Advertisement

ಹುಟ್ಟೂರ ಮಣ್ಣು ಮತ್ತು ನೀರಿನೊಂದಿಗೆ ದೆಹಲಿಯಲ್ಲೇ ಸುರೇಶ್ ಅಂಗಡಿ ಅಂತ್ಯಕ್ರಿಯೆ

08:33 PM Sep 24, 2020 | Mithun PG |

ಬೆಳಗಾವಿ: ಕೋವಿಡ್ ನಿಂದ ಮೃತಪಟ್ಟ  ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆಸಲಾಗಿದ್ದು, ಹೀಗಾಗಿ ಅಂಗಡಿಯವರ ಹುಟ್ಟೂರು ಕೆ.ಕೆ. ಕೊಪ್ಪ ಹಾಗೂ ಕರ್ಮಭೂಮಿ ಬೆಳಗಾವಿಯ ಮಣ್ಣು ಹಾಗೂ ನೀರನ್ನು ಅಂತ್ಯಕ್ರಿಯೆಗೆ ಬಳಸಲಾಯಿತು.

Advertisement

ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಪಾರ್ಥಿವ ಶರೀರವನ್ನು ಸ್ಥಳಾಂತರಿಸಲು ಅವಕಾಶ ಇರಲಿಲ್ಲ.  ಹೀಗಾಗಿ ದೆಹಲಿಯ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಬೆಳಗಾವಿಯ ನೆಲದ ಭಾವನಾತ್ಮಕ ಸಂಬಂಧದ ದ್ಯೋತಕವಾಗಿ ಮಣ್ಣು-ನೀರನ್ನು ಇಲ್ಲಿಂದ ತೆಗೆದುಕೊಂಡು ಹೋಗಲಾಗಿತ್ತು. ಲಿಂಗಾಯತ ಧಾರ್ಮಿಕ ವಿಧಿ ವಿಧಾನಗಳಂತೆ ಅಂತ್ಯಕ್ರಿಯೆ ನಡೆಸಲಾಯಿತು.

ಬೆಳಗಾವಿಯಲ್ಲಿಯೇ ಇದ್ದ ಸುರೇಶ ಅಂಗಡಿಯವರ ಪುತ್ರಿ ಸ್ಪೂರ್ತಿ ಗುರುವಾರ ಬೆಳಗ್ಗೆ ವಿಮಾನದ ಮೂಲಕ ದೆಹಲಿಗೆ ತೆರಳಿದರು. ಇವರೊಂದಿಗೆ ಅಂಗಡಿಯವರ ಆಪ್ತರಾದ ಶ್ರೀಕಾಂತ ಕಡಕೋಳ, ಬಾಳಯ್ಯ ಹಿರೇಮಠ, ರಾಜು ಚಿಕ್ಕನಗೌಡರ, ರಂಗನಾಥ ದೇಶಪಾಂಡೆ, ರಾಜು ಜೋಶಿ, ದಿಗ್ವಿಜಯ ಸಿದ್ನಾಳ, ಸಂತೋಷ ತುಬಚಿ ತೆರಳಿದ್ದರು.

ಅಂತ್ಯಕ್ರಿಯೆಯಲ್ಲಿ ಪತ್ನಿ ಮಂಗಳಾ, ಸ್ಪೂರ್ತಿ, ಶ್ರದ್ಧಾ, ಅಳಿಯಂದಿರರು, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಸಚಿವ ಜಗದೀಶ ಶೆಟ್ಟರ್, ಶಾಸಕ ಮಹಾಂತೇಶ ದೊಡಗೌಡರ, ಪ್ರದೀಪ ಶೆಟ್ಟರ ಸೇರಿದಂತೆ ಕರ್ನಾಟಕದ ಅನೇಕ ಸಂಸದರು, ಜನಪ್ರತಿನಿಧಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಅಂಗಡಿ ನಿಧನಕ್ಕೆ ಡಿ. ವೀರೇಂದ್ರ ಹೆಗ್ಗಡೆ ಸಂತಾಪ

Advertisement

ಸುರೇಶ್ ಅಂಗಡಿಯವರ ನಿಧನ ಸುದ್ದಿ ತಿಳಿದು ದುಃಖವಾಯಿತು. ಜನ ಸಾಮಾನ್ಯರೊಂದಿಗೆ ಸರಳವಾಗಿ ಬೆರೆಯುವ ಮತ್ತು ಅವರಲ್ಲಿ ನಗು ನಗುತ್ತ ಸೇವೆ ಮಾಡುವ ಸದ್ಗುಣಗಳು ನನ್ನನ್ನು ವಿಶೇಷವಾಗಿ ಆಕರ್ಷಿಸಿತ್ತು. ಈ ಭಾಗದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಅವರೊಂದಿಗೆ ನಾನು ಭಾಗವಹಿಸಿದ್ದೇನೆ.

ದೃಢವಾದ ಸಂಕಲ್ಪ ಶಕ್ತಿಯ ಜೊತೆಗೆ ವಿನಯವಾದ ನಡವಳಿಕೆ ಮೆಚ್ಚುವಂಥದ್ದು. ಅವರು ತಮ್ಮ ಈ ಎಲ್ಲ ಗುಣಗಳಿಂದಲೇ ಕೇಂದ್ರ ಸಚಿವರಾಗಿ ಸೇವೆ ಮಾಡುವ ಅವಕಾಶ ದೊರಕಿತ್ತು. ಅವರ ಅಕಾಲಿಕ ನಿಧನ ನನಗೆ ದುಃಖವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬ ವರ್ಗದವರಿಗೆ ನೋವನ್ನು ಸಹಿಸುವ ಶಕ್ತಿ ಶ್ರೀ ಮಂಜುನಾಥ ಸ್ವಾಮಿ ಅನುಗ್ರಹಿಸಲಿ ಎಂದು ಶ್ರೀ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಪ್ರಾರ್ಥಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next