Advertisement

ಸೂರಿ ಅಂಗಡಿ; ಇಲ್ಲಿ ಎಲ್ಲವೂ ಸಿಗುತ್ತೆ !

12:30 AM Jan 04, 2019 | Team Udayavani |

ನಿರ್ದೇಶಕ ಸೂರಿ ಹೊಸ ಪೇಂಟಿಂಗ್‌ ಶುರು ಮಾಡಿದ್ದಾರೆ. ಕಂಪ್ಲೀಟ್‌ ಕಲರ್‌ಫ‌ುಲ್‌ ಕ್ಯಾನ್ವಾಸ್‌ನತ್ತ ಚಿತ್ತ ಹರಿಸಿದ್ದಾರೆ. ಸದಾ ಹೊಸತನ್ನೇ ಕೊಡಬೇಕೆಂಬ ತುಡಿತ. ಅದರಲ್ಲೂ ವಿವಿಧ ಬಗೆಯ ವಿಷಯಗಳ ಮೂಲಕ ನೋಡುಗರಲ್ಲಿ ಬಲವಾದ ನಂಬಿಕೆ ಬೇರೂರುವಂತೆ ಮಾಡುವ ಪ್ರಯತ್ನ ಎಂದಿನಂತೆಯೇ ಮುಂದುವರೆಸಿದ್ದಾರೆ. ಸೂರಿ ಇರೋದೇ ಹಾಗೆ. ಅಲ್ಲೆಲ್ಲೋ ಕಮರ್ಷಿಯಲ್‌ ಚಿತ್ರ ಕಟ್ಟಿಕೊಡುತ್ತಾರೆ. ಇನ್ನೆಲ್ಲೋ ಪಕ್ಕಾ ಮಾಸ್‌ ಫೀಲ್‌ ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ. ಮತ್ತೆಲ್ಲೋ ಸಂಬಂಧಗಳ ಮೌಲ್ಯ ಸಾರುವಂತಹ ಸಿನಿಮಾಗೂ ಕೈ ಹಾಕಿಬಿಡುತ್ತಾರೆ. ಈ ಎಲ್ಲಾ ವಿಷಯಗಳಲ್ಲೂ ಸೂರಿ ಸೈ ಎನಿಸಿಕೊಳ್ಳುತ್ತಾರೆ. ದೊಡ್ಡ ಬಜೆಟ್‌ ಚಿತ್ರ ಮಾಡಿ ಗೆದ್ದು ತೋರಿಸೋದು ಗೊತ್ತು. ಚಾಲೆಂಜ್‌ ಮಾಡಿ ಚಿಕ್ಕ ಬಜೆಟ್‌ ಚಿತ್ರವನ್ನೂ ಗೆಲ್ಲಿಸಿಕೊಳ್ಳುವುದೂ ಗೊತ್ತು. ಈಗ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಮೂಲಕ ಮತ್ತೂಂದು ಗೆಲುವಿನ ಹಾದಿ ಹಿಡಿದು ಹೊರಟಿದ್ದಾರೆ. ಆ ಕುರಿತು ಅವರೊಂದಿಗೆ ಮಾತುಕತೆ.

Advertisement

ಸೂರಿ ಕಮರ್ಷಿಯಲ್‌ ಆಗಿ “ಜಾಕಿ’ ಚಿತ್ರ ಮಾಡ್ತಾರೆ. ಅದೇ ಹ್ಯಾಂಗೋವರ್‌ನಲ್ಲಿ “ಅಣ್ಣಾಬಾಂಡ್‌’ ಎಂಬ ಚಿತ್ರವನ್ನೂ ಮಾಡ್ತಾರೆ. ಇದ್ದಕ್ಕಿದ್ದಂತೆಯೇ “ಕೆಂಡ ಸಂಪಿಗೆ’ ಹಿಡಿದು ನಿಲ್ಲುತ್ತಾರೆ. ನೋಡ ನೋಡುತ್ತಿದ್ದಂತೆಯೇ “ಟಗರು’ ಹಿಡಿದು ಬರುತ್ತಾರೆ. ಇನ್ನೇನೋ ದೊಡ್ಡ ನಿರೀಕ್ಷೆ ಇಟ್ಟುಕೊಂಡವರಿಗೆ ಅಚ್ಚರಿ ಎನ್ನುವಂತೆ, “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರ ಅನೌನ್ಸ್‌ ಮಾಡಿಬಿಡುತ್ತಾರೆ. ಎಲ್ಲಾ ಸರಿ, ಇದೆಲ್ಲಾ ಎಷ್ಟರ ಮಟ್ಟಿಗೆ ವರ್ಕೌಟ್‌ ಆಗುತ್ತೆ? ಈ ಪ್ರಶ್ನೆ ಅವರ ಮುಂದಿಟ್ಟರೆ, ಸೂರಿ ಸಣ್ಣದ್ದೊಂದು ನಗೆ ಬೀರುತ್ತಲೇ ಮಾತು ಶುರುಮಾಡುತ್ತಾರೆ. “ನನಗೂ ಹೊಸದೇನೋ ಬೇಕೆನಿಸುತ್ತೆ. ಆಗಾಗ ಅಂತಹ ಹುಚ್ಚು ಪ್ರಯತ್ನಕ್ಕೆ ಕೈ ಹಾಕ್ತೀನಿ. ಜನ ಕೈ ಬಿಡಲ್ಲ. ಒಂದಷ್ಟು ತಪ್ಪು ಮಾಡಿದ್ದೇನೆ. ಅವುಗಳನ್ನು ಸರಿಪಡಿಸುವ ಪ್ರಯತ್ನವೂ ಆಗುತ್ತೆ. ಈಗಿರುವ ಹಂತದಲ್ಲೇ ಒಂದು ದೊಡ್ಡ ಮಟ್ಟದಲ್ಲಿ ಸಂಬಂಧಗಳ ಮೌಲ್ಯ ಇರುವಂತಹ ಸಿನಿಮಾಗೆ ಕೈ ಹಾಕ್ತೀನಿ. ನಿಜ ಹೇಳುವುದಾದರೆ, “ಟಗರು’ ಚಿತ್ರದಿಂದ ನಾನು ಒಂದಷ್ಟು ಕಲಿತುಕೊಂಡಿದ್ದೇನೆ. ಜನರು ಆ ರೀತಿಯ ಪ್ರಯತ್ನವನ್ನು ತೆಗೆದುಕೊಂಡಾಗ, ತುಂಬಾ ಧೈರ್ಯ ಬಂದಿದೆ. ನನ್ನ ತಲೆಯಲ್ಲೂ ಪ್ರಶ್ನೆಗಳಿದ್ದವು. ಇದನ್ನು ತೆಗೆದುಕೊಂಡರೆ ಹೇಗೆ? ಜನ ಸ್ವೀಕರಿಸುತ್ತಾರಾ ಎಂಬ ಗೊಂದಲ ಇತ್ತು. “ದುನಿಯಾ’ ಟೈಮ್‌ನಲ್ಲೇ ಅದು ಸಾಬೀತಾಗಿತ್ತು. ಜನರು ನೇರವಾಗಿ ಹೇಳಿದ್ದನ್ನು ಮತ್ತು ನೈಜವಾಗಿದ್ದನ್ನು ಕೊಟ್ಟರೆ ಖಂಡಿತ ತಗೋತ್ತಾರೆ. ಕುಸಿದು ಹೋಗುತ್ತಿರುವ ಸಂಬಂಧಗಳ ಮೌಲ್ಯ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದಾಗ  ಹುಟ್ಟಿಕೊಂಡಿದ್ದೇ ಈ “ಪಾಪ್‌ಕಾರ್ನ್ ಮಂಕಿ ಟೈಗರ್‌’. ಈ ಹಿಂದೆ ನಾನೇ ಮಾಫಿಯಾ ಶೇಡ್‌ ಇರುವಂತಹ ಚಿತ್ರ ಮಾಡಿದ್ದೇನೆ. ಅದನ್ನೇ ಇನ್ನಷ್ಟು ಗಂಭೀರವಾಗಿ ಪರಿಗಣಿಸಿ, ಇಲ್ಲಿ ಬೇರೆ ರೀತಿ ಪೇಪರ್‌ ವರ್ಕ್‌ ಮಾಡಿ ಹೊಸ ಪ್ರಯತ್ನಕ್ಕಿಳಿದಿದ್ದೇನೆ. ಈಗಾಗಲೇ 18 ದಿನ ಚಿತ್ರೀಕರಣ ನಡೆದಿದೆ. ಹಿಂದಿನ “ಟಗರು’ ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವೇ ಇಲ್ಲ. ಅದರ ಯಾವುದೇ ಒಂದು ತುಂಡು ಕೂಡ ಇಲ್ಲಿರಲ್ಲ. ಟೋಟಲ್‌ ಕಲರ್‌ ಕ್ಯಾನ್ವಾಸ್‌ ಬೇರೆಯದ್ದೇ ಇದೆ’ ಎಂದು ತಮ್ಮ ಸಿನಿಮಾ ಬಗ್ಗೆ ಹೇಳುತ್ತಾರೆ ಸೂರಿ. 

ಸೂರಿ “ಟಗರು’ ಮೂಲಕ ದೊಡ್ಡ ನಿರೀಕ್ಷೆ ಹುಟ್ಟಿಸಿ ಗೆದ್ದಿದ್ದು ಸುಳ್ಳಲ್ಲ. ಅಂಥದ್ದೊಂದು ಸೂಪರ್‌ ಹಿಟ್‌ ಚಿತ್ರ ಕೊಟ್ಟು, ಈಗ “ಪಾಪ್‌ ಕಾರ್ನ್ ಮಂಕಿ ಟೈಗರ್‌’ ಕೈಗೆತ್ತಿಕೊಂಡಿದ್ದಾರೆ. ಅಂತಹ ನಿರೀಕ್ಷೆ ಇಲ್ಲೂ ಇರುತ್ತಾ? ಇದಕ್ಕೆ ಸೂರಿ ಉತ್ತರವಿದು. “ನಾನು ಪ್ರತಿ ಸಲ ಫೀಲ್ಡ್‌ಗಿಳಿದರೆ ಮೊದಲಿನಂತೆಯೇ ಆಡುತ್ತೇನೆ. ಪ್ರತಿ ಚಿತ್ರ ಹೊಸ ರೂಪವಾಗಿರುತ್ತೆ. ಹೊಸ ಪೇಂಟಿಂಗ್‌ ಜೊತೆಗೇ ಬರಿ¤àನಿ. ಒಂದು ಮಾತು ಹೇಳ್ತೀನಿ. ನನ್ನ ಪೇಂಟಿಂಗ್‌ ಅನ್ನು ಯಾರು ತುಂಬಾ ಚೆನ್ನಾಗಿ ಮಾರ್ಕೆಟ್‌ ಮಾಡುತ್ತಾರೋ, ಅಂತಹವರ ಜೊತೆಗೆ ಬರಿ¤àನಿ. ಮಾರ್ಕೆಟ್ಟೇ ಇಲ್ಲ ಅಂದರೆ, ಕಂಟೆಂಟ್‌ ಮನೆಯಲ್ಲಿರುತ್ತೆ. ನೀವು ಸ್ವಂತಕ್ಕೊಂದು ಪೇಂಟಿಂಗ್‌ ಮಾಡಿಕೊಂಡರೆ, ಅದನ್ನು ಮನೆಯಲ್ಲೇ ನೇತುಹಾಕಿ. ಅದನ್ನು ಮಾರ್ಕೆಟ್‌ ಮಾಡುತ್ತೇನೆ ಅಂದಾಗ, ಎಲ್ಲಿ ಸಿಗುತ್ತೆ ಅಂತ ಹುಡುಕಿ ಬರುತ್ತಾರೆ. ಅದೊಂದು ಬ್ರಾಂಡಿಂಗ್‌ ಆಗಿಬಿಡುತ್ತೆ’ ಎಂದು ಸಿನಿಮಾಕ್ಕೆ ಮಾರ್ಕೇಟ್‌ ಮುಖ್ಯ ಎನ್ನುತ್ತಾರೆ. 

ಸೂರಿಗೊಂದು ಟ್ರೇಡ್‌ ಮಾರ್ಕ್‌ ಇದೆ. ಆದರೆ, ಕಮರ್ಷಿಯಲ್‌ ಜೊತೆಗೆ ಬೇರೆ ಜಾನರ್‌ ಚಿತ್ರ ಕೊಡುವ ಮೂಲಕ ಸೂರಿ ಹೀಗೂ ಮಾಡುತ್ತಾರೆ ಅನ್ನೋದನ್ನು ಸಾಬೀತುಪಡಿಸಿದ್ದಾರೆ. ಏಕಾಏಕಿ ಅಂತಹ ಬದಲಾವಣೆ ಕಾರಣವೇನು ಎಂದರೆ ಸೂರಿ ಅದಕ್ಕೆ ಉತ್ತರಿಸುವುದು ಹೀಗೆ; “ನನ್ನದೊಂದು ಅಂಗಡಿ ಓಪನ್‌ ಆಗಿದೆ. ಅಲ್ಲಿ ಎಲ್ಲವೂ ಸಿಗುತ್ತೆ. ಯಾವ ಗಿರಾಕಿಗೆ ಏನು ಬೇಕೋ ಅದನ್ನು ಕೊಡುತ್ತಲೇ ಬಂದಿದ್ದೇನೆ. ಮುಂದೆಯೂ ಹಾಗೆಯೇ ಕೊಡ್ತೀನಿ. ಯಾರೇ ಬಂದರೂ ಯಾರಿಗೂ ಇಲ್ಲ ಅನ್ನೋದಿಲ್ಲ. ಆ ವಿಷಯದಲ್ಲಿ ನಾನು ಲಕ್ಕಿ. ಮೊದಲು ಚೆಕ್‌ ಮಾಡ್ತೀನಿ. ನೀಟ್‌ ಆಗಿ ನಮಸ್ಕಾರ ಮಾಡಿ ಈ ರೀತಿಯ ಚಿತ್ರ ಮಾಡೋಕೆ ಹೊರಟಿದ್ದೇನೆ. ನನ್ನನ್ನು ಕ್ಷಮಿಸಿ ಅನ್ನುತ್ತೇನೆ. ನನಗೂ ಆಸೆಗಳಿವೆ. ಒಂದಷ್ಟು ಜನರಿಗೆ ತಲುಪುವಂತಹ ಚಿತ್ರ ಕೊಡಬೇಕೆಂಬುದು. ಇದುವರೆಗೆ ಹಾರರ್‌ ಜಾನರ್‌ ಮುಟ್ಟಿಲ್ಲ. ನನ್ನ ಭಯನ ಜನರಿಗೆ ಮುಟ್ಟಿಸಿಲ್ಲ. ಈಗಾಗಲೇ ಪ್ರೀತಿ ವಿಷಯದಲ್ಲಿ “ಇಂತಿ ನಿನ್ನ ಪ್ರೀತಿಯ’ ಚಿತ್ರ ಕೊಟ್ಟಿದ್ದೇನೆ. ಕ್ರೌರ್ಯ ಇರುವ ಚಿತ್ರ ಮಾಡಿದ್ದೇನೆ. ಮುಂದೆ ಭಯ ಬೀಳಿಸುವ ಚಿತ್ರಕ್ಕೆ ವರ್ಕ್‌ ಮಾಡಬೇಕಷ್ಟೆ. ಭಯಬೀಳಿಸುವ ಚಿತ್ರವನ್ನು ಹಲವು ನಿರ್ದೇಶಕರು ಮಾಡಿದ್ದಾರೆ. ಭಯದಲ್ಲೇ ಕಾಮಿಡಿ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಹೆಚ್ಚಾಗಿಲ್ಲ. ಭಾನುವಾರ ಬಂದರೆ, ನನ್ನ ಚಿತ್ರಗಳು ಸುಮ್ಮನೆ ಟಿವಿಯಲ್ಲಿ ಓಡುತ್ತಲೇ ಇರಬೇಕೆಂಬ ಸಿನಿಮಾ ಕಟ್ಟಿಕೊಡಬೇಕೆಂಬ ಆಸೆಯೂ ಇದೆ. “ಉಲ್ಟಾ ಪಲ್ಟಾ’ ರೀತಿಯಂತಹ ಚಿತ್ರದಂತಿರಬೇಕು. ದೊಡ್ಡ ಮಟ್ಟದ ಆ್ಯಕ್ಷನ್‌ ಚಿತ್ರ ಮಾಡೋದು ಇದ್ದದ್ದೇ. ಅದನ್ನು ಯಾವ ಕಾಲಕ್ಕಾದರೂ ಮಾಡಬಹುದು. ಪುನೀತ್‌ ಅವರಿಗೋ, ದರ್ಶನ್‌ ಅವರಿಗೋ…  ಯಾರಿಗೋ ಒಬ್ಬರಿಗೆ ಆ್ಯಕ್ಷನ್‌ ಸಿನಿಮಾ ಇದ್ದೇ ಇರುತ್ತೆ. ಆದರೆ, ಬೇರೆ ರೀತಿಯ ಚಿತ್ರ ಕಟ್ಟಿಕೊಡುವ ಪ್ರಯತ್ನ ಮಾಡಬೇಕೆಂಬ ಆಸೆ ನನ್ನದು. ಅದಕ್ಕೇ ಹೇಳಿದ್ದು, ನಾನೊಂದು ತರಹೇವಾರಿ ಕಥೆಗಳಿರುವ ಅಂಗಡಿ ಇಟ್ಟುಕೊಂಡಿದ್ದೇನೆ. ಜನರಿಗೆ ಏನು ಬೇಕೋ ಅದನ್ನು ಕೊಡ್ತೀನಿ ಎಂದು’ ಎನ್ನುತ್ತಾ ತಮ್ಮ ಭಿನ್ನ ಸಿನಿ ಕನಸುಗಳನ್ನು ತೆರೆದಿಡುತ್ತಾರೆ ಸೂರಿ.

ಹಾಗಾದರೆ, “ಪಾಪ್‌ಕಾರ್ನ್ ಮಂಕಿ ಟೈಗರ್‌’ ಎಲ್ಲಿಯವರೆಗೆ ಬಂದಿದೆ? ಎಂದರೆ, “ಮೊದಲ ಹಂತದ ಚಿತ್ರೀಕರಣ ಬಹುತೇಕ ಮುಗಿದಿದೆ.  ಉಡುಪಿ ಬಳಿಯ ಸೀತಾನದಿ ಬಳಿ ಶೂಟಿಂಗ್‌ ಆಗಬೇಕಿದೆ. ನೀರು ಹೆಚ್ಚಾದರೆ ಚಿತ್ರೀಕರಣ ಕಷ್ಟ. ಆದಷ್ಟು ಬೇಗ ಅಲ್ಲಿ ಶೂಟಿಂಗ್‌ ಮಾಡಬೇಕು. ಇನ್ನು ಸಾಕಷ್ಟು ಕೆಲಸ ಬಾಕಿ ಇದೆ. ನನ್ನ ಪ್ರತಿ ಸಿನಿಮಾದಲ್ಲೂ ಆರಂಭದಿಂದ ಅಂತ್ಯದವರೆಗೂ ಸೂರಿ ಇರುತ್ತಾನೆ. “ಜಾಕಿ’ ಮಾಡುವಾಗಿನ ಸೂರಿಗೂ “ಅಣ್ಣಾಬಾಂಡ್‌’ ಮಾಡುವಾಗಿನ ಸೂರಿಗೂ ಸಂಬಂಧವೇ ಇಲ್ಲ. ಅದಾದ ಬಳಿಕ “ಕಡ್ಡಿಪುಡಿ’ ಬೇರೆಯದ್ದೇ ಆಗಿತ್ತು. ಏಕಾಏಕಿ “ಕೆಂಡ ಸಂಪಿಗೆ’ ಮಾಡಿದೆ. ಯಾಕೆಂದರೆ, ಇಂತಹ ಬಜೆಟ್‌ ಚಿತ್ರಗಳನ್ನೂ ಮಾಡಬಲ್ಲೆ ಎಂಬುದಷ್ಟೇ ಉದ್ದೇಶ. ನನಗೆ ಚಾಲೆಂಜ್‌ ಬೇಕು. ಚಾಲೆಂಜ್‌ ಇಲ್ಲ ಅಂದರೆ ಏನೂ ಮಾಡೋಕ್ಕಾಗಲ್ಲ.  ಒಂದು ಬಾಕ್ಸ್‌ನಲ್ಲಿ ಏನಿದೆ ಅಂತ ಮೊದಲೇ ಹೇಳ್ತೀನಿ. ತೆಗೆದು ನೋಡಿದರೆ ಅದು ಹಾಗೆಯೇ ಇರಬೇಕು. ನನ್ನ ಸಿನ್ಮಾ ಕೂಡ ಹಾಗೆಯೇ ಇರುತ್ತೆ. ದೊಡ್ಡ ಮಟ್ಟದ ಆ್ಯಕ್ಷನ್‌ ಸಿನಿಮಾ ಮಾಡೋಕೆ ಒಂದಷ್ಟು ನಿರ್ಮಾಪಕರಿದ್ದಾರೆ. ಅವರನ್ನೆಲ್ಲಾ ನಾನು ಹಾಗೆಯೇ ಉಳಿಸಿಕೊಂಡಿದ್ದೇನೆ. ಮುಂದೆ ದೊಡ್ಡ ಮಟ್ಟದಲ್ಲೇ ಆ್ಯಕ್ಷನ್‌ ಚಿತ್ರ ಮಾಡ್ತೀನಿ. “ದುನಿಯಾ’ ಮಾಡುವ ಮುನ್ನ ಮುನಿರತ್ನ ಅವರಿಗೇ ನಾನೊಂದು ಕಥೆ ಹೇಳಿದ್ದೆ. “ದುನಿಯಾ’ ನಂತರ ರಾಕ್‌ಲೈನ್‌ ವೆಂಕಟೇಶ್‌ ಅವರು, “ಪುನೀತ್‌ ಅವರಿಗೆ ನೀನೊಂದು ದೊಡ್ಡ ಮಟ್ಟದ ಚಿತ್ರ ಮಾಡು’ಅಂದಿದ್ದರು. ಭಯ ಇತ್ತು. ಆದರೂ “ಜಾಕಿ’ ಮಾಡಿದೆ.  ಪುನೀತ್‌ ಅವರಿಗೆ ಮಾಡಿದ ಚಿತ್ರ ಹೊಸ ಅನುಭವ ಕಟ್ಟಿಕೊಟ್ಟಿತು. ಅದೇ ಹ್ಯಾಂಗೋವರ್‌ನಲ್ಲಿ “ಅಣ್ಣಾಬಾಂಡ್‌’ ಕೂಡ ಆಗಿಹೋಯ್ತು’ ಎನ್ನುತ್ತಾರೆ ಸೂರಿ. 

Advertisement

ಸದ್ಯ ಕನ್ನಡ ಚಿತ್ರರಂಗದ ಮಾರುಕಟ್ಟೆಯ ಬಗ್ಗೆ ಮಾತನಾಡುವ ಸೂರಿ,  “ಕನ್ನಡ ಚಿತ್ರರಂಗ ಈಗ ಇನ್ನಷ್ಟು ಸದ್ದು ಮಾಡುತ್ತಿದೆ. “ಕೆಜಿಎಫ್’ ಒಂದು ದೊಡ್ಡ ತಿರುವಿಗೆ ಕಾರಣವಾಗಿದೆ. ಹಿಂದೆ “ಪ್ರೇಮಲೋಕ’ದಿಂದ ಶುರುವಾದ ಈ ತಿರುವು, “ಎ’ ಮೂಲಕ ಮತ್ತೂಂದು ತಿರುವಾಯ್ತು. ರಾಜೇಂದ್ರಸಿಂಗ್‌ ಬಾಬು, ನಾಗಾಭರಣ ಅವರುಗಳು ಸಹ ತಿರುಗಿ ನೋಡುವಂತಹ ಚಿತ್ರ ಕೊಟ್ಟಿದ್ದಾರೆ. “ಮುಂಗಾರು ಮಳೆ’, “ದುನಿಯಾ’ ಚಿತ್ರಗಳು ಹಿಸ್ಟರಿ ಮಾಡಿವೆ. ಈ ಸಲ ದೊಡ್ಡ ಮಟ್ಟದಲ್ಲಿ ಪ್ರಶಾಂತ್‌ನೀಲ್‌ ಅಂಥದ್ದೊಂದು ತಿರುಗಿ ನೋಡುವ ಚಿತ್ರ ಕೊಟ್ಟಿದ್ದಾರೆ. “ಬಾಹುಬಲಿ’ಗೆ ಅಷ್ಟೊಂದು ದುಡ್ಡು ಕೊಟ್ಟೋರು ನಾವೇ. ಇಲ್ಲಿ ಕಂಟೆಂಟ್‌ ಚೆನ್ನಾಗಿದ್ದರೆ ಎಲ್ಲವೂ ವರ್ಕ್‌ಔಟ್‌ ಆಗುತ್ತೆ. ಮುಂದಿನ ದಿನಗಳು ಅದ್ಭುತವಾಗಿರಲಿವೆ. ಈಗ ಮಾರ್ಕೆಟ್‌ ದೊಡ್ಡದಾಗಿದೆ. ನಾಲ್ಕೈದು ಮಂದಿ ದೊಡ್ಡ ನಿರ್ಮಾಪಕರು ದೊಡ್ಡ ಮಟ್ಟದ ಪ್ರಯತ್ನ ಮಾಡಿದರೆ, ಇಡೀ ಕನ್ನಡ ಚಿತ್ರರಂಗ ಬದಲಾಗುತ್ತದೆ’ ಎನ್ನುವುದು ಸೂರಿ ಮಾತು. 

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next