Advertisement

ಹೆಚ್ಚುವರಿ ಶುಲ್ಕಕ್ಕೆ ಒತ್ತಡ: ಸಂವೇದನೆಯ ವರ್ತನೆ ಇಂದಿನ ಅಗತ್ಯ ಎಂದ ಸಚಿವ ಸುರೇಶ್ ಕುಮಾರ್

01:19 PM Mar 19, 2021 | Team Udayavani |

ಬೆಂಗಳೂರು: ನಗರದ ಖಾಸಗಿ ಶಾಲೆಯೊಂದರಲ್ಲಿ ಹೆಚ್ಚುವರಿ ಶುಲ್ಕ ಪಾವತಿಸಲು ಅಸಹಾಯಕರಾದ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಟ್ಟಂತಹ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಶಾಲೆಯಲ್ಲಿ ಶುಲ್ಕದ ವಿಚಾರದಲ್ಲಿ ನಡೆದ ಪ್ರಕರಣಗಳು ದುರದೃಷ್ಟಕರವಾಗಿದ್ದು, ಇಂತಹ ಪ್ರಕರಣಗಳು ಮರುಕಳಿಸದಂತೆ ಖಾಸಗಿ ಶಾಲೆಗಳು ಕ್ರಮವಹಿಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

Advertisement

ಸಾಮಾಜಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಇಂತಹ ಪ್ರಕರಣಗಳು ನಮ್ಮ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಕುಂದಿಸುವುದರೊಂದಿಗೆ ರಾಷ್ಟ್ರದ ಭವಿಷ್ಯದ ಹಿತದಷ್ಟಿಯಿಂದಲೂ ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಹೇಳಿದ್ದಾರೆ.

ಶಾಲಾಡಳಿತ ಮಂಡಳಿಗಳು ಮತ್ತು ಪೋಷಕರ ನಡುವಿನ ಇಂತಹ ಸಂಘರ್ಷಗಳು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇಂತಹ ಪ್ರಕರಣಗಳಿಗೆ ಎಡೆಯಾಗದಂತೆ ವರ್ತಿಸಬೇಕಾದ ಅಗತ್ಯವನ್ನು ನಾನು ಪದೇ ಪದೇ ಹೇಳಿದ್ದೇನೆ. ಈ ಮೊದಲು ಬೆಂಗಳೂರಿನ ಕೋರಮಂಗಲದ ಖಾಸಗಿ ಶಾಲೆಯಲ್ಲೂ ವಿದ್ಯಾರ್ಥಿಯೊಬ್ಬನನ್ನು ಇದೇ ರೀತಿ ನಡೆಸಿಕೊಂಡಿದ್ದರಿಂದ ಆತ ಆತ್ಮಹತ್ಯೆ ಯತ್ನಕ್ಕೂ ಕೈಹಾಕಿದ್ದನ್ನು ನಾವು ಯೋಚಿಸಬೇಕಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಇದನ್ನೂ ಓದಿ: ಯಾವ ಸುಖಕ್ಕಾಗಿ ಬಜೆಟ್ ಅಧಿವೇಶನ ನಡೆಸುತ್ತಿದ್ದೀರಿ: ಎಂಎಲ್‌ಸಿ ವಿಶ್ವನಾಥ್ ಪ್ರಶ್ನೆ

ಹೈಕೋರ್ಟ್ ಕೂಡಾ ಸಹ ಈ ಅತಿಸೂಕ್ಷ್ಮವಾದ ವಿಷಯವನ್ನು ಬಹಳ ನಾಜೂಕಿನಿಂದ ನಿರ್ವಹಿಸಬೇಕಾದ ಅಂಶವನ್ನು ಒತ್ತಿ ಹೇಳಿದೆ,. ನಾಡಿನ ಎಲ್ಲ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸಂವೇದನೆಯಿಂದ ವರ್ತಿಸಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ನಾವು ಕೊರೋನಾ ವಿಷಮ ಕಾಲಘಟ್ಟದ ಸಂದರ್ಭದಲ್ಲಿ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ನಡೆಯಬೇಕಾದ ಅಗತ್ಯ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: ಸಚಿವ ಸುಧಾಕರ್ ಮನೆಮುಂದೆ ರಸ್ತೆಯಲ್ಲೇ ಗನ್ ಮ್ಯಾನ್- ಡ್ರೈವರ್ ಹೊಡೆದಾಟ!

ಪದೇ ಪದೇ ಈ ರೀತಿಯ ಪ್ರಕರಣಗಳು ಮರುಕಳಿಸಿದರೆ ಇಲಾಖೆ ತನ್ನ ಪರಮಾಧಿಕಾರವನ್ನು ಚಲಾಯಿಸಬೇಕಾಗುತ್ತದೆಂಬುದನ್ನು ಶಾಲಾಡಳಿತ ಮಂಡಳಿಗಳು ತಿಳಿದುಕೊಳ್ಳಬೇಕೆಂದು ಸಚಿವರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next