೆಳೆದಿತ್ತು. ಶಾಲೆಗೆ ತಾಗಿಕೊಂಡಿರುವ ರಸ್ತೆ ಬದಿಯಲ್ಲಿ ತರಕಾರಿ ಹಾಗೂ ಗಿಡಮೂಲಿಕೆಗಳನ್ನು ಬೆಳೆಸುವುದರ ಮೂಲಕ ಈ ಶಾಲೆಯ ಸಾಧನೆ ಜಿಲ್ಲೆಗೆ ಮಾದರಿಯಾಗಿದೆ.

ಶೇಡ್‌ ನೆಟ್‌ ಬಳಕೆ
ಶಾಲೆಯ ಮೈದಾನದ ಸುತ್ತ ಆವರಣ ಗೋಡೆ ಇದೆ. ಹೊರಗಡೆ ಅಂದರೆ ರಸ್ತೆಗೆ ತಾಗಿಕೊಂಡಿರುವ ಭೂಮಿಯಲ್ಲಿ ತರಕಾರಿ ಬೆಳೆಸಲಾಗುತ್ತಿದೆ. ಅದಕ್ಕೆ ಆವರಣಗೋಡೆ ಬದಲು ಬಿಸಿಲಿಗೆ ಅಳವಡಿಸುವ ಶೇಡ್‌ ನೆಟ್‌ ಬಳಸಿ, ತರಕಾರಿಗಳಿಗೆ ರಕ್ಷಣೆ ಒದಗಿಸಲಾಗಿದೆ. ಆವರಣಗೋಡೆ ಹೊರಗಡೆ ಎರಡು ಬದಿಗಳಲ್ಲಿಯೂ ಇದೇ ರೀತಿಯಾಗಿ ತರಕಾರಿ ಬೆಳೆಸಲಾಗುತ್ತಿದೆ. ಶಾಲೆಯ ಮೈದಾನದ ಇನ್ನೊಂದು ಭಾಗದಲ್ಲಿ ಬಸಳೆ ಹಾಗೂ ಬದನೆ ಗಿಡಗಳನ್ನು ಬೆಳೆಸಲಾಗುತ್ತಿದೆ. ವಿದ್ಯಾರ್ಥಿಗಳೇ ತರಕಾರಿ ಗಿಡಗಳಿಗೆ ನೀರುಣಿಸುತ್ತಿದ್ದಾರೆ. ಅವುಗಳ ಕೃಷಿ ಮಾಡುತ್ತಿದ್ದಾರೆ.

ಬಿಸಿಯೂಟಕ್ಕೆ ತರಕಾರಿ ಬಳಕೆ
ತರಕಾರಿಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಕೆ ಮಾಡಲಾಗುತ್ತಿದೆ. ಬಿಸಿಯೂಟಕ್ಕೆ ಸಹಕಾರಿಯಾಗಲೆಂದು ತರಕಾರಿಯನ್ನು ಮಾರಾಟ ಮಾಡುತ್ತಿಲ್ಲ. ಪಪ್ಪಾಯಿ ಹೆಚ್ಚಿನ ಸಂಖ್ಯೆಯಲ್ಲಿ ಫಸಲು ಬಿಡುತ್ತಿದೆ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಪಪ್ಪಾಯಿಗೆ 40 ರೂ. ಬೆಲೆ ಇದೆ. ಶಾಲೆಯ ಮಕ್ಕಳಿಗೆ ಪಪ್ಪಾಯಿ ಖರೀದಿಸಬೇಕಾಗಿಲ್ಲ. ಹಣ್ಣುಹಂಪಲು ಒದಗಿಸುವಲ್ಲಿ ಇದು ಸಹಕಾರಿಯಾಗುತ್ತದೆ. ಪಪ್ಪಾಯಿ ಬೀಜಗಳ ಮೂಲಕ ಗಿಡಗಳನ್ನು ಬೆಳೆಸಿ ಅವುಗಳನ್ನು ಸುರಿಬೈಲು ಕ್ಲಸ್ಟರ್‌ ಮಟ್ಟದ ಶಾಲೆಗಳಿಗೆ ವಿತರಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್‌.ಎಂ. ಅಬೂಬಕ್ಕರ್‌, ಶಾಲಾ ಮುಖ್ಯ ಶಿಕ್ಷಕ ಗೋಪಾಲ ಬಿ. ನೇತೃತ್ವದಲ್ಲಿ ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಎಸ್‌ ಡಿಎಂಸಿ ಸದಸ್ಯರು, ಗ್ರಾ.ಪಂ., ತಾ.ಪಂ., ಜಿ.ಪಂ., ಗ್ರಾಮಸ್ಥರ ಸಹಕಾರದಲ್ಲಿ ಶಾಲೆ ಪ್ರಗತಿ ಸಾಧಿಸಿದೆ. ಜಿ.ಪಂ. ಸಿಇಒ ಅಕ್ಷರ ಕೈತೋಟ ನಿರ್ಮಿಸುವಂತೆ ಈ ಹಿಂದೆ ಸೂಚನೆ ನೀಡಿದ್ದರು. ಅದನ್ನು ಇಲ್ಲಿ ಅಕ್ಷರಶಃ ಪಾಲಿಸಲಾಗಿದೆ. ಸಾಧನೆ ಇತರರಿಗೆ ಪ್ರೇರಣೆಯಾಗಿದೆ.

ಅಡಿಕೆ ತೋಟ, ಅಕ್ಷರ ಕೈ ತೋಟ
ನಾಲ್ಕು ಎಕ್ರೆ ಜಾಗವನ್ನು ಹೊಂದಿರುವ ಈ ಶಾಲೆಗೆ ಸುಸಜ್ಜಿತ ಕಟ್ಟಡವಿದೆ. ಪೂರ್ವ ಪ್ರಾಥಮಿಕದಿಂದ 10ನೇ ತರಗತಿವರೆಗೆ ಒಟ್ಟು 505 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇವರಿಗೆ ಕುಡಿಯುವ ನೀರಿಗಾಗಿ ಕೊಳವೆ ಬಾವಿಯಿದೆ. ಶಾಲೆಯ ಒಂದು ಭಾಗದಲ್ಲಿ ಸುಸಜ್ಜಿತ ಅಡಿಕೆ ತೋಟ ಫಲ ನೀಡುತ್ತಿದೆ. ಇನ್ನೂ 50 ಸೆಂಟ್ಸ್‌ ಜಾಗದಲ್ಲಿ ಅಕ್ಷರ ಕೈತೋಟ ನಿರ್ಮಿಸಲಾಗಿದೆ. ತೋಟದಲ್ಲಿ ಪಪ್ಪಾಯಿ, ಅನನಾಸು, ಬಾಳೆ, ನುಗ್ಗೆ, ಬದನೆ, ಬಸಳೆ, ಬೆಂಡೆ ಸಹಿತ ವಿವಿಧ ತರಕಾರಿ ಮತ್ತು ಫಲವಸ್ತುಗಳನ್ನು ಬೆಳೆಸಲಾಗಿದೆ. ಗಿಡಮೂಲಿಕೆಗಳನ್ನೂ ನೆಟ್ಟು ಪೋಷಿಸಲಾಗುತ್ತಿದೆ. ಮಕ್ಕಳು ಕೈಕಾಲು ತೊಳೆಯುವ ನೀರನ್ನು ತೋಟಗಳಿಗೆ ಬಿಡಲಾಗುತ್ತಿದೆ. ನೀರು ನೇರವಾಗಿ ತೋಟಗಳಿಗೆ ಹೋಗಲು ಪ್ರತ್ಯೇಕ ಪೈಪ್‌ಲೈನ್‌ನ ವ್ಯವಸ್ಥೆ ಮಾಡಲಾಗಿದೆ. 

Advertisement

ಸರ್ವರ ಸಹಕಾರ
ಸರಕಾರಿ ಶಾಲೆಗಳು ಉಳಿಯಬೇಕು. ಅದಕ್ಕೆ ಗ್ರಾಮಸ್ಥರು ಸಹಕರಿಸಬೇಕು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೈಜೋಡಿಸಬೇಕು. ಇಲ್ಲಿ ಸಿಒ ಅವರ ಸೂಚನೆ ಮೇರೆಗೆ ಮಕ್ಕಳು, ಶಿಕ್ಷಕರು, ಗ್ರಾಮಸ್ಥರ ಸಹಕಾರದಲ್ಲಿ ಅಡಿಕೆ ತೋಟದ ಜತೆ ಅಕ್ಷರ ಕೈತೋಟ ನಿರ್ಮಿಸಲಾಗಿದೆ. ಆದುದರಿಂದ ಉತ್ತಮ ಬೆಳವಣಿಗೆಯನ್ನು ಸಾಧಿಸಲಾಗಿದೆ.
– ಎಸ್‌.ಎಂ. ಅಬೂಬಕ್ಕರ್‌
ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ

ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next