Advertisement
ಪಿಯುಸಿಯಲ್ಲಿ ನಮ್ಮ ಭೂಗೋಳಶಾಸ್ತ್ರದ ಉಪನ್ಯಾಸಕರು, ಪಾಠ ಮಾಡುವಾಗ ಕೆಲವು ಪದಗಳನ್ನು ಪದೇ ಪದೆ ಹೇಳುತ್ತಿದ್ದರು. ಅವುಗಳಲ್ಲಿ “ಅಷ್ಟೇ ಅಲ್ಲ’ ಎಂಬ ಪದವೂ ಒಂದು. ಒಂದು ಕ್ಲಾಸ್‌ನಲ್ಲಿ ಅವರು ಒಂದು ಪದವನ್ನು ಎಷ್ಟು ಬಾರಿ ಬಳಸುತ್ತಾರೆ ಎಂದು ಕೌಂಟ್ ಮಾಡುವುದೇ ಒಂದು ಆಟ ನಮಗೆ. ನಾನೊಬ್ಬನೇ ಅಲ್ಲ, ನಾಲ್ಕೈದು ಸ್ನೇಹಿತರು ಜೊತೆಗೆ ಸೇರಿ ಅದನ್ನು ಲೆಕ್ಕ ಹಾಕುತ್ತಿದ್ದೆವು. ಪಾಠ ಏನೂ ಅರ್ಥವಾಗುತ್ತಿರಲಿಲ್ಲ. ಯಾಕಂದ್ರೆ ನಮ್ಮ ಗಮನ ಕೇವಲ ಅವರು ಯಾವ ಪದವನ್ನು, ಎಷ್ಟು ಬಾರಿ ಬಳಸುತ್ತಾರೆ ಎಂಬುದರ ಮೇಲಷ್ಟೇ ಇರುತ್ತಿತ್ತು. ತರಗತಿ ಮುಗಿದ ನಂತರ, ನಮ್ಮ ಲೆಕ್ಕ ಸರಿ ಇದೆಯೇ ಎಂದು ಪರಸ್ಪರ ತಾಳೆ ಹಾಕಿ, ತಮಾಷೆ ಮಾಡುತ್ತಿದ್ದೆವು.
Related Articles
Advertisement
ಸ್ವಲ್ಪ ಹೊತ್ತಿನ ನಂತರ, ಎಲ್ಲ ವಿದ್ಯಾರ್ಥಿಗಳ ನೋಟ್‌ಬುಕ್ ಚೆಕ್ ಮಾಡುತ್ತೇನೆಂದು, ನೇರವಾಗಿ ನಮ್ಮ ಡೆಸ್ಕ್ ಕಡೆ ಬಂದರು. ನಮ್ಮ ನೋಟ್‌ಬುಕ್‌ನಲ್ಲಿ “ಅಷ್ಟೇ ಅಲ್ಲ’ ಎಂಬ ಪದ ಮತ್ತದರ ಮುಂದೆ ಪ್ಲಸ್ ಮಾರ್ಕ್ ಗಳು ಮಾತ್ರ ಇದ್ದವು. ಅದನ್ನು ನೋಡಿದವರೇ, ಕಪಾಳಕ್ಕೆ ಛಟಾರನೆ ಬಾರಿಸಿ, ನಮ್ಮ ತಂಡವನ್ನು ಡೆಸ್ಕ್ನ ಆಚೆ ಎಳೆದು ಚೆನ್ನಾಗಿ ಥಳಿಸಿದರು. ನಂತರ ನಮ್ಮನ್ನು ಪ್ರಾಂಶುಪಾಲರ ಹತ್ತಿರ ಕರೆದುಕೊಂಡು ಹೋಗಿ, “ಇವರಿಗೆ ಟಿ.ಸಿ. ಕೊಟ್ಟು ಕಳಿಸಿ. ತರಗತಿಯಲ್ಲಿ ಪಾಠ ಕೇಳದೆ ಕಪಿಚೇಷ್ಟೆ ಮಾಡುತ್ತಿರುತ್ತಾರೆ’ ಎಂದು ದೂರಿದರು’. “ಗುಪ್ತಚರ ದಳ’ದಿಂದ ಮೊದಲೇ ಮಾಹಿತಿ ಪಡೆದಿದ್ದ ಪ್ರಾಂಶುಪಾಲರು, ಹೆತ್ತವರನ್ನು ಕರೆದುಕೊಂಡು ಬನ್ನಿ ಎಂದು ಹೇಳಿದರು. ಅಲ್ಲಿಯವರೆಗೆ, “ಏನೂ ಆಗಲ್ಲ’ ಎಂದು ಭಾವಿಸಿದ್ದ ನಮಗೆ ಪರಿಸ್ಥಿತಿ ಬಿಗಡಾಯಿಸಿದೆ ಅಂತ ಅರಿವಾಯ್ತು.
ತಕ್ಷಣವೇ ಗೆಳೆಯನೊಬ್ಬ ಪ್ರಾಂಶುಪಾಲರ ಕಾಲು ಹಿಡಿದು ಜೋರಾಗಿ ಅಳತೊಡಗಿದ. ಅವನು ಪ್ರಾಂಶುಪಾಲರ ದೂರದ ಸಂಬಂಧಿ ಆಗಿದ್ದ. ಇನ್ಮುಂದೆ ಈ ರೀತಿ ಮಾಡಲ್ಲ ಎಂದು ಅವನು ಅಳುತ್ತಿದ್ದರೆ, ನಾವು ಸಹ ಅಳುವಿನ ನಾಟಕ ಶುರು ಮಾಡಿದೆವು. ಕೊನೆಗೆ ಅವರು ನಮ್ಮ ಅಳುವಿಗೆ ಕರಗಿ, ನಮ್ಮ ಕಡೆಯಿಂದ ಕ್ಷಮಾಪಣೆ ಪತ್ರ ಬರೆಸಿಕೊಂಡು, ಮತ್ತೂಮ್ಮೆ “ವಾರ್ನಿಂಗ್’ ಕೊಟ್ಟು ತರಗತಿಗೆ ಕಳಿಸಿದರು. ಉಪನ್ಯಾಸಕರ ದಾಳಿ ಒಂದು ರೀತಿಯಲ್ಲಿ “ಸರ್ಜಿಕಲ್ ಸ್ಟ್ರೈಕ್’ ನಂತಿತ್ತು. ಅಂದಿನಿಂದ ನಮ್ಮ ಗುಂಪನ್ನು ಚದುರಿಸಿ, ಬೇರೆ ಬೇರೆ ಡೆಸ್ಕ್ಗಳಲ್ಲಿ ಕುಳಿತುಕೊಳ್ಳಲು ಆದೇಶಿಸಿದರು.ಆನಂತರದ ತರಗತಿಗಳಲ್ಲಿ ಭೂಗೋಳಶಾಸ್ತ್ರದ ಉಪನ್ಯಾಸಕರು ಆಗಾಗ ನಮ್ಮ ಡೆಸ್ಕ್ನ ಬಳಿ ಬಂದು ಪರೀಕ್ಷಿಸುತ್ತಿದ್ದರು. ಅವರು ಬಂದಾಗಲೆಲ್ಲ, ಮತ್ತೆಲ್ಲಿ ಬಾರಿಸುತ್ತಾರೋ ಎಂಬ ಭಯ ನಮ್ಮನ್ನು ಕಾಡುತ್ತಿತ್ತು. ಶಿಕ್ಷಕರು ಪದೇಪದೆ ಬಳಸುವ ಪದವನ್ನು ಕೌಂಟ್ ಮಾಡುವುದು, ಹೈಸ್ಕೂಲ್‌ನಿಂದ ನಮ್ಮ ಗುಂಪು ನಡೆಸಿಕೊಂಡು ಬಂದ ಅಭ್ಯಾಸ. ಆದರೆ, ಆ ಕಳ್ಳಾಟ ಕಾಲೇಜಿನಲ್ಲಿ ನಡೆಯಲೇ ಇಲ್ಲ! — ಮಲ್ಲಪ್ಪ ಫ. ಕರೇಣ್ಣನವರ