Advertisement

ಸುರೇಶ್‌ಗೌಡ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

11:58 AM May 05, 2019 | Team Udayavani |

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಹಿಳೆಯನ್ನು ಬೆಂಬಲಿಸಿದ್ದಾರೆಂದು ಅನುಮಾನಿಸಿ ಕಾಂಗ್ರೆಸ್‌ ಮಾಜಿ ಶಾಸಕ ರೊಬ್ಬರನ್ನು ಶಿಖಂಡಿ ಎಂಬ ಪದ ಬಳಸಿ ನಿಂದಿಸಿದ್ದಾರೆ. ಈ ಹೇಳಿಕೆಗೆ ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಅಖೀಲ ಕರ್ನಾಟಕ ಅಂಬರೀಶ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್‌ ಆಗ್ರಹಿಸಿದರು.

Advertisement

ಜೆಡಿಎಸ್‌ನವರು ಮೊದಲು ಸಂಸ್ಕೃತಿಯನ್ನು ಕಲಿಯಬೇಕು. ಮಹಿಳೆಯರ ಬಗ್ಗೆ ಅನಾಗರಿಕ, ಅಸಂವಿಧಾನಿಕ ಪದಗಳನ್ನು ಬಳಸದೆ ಅವರ ಮೇಲೆ ಗೌರವ ಹಾಗೂ ಬದ್ಧತೆ ಪ್ರದರ್ಶಿಸಬೇಕು. ಅವರ ಪಕ್ಷದ ಗುರುತಿನಲ್ಲೂ ಹೊರೆ ಹೊತ್ತ ಮಹಿಳೆಯೇ ಇರುವುದರಿಂದ ಅಸಂವಿಧಾನಿಕ ಪದಗಳನ್ನು ಬಳಸುವುದು ಅಸಹ್ಯ ಹುಟ್ಟಿಸುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜಕೀಯವಾಗಿ ಸಕ್ರಿಯವಾಗಿದ್ದ ಹಲವಾರು ಮುಖಂಡರು ನಿಧನರಾದಾಗ ಅವರ ಪತ್ನಿಯರನ್ನು ಜೆಡಿಎಸ್‌ ಅಖಾಡಕ್ಕಿಳಿಸಿ ಅನುಕಂಪದ ಆಧಾರದ ಮೇಲೆ ಹಲವಾರು ಚುನಾವಣೆಗಳನ್ನು ನಡೆಸಿರುವ ಸಾಕಷ್ಟು ಉದಾಹರಣೆಗಳಿವೆ. ಈ ಬೆಳವಣಿಗೆಗಳ ಹಿಂದೆ ಇದ್ದ ಜೆಡಿಎಸ್‌ ವರಿಷ್ಠರ ಬಗ್ಗೆಯೂ ಸುರೇಶ್‌ಗೌಡರ ಅಭಿಪ್ರಾಯ ಇದೇನಾ ಎಂದು ಪ್ರಶ್ನಿಸಿದರು.

ಮೂಲೆ ಗುಂಪಾದವರು: ಐಆರ್‌ಎಸ್‌ ಹುದ್ದೆಯಲ್ಲಿದ್ದ ಲಕ್ಷ್ಮೀ ಅಶ್ವಿ‌ನ್‌ಗೌಡರನ್ನು ರಾಜಕೀಯ ಸ್ಥಾನ-ಮಾನ ನೀಡುವ ಭರವಸೆ ನೀಡಿ ಕೆಲಸಕ್ಕೆ ರಾಜೀನಾಮೆ ಕೊಡಿಸಲಾಯಿತು. ಬಳಿಕ ಅವರಿಗೆ ಚುನಾವಣೆಗಳಿಗೆ ಸಂಪನ್ಮೂಲ ಪಡೆದು ಕೊಳ್ಳಲು ಬಳಸಿಕೊಂಡು ಅಧರ್ಮದಿಂದ ಮೂಲೆಗುಂಪು ಮಾಡಿದವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.

ರಾಜಕೀಯವಾಗಿ ಹಲವಾರು ನಾಯಕರನ್ನು ಹುಟ್ಟುಹಾಕಿ ಅವರ ಬೆಳವಣಿಗೆಗೆ ಕಾರಣರಾದ ಎಸ್‌.ಡಿ.ಜಯರಾಂ ನಿಧನದ ಬಳಿಕ ಅವರ ಕುಟುಂಬವನ್ನು ಸ್ವಾರ್ಥಕ್ಕೆ ಬಳಸಿಕೊಂಡು ಮೂಲೆಗುಂಪು ಮಾಡಿದ್ದು ಯಾರು? ಮದ್ದೂರಿನಲ್ಲಿ ಜೆಡಿಎಸ್‌ ಮುಖಂಡ ಸಿದ್ದರಾಜು ಪತ್ನಿ ಕಲ್ಪನಾ ಸಿದ್ದರಾಜು ಪರಿಸ್ಥಿತಿ ಈಗ ಏನಾಗಿದೆ. ಇದಲ್ಲದೆ, ಪಕ್ಕದ ಚನ್ನಪಟ್ಟಣದ ಆಧುನಿಕ ಭಗೀರಥ ಸಿ.ಪಿ.ಯೋಗೇಶ್ವರ್‌ ಅವರನ್ನು ರಾಜಕೀಯ ವಾಗಿ ಮೂಲೆಗುಂಪು ಮಾಡುವುದಕ್ಕಾಗಿ ಅನಿತಾ ಕುಮಾರಸ್ವಾಮಿ ಅವರನ್ನು ಬಳಸಿಕೊಂಡಿಲ್ಲವೇ? ಅವರನ್ನೆಲ್ಲಾ ಯಾವ ಪದದಿಂದ ಸಂಬೋಧಿಸಬೇಕು ಎಂದು ಕುಟುಕಿದರು. ನಾವು ಯಾರನ್ನೂ ಹೀಯಾಳಿಸುವುದಕ್ಕೆ ಹೋಗುವುದಿಲ್ಲ. ಹಾಗೆ ಮಾಡಿದರೆ ಸುರೇಶ್‌ಗೌಡರಿಗೂ ನಮಗೂ ವ್ಯತ್ಯಾಸವಿರುವುದಿಲ್ಲ. ಅದಕ್ಕಾಗಿ ಶಿಖಂಡಿ ಎಂಬ ಪದ ಬಳಕೆ ಮಾಡಿರುವ ಸುರೇಶ್‌ಗೌಡರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

Advertisement

ಗೋಷ್ಠಿಯಲ್ಲಿ ವಿಜಯ್‌ಕುಮಾರ್‌, ಜಿ.ಸಿ.ಆನಂದ್‌, ಹೆಚ್.ಬಿ. ಅರವಿಂದಕುಮಾರ್‌,ಮುಸ್ಸವೀರ್‌ಖಾನ್‌, ಆರೀಫ್ವುಲ್ಲಾ, ಪ್ರಕಾಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next