ಕೊಪ್ಪ: ವಿದ್ಯಾರ್ಥಿಗಳು ಭಯಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಉತ್ತಮ ಅಂಕ ಪಡೆದು ಕೆಲಸ ಪಡೆದುಕೊಳ್ಳಬೇಕು. ಯಾವುದೇ ಕ್ಷೇತ್ರದಲ್ಲೂ ಶ್ರದ್ಧೆಯಿಂದ ಕೆಲಸ ಮಾಡಿದರೆ ಯಶಸ್ಸು ಖಂಡಿತ ಲಭಿಸುತ್ತದೆ ಎಂದು ಇಸ್ರೋದ ಖ್ಯಾತ ವಿಜ್ಞಾನಿ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ತಾಲೂಕಿನ ಅಂದಗಾರಿನ ಬಿ.ಎನ್. ಸುರೇಶ್ ತಿಳಿಸಿದರು.
ಶಿಕ್ಷಣ ಇಲಾಖೆ ಮತ್ತು ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಪಟ್ಟಣದ ಪುರಭವನದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಶಕ್ತಿ ದೇಶದ ಸಂಪತ್ತು. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಯುವಕರಿಗೆ ಸರಿಯಾದ ಮಾರ್ಗದರ್ಶನ ಮತ್ತು ಸಹಕಾರ ಸಿಕ್ಕಿದಲ್ಲಿ ಭಾರತ ವಿಶ್ವದಲ್ಲಿಯೇ ಮುಂಚೂಣಿ ರಾಷ್ಟ್ರವಾಗುತ್ತದೆ ಎಂದರು.
ಕಲಿಯುವ ಪ್ರವೃತ್ತಿ ಅಂಕಗಳಿಕೆಗೆ ಸೀಮಿತವಾಗದೇ ನಿರಂತರವಾಗಿರಬೇಕು. ವಾಸ್ತವ ಜಗತ್ತನ್ನು ಅರಿಯಬೇಕು. ಯಾವುದೇ ಕೆಲಸ ಮಾಡುವಾಗ ಹಿಂಜರಿಕೆ ಇರಬಾರದು. ಸಾಧನೆಯ ಹಾದಿಯಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಉತ್ತಮ ಸಾಧನೆ ಮಾಡಿದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ. ನಮ್ಮ ಸಾಧನೆಗಳು ಮಾತಾಗಬೇಕೆ ಹೊರತು ಮಾತುಗಳೇ ಸಾಧನೆಯಾಗಬಾರದು ಎಂದು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನವನ್ನು ದುರ್ಬಳಕೆ ಮಾಡದೇ ಮಾನವ ಜನಾಂಗದ ಏಳ್ಗೆಗೆ ಬಳಸಬೇಕು. ದೇಶದ ಅಭಿವೃದ್ಧಿಗೆ ಕೃಷಿ, ವಿಜ್ಞಾನ, ತಂತ್ರಜ್ಞಾನ ಎಲ್ಲವೂ ಅವಶ್ಯವಾಗಿದೆ. 50 ವರ್ಷಗಳ ಹಿಂದೆ ಭಾರತದಂತೆ ಹಿಂದುಳಿದ ದೇಶವಾಗಿದ್ದ ಚೀನಾ ಇಂದು ಅಮೆರಿಕಾಕ್ಕೆ ಸಡ್ಡು ಹೊಡೆಯುತ್ತಿದೆ. ಭಾರತವೂ ಪ್ರಗತಿಯತ್ತ ದಾಪುಗಾಲು ಹಾಕುತ್ತಿದ್ದು, ಫ್ರಾನ್ಸ್ ದೇಶವನ್ನು ಹಿಂದಿಕ್ಕಿ 6ನೇ ಸ್ಥಾನದಲ್ಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ವಿಶ್ವದ ನಂ. 1 ಸ್ಥಾನ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಗಣಪತಿ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ತಾರಾನಾಥ್, ಸಬಿತಾ ತಾರಾನಾಥ್, ಕೊಪ್ಪ ಘಟಕದ ಅಧ್ಯಕ್ಷ ಕೆ.ಜಿ. ಶೋಭಿಂತ್, ಸಹದೇವ ಬಾಲಕೃಷ್ಣ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುಚಿಶ್ಚಂದ್ರ ಶೆಟ್ಟಿ, ಕ್ಷೇತ್ರ ಸಮನ್ವಯ ಅಧಿಕಾರಿ ಎನ್. ಶೇಖರಪ್ಪ ಮತ್ತಿತರರು ಇದ್ದರು.