ಹೊಸದಿಲ್ಲಿ: ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಟ್ಟದಿಂದ ನಿವೃತ್ತರಾಗುವ ಕ್ರಿಕೆಟಿಗರು ಮೊದಲು ಬಿಸಿಸಿಐಗೆ ತಿಳಿಸುತ್ತಾರೆ. ಆದರೆ ಸುರೇಶ್ ರೈನಾ ವಿಷಯದಲ್ಲಿ ಹೀಗಾಗಿಲ್ಲ. ಶನಿವಾರ ಧೋನಿ ನಿವೃತ್ತಿ ಹೇಳಿದ ಕೂಡಲೇ ರೈನಾ ಕೂಡ ನಾಯಕನನ್ನೇ ಅನುಸರಿಸಿದರು. ರವಿವಾರ ಬಿಸಿಸಿಐಗೆ ಮಾಹಿತಿ ನೀಡಿದರು.
ಇದೊಂದು ರೀತಿಯಲ್ಲಿ ವಿಚಿತ್ರ ಪ್ರಕರಣವಾಗಿ ದಾಖಲಾಗಿದೆ. ಆದರೂ ಬಿಸಿಸಿಐ, ಸುರೇಶ್ ರೈನಾಗೆ ಗೌರವ ಸಲ್ಲಿಸುವುದನ್ನು ಮರೆತಿಲ್ಲ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯಿಸಿ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತದ ಅತ್ಯುತ್ತಮ ಆಟಗಾರರಲ್ಲಿ ಸುರೇಶ್ ರೈನಾ ಕೂಡ ಒಬ್ಬರು. ಕೆಳಹಂತದಲ್ಲಿ ಬ್ಯಾಟಿಂಗಿಗೆ ಬಂದು ಪಂದ್ಯ ಗೆಲ್ಲಿಸುವಂತಹ ಆಟ ಆಡುವುದಕ್ಕೆ ಅತ್ಯುತ್ತಮ ತಂತ್ರಗಾರಿಕೆ ಬೇಕಾಗುತ್ತದೆ. ಅವರು ಯುವರಾಜ್, ಧೋನಿ ಜತೆ ಸೇರಿ ಭಾರತದ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಿದ್ದರು ಎಂದು ಹೇಳಿದ್ದಾರೆ.
ಕಾರ್ಯದರ್ಶಿ ಜಯ್ ಶಾ ಪ್ರತಿಕ್ರಿಯಿಸಿ, ರೈನಾ ಅತ್ಯುತ್ತಮ ಟಿ20 ಆಟಗಾರ, ಮ್ಯಾಚ್ ವಿನ್ನರ್. 2011ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ವಿರುದ್ಧದ ಆಟ ಅವರ ಸಾಮರ್ಥಯಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.