ಹೊಸದಿಲ್ಲಿ: ಬುಧವಾರ ಸಂಜೆ ನಿಧನರಾದ ಬೆಳಗಾವಿ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಇಂದು ಸಂಜೆ ನಾಲ್ಕು ಗಂಟೆಗೆ ದೆಹಲಿಯಲ್ಲೇ ನಡೆಸಲು ತೀರ್ಮಾನಿಸಲಾಗಿದೆ.
ಸುರೇಶ್ ಅಂಗಡಿಯವರ ಪಾರ್ಥೀವ ಶರೀರವನ್ನು ಬೆಳಗಾವಿಗೆ ತರಲು ಸಚಿವ ಜಗದೀಶ್ ಶೆಟ್ಟರ್ ಅವರು ಪ್ರಯತ್ನ ನಡೆಸಿದ್ದರು. ಆದರೆ ಸುರೇಶ್ ಅಂಗಡಿಯವರು ಕೋವಿಡ್-19 ಸೋಂಕಿನಿಂದ ಮೃತಪಟ್ಟ ಕಾರಣ ಬೆಳಗಾವಿಗೆ ತರಲು ಅವಕಾಶವಿಲ್ಲ ಎನ್ನಲಾಗಿದೆ. ಹೀಗಾಗಿ ಇಂದು ಸಂಜೆ ದಿಲ್ಲಿಯ ದ್ವಾರಕಾ ಸೆಕ್ಟರ್ 24ನಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ವರದಿಗಳು ತಿಳಿಸಿದೆ.
ಇದನ್ನೂ ಓದಿ: ನುಡಿನಮನ: ಅಜಾತಶತ್ರು ಅಂಗಡಿ ; ಸಾಧನೆಗಳ ಹೆಜ್ಜೆ ಗುರುತು ಬಿಟ್ಟು ಹೋದ ಜನನಾಯಕ
ಸುರೇಶ್ ಅಂಗಡಿಯವರ ಬೀಗರೂ ಆಗಿರುವ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಬುಧವಾರ ರಾತ್ರಿ ದೆಹಲಿಗೆ ತೆರಳಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂಗಡಿ ಅಂತ್ಯಕ್ರಿಯೆ ನಡೆಯಲಿದೆ.
ಸುರೇಶ್ ಅಂಗಡಿ ಪತ್ನಿ, ಮಗಳು ಮತ್ತು ಇಬ್ಬರು ಅಳಿಯಂದಿರು ದೆಹಲಿಯಲ್ಲಿ ಇದ್ದಾರೆ. ಒಬ್ಬರು ಪುತ್ರಿ ಬೆಳಗಾವಿಯಲ್ಲಿದ್ದು, ಕುಟುಂಬದ ಕೆಲವರೊಂದಿಗೆ ದೆಹಲಿಗೆ ತೆರಳಲಿದ್ದಾರೆ. ಲಿಂಗಾಯತ ವಿಧಿವಿಧಾನಗಳಂತೆ, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಅಂತ್ಯಕ್ರಿಯೆ ನಡೆಸಲಾಗುತ್ತದೆ.