Advertisement

ಹಿರೇಬಾಗೇವಾಡಿಗೆ ಸುರೇಶ-ಲಕ್ಷೀ ಭೇಟಿ

03:44 PM Apr 16, 2020 | Team Udayavani |

ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಕೋವಿಡ್19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಮನಗಂಡ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.

Advertisement

ಗ್ರಾಮದಲ್ಲಿಯ ಸ್ಥಿತಿಗತಿ ಹಾಗೂ ಕೋವಿಡ್19 ಸೋಂಕು ಹರಡುವುದನ್ನು ತಡೆಯಲು ಕೈಗೊಳ್ಳಬೆಕಾದ ಕ್ರಮಗಳ ಬಗ್ಗೆ ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಸಚಿವ ಸುರೇಶ ಅಂಗಡಿ ಮಾತನಾಡಿ,ಗ್ರಾಮದಲ್ಲಿ ಕೋವಿಡ್19 ಸೋಂಕು ಹರಡದಂತೆ ಎಲ್ಲರೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ವಿಧಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇಕಾರಣಕ್ಕೂ ಜನರು ಮನೆ ಬಿಟ್ಟು ಹೊರಗೆ ಬರಬಾರದು. ಅನಾವಶ್ಯಕವಾಗಿ ಹೊರಗೆ ಬಂದು ರೋಗ ಹರಡಲು ಕಾರಣರಾಗಬಾರದು ಎಂದು ಹೇಳಿದರು.

 

ಪಕ್ಷ ಭೇದ ಮರೆತು ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ರೈತರು ಕೃಷಿ ಚಟುವಟಿಕೆ ನಡೆಸಲು ಹೋಗುವಾಗ ಅಂತರ ಕಾಪಾಡಿಕೊಳ್ಳಬೇಕು. ಎಲ್ಲರೂ ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ನಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಇನ್ನು ಮುಂದೆ ಹೊಸ ಸೋಂಕಿತರು ಬರಬಾರದಂತೆ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ನಂತರ ಗ್ರಾಮಸ್ಥರಿಗೆ ಸುರೇಶ ಅಂಗಡಿ ಅವರು ಮಾಸ್ಕ್ ಹಾಗೂ ಸ್ಯಾನಿಟೈಸರ್‌ ವಿತರಿಸಿದರು.

Advertisement

ಆರೋಗ್ಯದ ತಪಾಸಣೆ ಮಾಡಿಕೊಳ್ಳಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಅವರು ಹಿರೇಬಾಗೇವಾಡಿಯಲ್ಲಿ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು. ರೋಗ ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ‌ ಚರ್ಚಿಸಿದ ಅವರು, ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದರು. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದು ತಮ್ಮ ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳಬೇಕು. ಭಯ ಪಡದೇ ಚಿಕಿತ್ಸೆಗೆ ಸಹಕರಿಸಬೇಕು. ಎಲ್ಲರ ಸಹಕಾರವಿದ್ದರೆ ಮಾತ್ರ ಈ ಮಹಾ ಮಾರಿ ಕೋವಿಡ್ 19 ವೈರಸ್‌ದಿಂದ ಮುಕ್ತರಾಗಲು ಸಾಧ್ಯವಿದೆ ಎಂದರು. ಟಾಸ್ಕ್ ಫೋರ್ಸ್‌ ಅಧ್ಯಕ್ಷ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರೀತಂ ನಸ್ಲಾಪುರೆ ಸೇರಿದಂತೆ ಅಧಿಕಾರಿಗಳು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next