Advertisement

“ಪರಾಕ್ರಮ ಪರ್ವ’ಕ್ಕೆ ಪ್ರಧಾನಿ ಮೋದಿ ಚಾಲನೆ

06:00 AM Sep 29, 2018 | |

ಜೋಧ್‌ಪುರ: ಗಡಿ ನಿಯಂತ್ರಣಾ ರೇಖೆ ದಾಟಿ ಸೇನೆ ನಡೆಸಿದ ಸರ್ಜಿಕಲ್‌ ದಾಳಿಯ ಎರಡನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ರಾಜಸ್ಥಾನದ ಜೋಧ್‌ಪುರದ ಸೇನಾ ನೆಲೆಯಲ್ಲಿ “ಪರಾಕ್ರಮ ಪರ್ವ’ ವಸ್ತುಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಇಲ್ಲಿ ಸೇನೆಯ ಯುದ್ಧ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಮಾಹಿತಿಗಳು ಹಾಗೂ ಯುದ್ಧ ಸಲಕರಣೆಗಳನ್ನು ಪ್ರದರ್ಶಿಸಲಾಗಿದ್ದು, ಪ್ರಧಾನಿ ಮೋದಿ ಅವರೂ ಪ್ರದರ್ಶನ ವೀಕ್ಷಿಸಿ ಅಧಿಕಾರಿ ಗಳಿಂದ ಮಾಹಿತಿ ಪಡೆದುಕೊಂಡರು. ಕೊನಾರ್ಕ್‌ ಯುದ್ಧ  ಸ್ಮಾರಕಕ್ಕೆ ತೆರಳಿ ಹುತಾತ್ಮರಾದ ನಮನ ಸಲ್ಲಿಸಿದ ಪ್ರಧಾನಿ ಮೋದಿ, ಸಂದರ್ಶಕರ ಪುಸ್ತಕ ದಲ್ಲಿ “ತಾಯಿನಾಡಿನ ರಕ್ಷಣೆಗೆ ಬದ್ಧವಾಗಿರುವ ಸಶಸ್ತ್ರ ಪಡೆಗಳ ಯೋಧರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತದೆ’ ಎಂದು ಬರೆದರು. ಈ ವೇಳೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಮತ್ತಿತರರು ಸಾಥ್‌ ನೀಡಿದರು.

Advertisement

ದೇಶಾದ್ಯಂತ ಆಚರಣೆ: 2016, ಸೆಪ್ಟೆಂಬರ್‌ 29ರಂದು ಗಡಿ ನಿಯಂತ್ರಣ ರೇಖೆ ದಾಟಿ ತೆರಳಿದ್ದ ಭಾರತೀಯ ಯೋಧರ ತಂಡವು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ 7 ನೆಲೆಗಳನ್ನು ನಾಶಮಾಡಿ, ಹಲವು ಉಗ್ರರನ್ನು ಹತ್ಯೆಗೈದಿತ್ತು. ಅದರ ನೆನಪಿಗಾಗಿ ಸೆ.29 ಅನ್ನು ಸರ್ಜಿಕಲ್‌ ದಾಳಿ ದಿನವನ್ನಾಗಿ ಆಚರಿಸುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಸರ್ಜಿಕಲ್‌ ದಾಳಿಯ 2ನೇ ವರ್ಷಾಚರಣೆ ಪ್ರಯುಕ್ತ ಚೆನ್ನೈ, ಗ್ಯಾಂಗ್ಟಕ್‌, ಕೊಚ್ಚಿ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸೇನಾ ಶಸ್ತ್ರಾಸ್ತ್ರಗಳ ಪ್ರದರ್ಶನ, ಸಂವಾದ ಕಾರ್ಯ ಕ್ರಮಗಳು ಶುಕ್ರವಾರದಿಂದಲೇ ಆರಂಭವಾದವು. ಜಮ್ಮುವಿನ ವಾಯುಪಡೆಯ ಸ್ಟೇಷನ್‌ನಲ್ಲೂ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹೆಲಿಕಾಪ್ಟರ್‌ಗಳು, ರಿಮೋಟ್‌ ಪೈಲೆಟೆಡ್‌ ವಿಮಾನ, ಮೊಬೈಲ್‌ ಸಂವಹನ ಟರ್ಮಿನಲ್‌, ವಾಯುಪಡೆಯ ಗರುಡ ಕಮಾಂಡೋಗಳ ಶಸ್ತ್ರಾಸ್ತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ರಾಷ್ಟ್ರೀಯ ಭದ್ರತೆಗೆ ಧಕ್ಕೆಯುಂಟು ಮಾಡುವಂತೆ ಪಾಕಿಸ್ತಾನದ ಐಎಸ್‌ಐ, ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ನಡುವೆ “ಮಹಾಘಟಬಂಧನ್‌’ ಏರ್ಪಟ್ಟಿದೆ. ಐಎಸ್‌ಐ ಅನ್ನು ಮೋದಿ-ಶಾ ಪಠಾಣ್‌ಕೋಟ್‌ ವಾಯುನೆಲೆಗೆ ಆಹ್ವಾನಿಸುವ ಮೂಲಕ ದೇಶಕ್ಕೆ ದ್ರೋಹ ಬಗೆದಿದ್ದು, ಕ್ಷಮೆ ಯಾಚಿಸಬೇಕು.
ಸುರ್ಜೆವಾಲ,  ಕಾಂಗ್ರೆಸ್‌ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next