Advertisement

ಚೆನ್ನೈ ಜೊತೆ ಸುರೇಶ್‌ ರೈನಾ ನಂಟು ಬೆಸೆಯುವುದು ಡೌಟು!

05:28 PM Aug 31, 2020 | sudhir |

ಚೆನ್ನೈ : ಸುರೇಶ್‌ ರೈನಾ ದಿಢೀರನೇ ಐಪಿಎಲ್‌ನಿಂದ ಹೊರಬಂದ ಘಟನೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಿಎಸ್‌ಕೆ ತಂಡದ ಸ್ಟಾರ್‌ ಆಟಗಾರ, ಕಪ್ತಾನ ಧೋನಿಯ ಬಲಗೈ ಬಂಟನಂತಿದ್ದ ರೈನಾ ಯುಎಇಗೆ ಹೋದ ಕೆಲವೇ ದಿನಗಳಲ್ಲಿ ಇಂಥದೊಂದು ನಿರ್ಧಾರಕ್ಕೆ ಬರುತ್ತಾರೆಂದು ಯಾರೂ ಭಾವಿಸಿರಲಿಲ್ಲ.

Advertisement

ಚೆನ್ನೈ ತಂಡದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ ಆಗಿರುವ ಸುರೇಶ್‌ ರೈನಾ ಈ ರೀತಿ ವರ್ತಿಸಿದ್ದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಮುಖ್ಯವಾಗಿ ಚೆನ್ನೈ ಫ್ರಾಂಚೈಸಿ ರೈನಾ ಅವರ ಈ ನಡೆಗೆ ಅಚ್ಚರಿ, ಆಘಾತದ ಜತೆಗೆ ಆಕ್ರೋಶವನ್ನೂ ವ್ಯಕ್ತಪಡಿಸಿದೆ. ಸಿಎಸ್‌ಕೆ ಮಾಲಕ, ಬಿಸಿಸಿಐ ಮಾಜಿ ಅಧ್ಯಕ್ಷ ಎನ್‌. ಶ್ರೀನಿವಾಸನ್‌ ಇದರಿಂದ ಗರಂ ಆಗಿದ್ದಾರೆ ಎಂಬುದೊಂದು ಸುದ್ದಿ. ಇದನ್ನೆಲ್ಲ ಗಮನಿಸುವವಾಗ ಚೆನ್ನೈ ಮತ್ತು ರೈನಾ ನಂಟು 2020ಕ್ಕಷ್ಟೇ ಅಲ್ಲ, ಶಾಶ್ವತವಾಗಿ ಕಡಿಯುವ ಸೂಚನೆ ಲಭಿಸಿದೆ.

ಗಂಭೀರ ಸಮಸ್ಯೆಯಲ್ಲ…
“ಚೆನ್ನೈ ತಂಡದಲ್ಲಿ ಕೋಚ್‌, ನಾಯಕ ಮತ್ತು ಮ್ಯಾನೇಜರ್‌ಗೆ ಪ್ರತ್ಯೇಕ ಹೊಟೇಲ್‌ ಕೊಠಡಿ ನೀಡಲಾಗಿತ್ತು. ರೈನಾಗೂ ಇದರ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆ ಕೊಠಡಿಗೆ ಬಾಲ್ಕನಿ ಇರಲಿಲ್ಲ, ಅಷ್ಟೇ. ಇದು ಭಾರತಕ್ಕೆ ಮರಳುವಷ್ಟು ದೊಡ್ಡ ಸಮಸ್ಯೆಯೇನೂ ಆಗಿರಲಿಲ್ಲ’ ಎಂಬುದಾಗಿ ಮೂಲವೊಂದು ಹೇಳಿದೆ.

ಮರು ಹರಾಜು ವ್ಯಾಪ್ತಿಗೆ
ಹಾಗಾದರೆ ನಿರ್ಧಾರ ಬದಲಿಸಿ, ಪರಿಸ್ಥಿತಿಯನ್ನು ಅವಲೋಕಿಸಿ ಸುರೇಶ್‌ ರೈನಾ ಪುನಃ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆಯೇ ಎಂಬುದೊಂದು ಪ್ರಶ್ನೆ. “ಇಲ್ಲ. ರೈನಾ ಈ ಐಪಿಎಲ್‌ ಋತುವಿಗೆ ಲಭ್ಯರಿಲ್ಲ ಎಂದು ಸಿಎಸ್‌ಕೆ ಈಗಾಗಲೇ ಅಧಿಕೃತ ಪ್ರಕಟನೆ ನೀಡಿದೆ. ಈಗಾಗಲೇ ನಿವೃತ್ತಿ ಘೋಷಿಸಿದ, ಯಾವುದೇ ಮಾದರಿಯ ಪಂದ್ಯಗಳನ್ನಾಡದ ಆಟಗಾರನೊಬ್ಬ ಸಿಎಸ್‌ಕೆ ತಂಡಕ್ಕೆ ಬರುವ ಸಾಧ್ಯತೆ ಇಲ್ಲ. ಹೀಗಾಗಿ ರೈನಾ ಐಪಿಎಲ್‌ನಲ್ಲಿ ಮುಂದುವರಿಯುವುದಾದರೆ ಮರು ಹರಾಜಿಗೆ ಒಳಗಾಗಬೇಕಾಗುತ್ತದೆ. ಆಗ ಯಾವ ಫ್ರಾಂಚೈಸಿ ಬೇಕಾದರೂ ಅವರನ್ನು ಖರೀದಿಸಬಹುದಾಗಿದೆ’ ಎಂದು ಸಿಎಸ್‌ಕೆ ಫ್ರಾಂಚೈಸಿಯ ಮೂಲವೊಂದು ಸ್ಪಷ್ಟಪಡಿಸಿದೆ. ಅಲ್ಲಿಗೆ ಚೆನ್ನೈಗೆ ರೈನಾ ಮೇಲಿನ ಆಸಕ್ತಿ ಹೊರಟು ಹೋಗಿದೆ ಎಂದೇ ತಿಳಿಯಬೇಕಾಗುತ್ತದೆ.
ಸುರೇಶ್‌ ರೈನಾ ಸಿಎಸ್‌ಕೆ ಪರ 164 ಪಂದ್ಯಗಳನ್ನಾಡಿದ್ದು, ಸರ್ವಾಧಿಕ 4,527 ರನ್‌ ಪೇರಿಸಿದ್ದಾರೆ. ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ ಹೊರತುಪಡಿಸಿದರೆ ಅತ್ಯಧಿಕ ರನ್‌ ಗಳಿಸಿದ ದಾಖಲೆ ಈ ಯುಪಿಯ ಎಡಗೈ ಆಟಗಾರನದ್ದು.

Advertisement

Udayavani is now on Telegram. Click here to join our channel and stay updated with the latest news.

Next