Advertisement

ನೀರಿಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಸ್ಥಗಿತ

11:22 PM May 01, 2019 | Team Udayavani |

ಔರಾದ: ಸ್ವಚ್ಛ ಭಾರತ್‌, ಆಯುಷ್ಮಾನ್‌ ಯೋಜನೆ ಎಂದು ಏರುಧ್ವನಿಯಲ್ಲಿ ಪ್ರಚಾರ ಮಾಡುತ್ತಿರುವ ಬೆನ್ನಲ್ಲೇ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನೀರಿಲ್ಲದೆ ಶಸ್ತ್ರಚಿಕಿತ್ಸೆಯನ್ನೇ ಸ್ಥಗಿತಗೊಳಿಸಲಾಗಿದೆ!

Advertisement

ಔರಾದ್‌ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 15 ದಿನಗಳಿಂದ ನೀರಿನ ಸರಬರಾಜು ನಿಲ್ಲಿಸಲಾಗಿದ್ದು, ಬಡವರ ಪಾಲಿನ ಸಂಜೀವಿನಿಯಾಗಿದ್ದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡುವುದನ್ನು ನಿಲ್ಲಿಸಲಾಗಿದೆ.

ಹೈದ್ರಾಬಾದ್‌ ಕರ್ನಾಟಕ ಭಾಗದಲ್ಲಿ ಬಿಸಿಲಿನ ಪ್ರಖರತೆ ಜೋರಾಗಿದ್ದು, ತಾಪಮಾನ 44 ಡಿಗ್ರಿ ದಾಟಿದೆ. ಬದುಕು ದುಸ್ತರವಾಗಿದೆ. ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲೇ ಸಾರ್ವಜನಿಕ ಆಸ್ಪತ್ರೆಯಲ್ಲೂ ನೀರಿಲ್ಲದೆ ವೈದ್ಯಕೀಯ ಸೇವೆಗೆ ಕುತ್ತು ಬಂದಿದ್ದು, ರೋಗಿಗಳು ಪರದಾಡುವಂತಾಗಿದೆ.

ಈ ಸರ್ಕಾರಿ ಆಸ್ಪತ್ರೆಗೆ ಪ್ರತಿನಿತ್ಯ 1000 ರಿಂದ 1500 ಹೊರ ರೋಗಿಗಳು ಬರುತ್ತಾರೆ. ಪ್ರತಿ ತಿಂಗಳು 150ರಿಂದ 200 ಹೆರಿಗೆಗಳಾಗುತ್ತವೆ. ಸುತ್ತಲಿನ ಹಳ್ಳಿಯ ಬಡ ಜನ ಈ ಸಾರ್ವಜನಿಕ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ.

ಆದರೆ, ನೀರಿನ ಸಮಸ್ಯೆ ಇರುವುದರಿಂದ ಪ್ರತಿ ವಾರಕೊಮ್ಮೆ ನಡೆಯುತ್ತಿದ್ದ ಶಸ್ತ್ರಚಿಕಿತ್ಸೆಗಳನ್ನು 15 ದಿನಗಳಿಂದ ನಿಲ್ಲಿಸಲಾಗಿದೆ. ಈ ಕುರಿತು ಪಪಂ ಮುಖ್ಯಾ ಧಿಕಾರಿ ವಿಠ್ಠಲ್‌ ಹಾದಿಮನಿ, ತಾಲೂಕು ಆರೋಗ್ಯಾ ಧಿಕಾರಿ ಡಾ|ಕಲ್ಲಪ್ಪ ಮಜಿಗೆ ಅವರು ತಹಶೀಲ್ದಾರ್‌ ಎಂ.ಚಂದ್ರಶೇಖರ್‌ ಹಾಗೂ ಶಾಸಕ ಪ್ರಭು ಚವ್ಹಾಣ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

Advertisement

ಕಾರಣ ಏನು?: ಹೈ-ಕ ಭಾಗದಲ್ಲಿ ಪ್ರತಿ ಬೇಸಿಗೆಯಲ್ಲೂ ನೀರಿಗೆ ತತ್ವಾರ ಎದುರಾಗುತ್ತದೆ. ಈ ಬಾರಿ ತೀವ್ರತೆ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಆಸ್ಪತ್ರೆ ಹಾಗೂ ಅದರ ಪಕ್ಕದಲ್ಲೇ ಇರುವ ವಸತಿಗೃಹಗಳಿಗೆ ನೀರು ಪೂರೈಸಲು ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಸೇರಿದ ಬಾವಿ ಇದೆ. ಬೇಸಿಗೆಯ ಹೊಡೆತಕ್ಕೆ ಬಾವಿ ಬತ್ತಿ ಹೋಗಿದ್ದರಿಂದ ನೀರಿಗೆ ಸಂಕಷ್ಟ ಎದುರಾಗಿದೆ.

ವಸತಿಗೃಹಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ, ಆಸ್ಪತ್ರೆಗೆ ನೀರಿನ ಕೊರತೆ ಎದುರಾಗಿದ್ದರಿಂದ ಶಸ್ತ್ರಚಿಕಿತ್ಸೆ ಸ್ಥಗಿತಗೊಳಿಸಲಾಗಿದೆ. ಆಸ್ಪತ್ರೆಯಲ್ಲಿನ ಒಳ ರೋಗಿಗಳಿಗೆ ಸಮಸ್ಯೆ ಆಗದಂತೆ ಅಧಿಕಾರಿಗಳು ಖಾಸಗಿ ವ್ಯಕ್ತಿಗಳಿಂದ ನೀರು ತರಿಸಿ ಸರಬರಾಜು ಮಾಡುತ್ತಿದ್ದಾರೆ. ಪ್ರತಿದಿನ ಆಸ್ಪತ್ರೆಗೆ ಬರುವ ಹೆಣ್ಣು ಮಕ್ಕಳು ನೀರು ಹೊತ್ತುಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ.

4 ವರ್ಷದ ಹಿಂದೆಯೂ ಎದುರಾಗಿತ್ತು ಸಂಕಷ್ಟ!: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಇಂಥ ದು:ಸ್ಥಿತಿ ಹೊಸದೇನಲ್ಲ. 2015ರಲ್ಲೂ ನೀರಿಲ್ಲದೆ ಶಸ್ತ್ರಚಿಕಿತ್ಸೆ ಸ್ಥಗಿತಗೊಳಿಸಲಾಗಿತ್ತು. ಬಡ ಹೆಣ್ಣುಮಕ್ಕಳು ಪಡಬಾರದ ಕಷ್ಟ ಪಟ್ಟಿದ್ದರು. ಬಳಿಕ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ನೀರು ಪೂರೈಕೆಗೆ ವ್ಯವಸ್ಥೆ ಮಾಡಿದ್ದರು.

ಪಟ್ಟಣದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಶಸ್ತ್ರಚಿಕಿತ್ಸೆ ಸ್ಥಗಿತಗೊಳಿಸಲಾಗಿದೆ. ಟ್ಯಾಂಕರ್‌ ಮೂಲಕ ನೀರು ತರಿಸಿ, ಎರಡು ದಿನಗಳಲ್ಲಿ ಶಸ್ತ್ರಚಿಕಿತ್ಸೆ ಆರಂಭಿಸುತ್ತೇವೆ. ಈ ಕುರಿತು ಪಪಂ ಮುಖ್ಯಾಧಿ ಕಾರಿಗಳಿಗೂ ತಿಳಿಸಿದ್ದೇನೆ. ಅವರು ಆಸ್ಪತ್ರೆಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ.
-ಡಾ|ಕಲ್ಲಪ್ಪ ಮಜಿಗೆ, ತಾಲೂಕು ಆರೋಗ್ಯಾಧಿಕಾರಿ

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತದೆ. ಆಸ್ಪತ್ರೆಯಲ್ಲಿ ನೀರು ಕಡಿಮೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು.
-ವಿಠ್ಠಲ್‌ ಹಾದಿಮನಿ, ಪಪಂ ಮುಖ್ಯಾಧಿಕಾರಿ

* ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next