Advertisement

ದೆಹಲಿಯಲ್ಲಿ ಕರ್ನಾಟಕದ ಗಟ್ಟಿ ಧ್ವನಿ ; ಗಡಿನಾಡಿನ ಸಜ್ಜನ ರಾಜಕಾರಣಿ ಸುರೇಶ್ ಅಂಗಡಿ

10:58 PM Sep 23, 2020 | Hari Prasad |

ಮಣಿಪಾಲ: ಭಾರತೀಯ ಜನತಾ ಪಕ್ಷಕ್ಕೆ ಕೋವಿಡ್ 19 ಸೋಂಕು ಆಘಾತಗಳ ಸರಮಾಲೆಯನ್ನೇ ಕೊಟ್ಟಿದೆ.

Advertisement

ಒಂದೆಡೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಮತ್ತು ಇತ್ತೀಚೆಗಷ್ಟೇ ರಾಜ್ಯಸಭೆಗೆ ಆಯ್ಕೆಗೊಂಡಿದ್ದ ಅಶೋಕ್ ಕುಮಾರ್ ಗಸ್ತಿ ಅವರು ಕೋವಿಡ್ 19 ಸೋಂಕಿಗೆ ಬಲಿಯಾದ ಕಹಿ ನೆನಪು ಮರೆಯಾಗುವ ಮುನ್ನವೇ ಪಕ್ಷ ರಾಜ್ಯದ ಇನ್ನೋರ್ವ ಪ್ರಬಲ ನಾಯಕನನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿದೆ.

ಸಂಸದ ಸುರೇಶ್ ಅಂಗಡಿ ಅವರು ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೂ ಯಾವತ್ತೂ ಹೆಚ್ಚು ಪ್ರಚಾರದಲ್ಲಿರದ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು.

ಪಕ್ಷ ತನಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕಲೆ ಅವರಿಗೆ ಸಿದ್ದಿಸಿತ್ತು. ಹಾಗಾಗಿಯೇ ಕೆಂದ್ರ ರೈಲ್ವೇ ಇಲಾಖೆಯ ರಾಜ್ಯ ಸಚಿವರಾಗಿದ್ದುಕೊಂಡು ಕರ್ನಾಟಕಕ್ಕೆ ಮಂಜೂರಾಗಬೇಕಾಗಿದ್ದ ಹಲವಾರು ಯೋಜನೆಗಳನ್ನು ಮಂಜೂರು ಮಾಡಿಸಿಕೊಡುವ ಮೂಲಕ ರಾಜ್ಯದ ಅಭಿವೃದ್ಧಿಯ ಕನಸನ್ನು ಸದಾ ಕಾಣುತ್ತಿದ್ದ ವ್ಯಕ್ತಿತ್ವ ಅಂಗಡಿಯವರದ್ದಾಗಿತ್ತು ಎಂಬುದನ್ನು ಅವರ ಸಹವರ್ತಿಗಳು ನೆನಪಿಸಿಕೊಳ್ಳುತ್ತಾರೆ.

ಕೇಂದ್ರದಲ್ಲಿ ಯಾವುದೇ ಪಕ್ಷದ ಸರಕಾರವಿದ್ದರೂ ರಾಜ್ಯದ ಪರವಾಗಿ ಧ್ವನಿ ಎತ್ತುವ ಮತ್ತು ರಾಜ್ಯದ ಅಭಿವೃದ್ಧಿಗಾಗಿ ದೂರಗಾಮಿ ಯೋಜನೆಗಳನ್ನು ಮಂಜೂರು ಮಾಡಿಸಿಕೊಳ್ಳುವ ಛಾತಿ ನಮ್ಮ ರಾಜ್ಯದ ರಾಜಕಾರಣಿಗಳಲ್ಲಿರುವುದು ಸ್ವಲ್ಪ ಕಡಿಮೆಯೇ.

Advertisement

ಇದನ್ನೂ ಓದಿ: ರೈಲ್ವೇ ಖಾತೆ ರಾಜ್ಯ ಸಚಿವ ಸಂಸದ ಸುರೇಶ್ ಅಂಗಡಿ ಕೋವಿಡ್ ಸೋಂಕಿಗೆ ಬಲಿ

ಈ ವಿಚಾರದಲ್ಲಿ ಕೇರಳ, ತಮಿಳುನಾಡು ಹಾಗೂ ಆಂಧ್ರ ಪ್ರದೇಶದ ಸಂಸದರು ಎತ್ತಿದ ಕೈ. ರಾಜ್ಯ ಕಂಡ ಅಂತಹ ಅಪರೂಪದ ಸಂಸದರಲ್ಲಿ ಸುರೇಶ್ ಅಂಗಡಿ ಅವರೂ ಒಬ್ಬರಾಗಿದ್ದರು. ಇದೀಗ ಅವರ ಅಕಾಲಿಕ ನಿಧನ ಕೇಂದ್ರದ ಪಡಸಾಲೆಯಲ್ಲಿ ಕರುನಾಡಿನ ಗಟ್ಟಿ ಧ್ವನಿಯೊಂದನ್ನು ಕಳೆದುಕೊಂಡ ಸಂಕಟವನ್ನು ತಂದೊಟ್ಟಿದೆ. ಹಾಗಾಗಿ ಸುರೇಶ್ ಅಂಗಡಿ ಅವರ ನಿಧನ ಕೇವಲ ಉತ್ತರ ಕರ್ನಾಟಕ ಭಾಗಕ್ಕೆ ಮಾತ್ರವಲ್ಲದೇ ರಾಜ್ಯಕ್ಕೇ ಆದ ದೊಡ್ಡ ನಷ್ಟ ಎಂದರೆ ಅತಿಶಯೋಕ್ತಿಯಾಗಲಾರದು.

ಸುರೇಶ್ ಅಂಗಡಿಯವರದ್ದು ರಾಜಕೀಯ ಹಿನ್ನಲೆಯುಳ್ಳ ಕುಟುಂಬವಲ್ಲ. ಬದಲಾಗಿ ಮೂಲತಃ ವ್ಯಾಪಾರಿ ವೃತ್ತಿಯನ್ನು ನಡೆಸುತ್ತಿದ್ದ ಕುಟುಂಬ ಹಿನ್ನಲೆ ಅವರದ್ದಾಗಿತ್ತು. ಆದರೆ, ಭಾರತೀಯ ಜನತಾ ಪಕ್ಷದ ಸಿದ್ಧಾಂತಗಳಿಗೆ ಮಾರುಹೋದ ಸುರೇಶ್ ಅಂಗಡಿಯವರು ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಕಮಲ ಬಾವುಟ ಹಾರುವಲ್ಲಿ ಬಹುದೊಡ್ಡ ಪಾತ್ರವನ್ನೇ ನಿಭಾಯಿಸುತ್ತಾರೆ.

1996ರಲ್ಲಿ ಬೆಳಗಾವಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅಂಗಡಿಯವರು ಅಲ್ಲಿ ತಳಮಟ್ಟದಲ್ಲಿ ಪಕ್ಷವನ್ನು ಸದೃಢಗೊಳಿಸುವ ಕೆಲಸಕ್ಕೆ ಕೈ ಹಾಕುತ್ತಾರೆ. ಹಾಗಾಗಿ ಮೂಲತಃ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೆಳಗಾವಿಯಲ್ಲಿ ಕೇಸರಿ ಪಕ್ಷ ತನ್ನ ಅಸ್ತಿತ್ವತ್ವನ್ನು ಭದ್ರಗೊಳಿಸುತ್ತಾ ಸಾಗುತ್ತದೆ.

ಮುಂದಿನ ಮೂರು ವರ್ಷಗಳ ಕಾಲ ಸುರೇಶ್ ಅಂಗಡಿ ಅವರು ಜಿಲ್ಲಾ ಉಪಾಧ್ಯಕ್ಷರಾಗಿ ಪಕ್ಷ ಕಟ್ಟುವ ಕೆಲಸವನ್ನು ಮಾಡುತ್ತಾರೆ. ಅವರ ಸಂಘಟನಾ ಚತುರತೆ ಮತ್ತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುವ ಅವರ ನಾಯಕತ್ವ ಗುಣ 2001ರಲ್ಲಿ ಅವರನ್ನು ಪಕ್ಷದ ಬೆಳಗಾವಿ ಜಿಲ್ಲಾಧ್ಯಕ್ಷರನ್ನಾಗಿಸುತ್ತದೆ. 2004ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಮೇದುವಾರಿಕೆಯನ್ನು ಪಡೆದುಕೊಳ್ಳುವವರೆಗೆ ಅಂಗಡಿಯವರು ಪಕ್ಷ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ.

ಇದರ ಫಲಶ್ರುತಿಯೆಂಬಂತೆ 2004ರ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಅಂಗಡಿ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿ ಸಂಸತ್ ಪ್ರವೇಶಿಸುತ್ತಾರೆ. ಬಳಿಕ ಈ ಜೈತಯಾತ್ರೆ ಮುಂದಿನ ಮೂರು ಅವಧಿಗೆ ಅಜೇಯವಾಗುತ್ತದೆ. ಹೀಗೆ 2009, 2014 ಮತ್ತು 2019ರಲ್ಲಿ ಸಂಸದರಾಗಿ ಜನಾಶೀರ್ವಾದ ಪಡೆಯುವ ಮೂಲಕ ಸುರೇಶ್ ಅಂಗಡಿಯವರು ಸೋಲಿಲ್ಲದ ನಾಯಕರಾಗಿ ಕೆಂದ್ರ ಬಿಜೆಪಿ ನಾಯಕರ ಗಮನ ಸೆಳೆಯುತ್ತಾರೆ.

2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೇರುತ್ತದೆ. ಈ ಸಂದರ್ಭದಲ್ಲಿ 2016ರಿಂದ 2019ರವರೆಗೆ ಸುರೇಶ್ ಅಂಗಡಿಯವರು ಸಂಸತ್ ಸದನ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ.

ಬಳಿಕ 2019ರಲ್ಲಿ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಸಚಿವ ಸಂಪುಟದಲ್ಲಿ ಸುರೇಶ್ ಅಂಗಡಿಯವರು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವರಾಗಿ ನಿಯುಕ್ತಿಗೊಳ್ಳುತ್ತಾರೆ.

ಸತತ ನಾಲ್ಕು ಸಲ ಸಂಸದರಾಗಿದ್ದ ಅಂಗಡಿಯವರ ಕಾರ್ಯದಕ್ಷತೆಗೆ ಅವರಿಗೆ ಪ್ರಮುಖ ಖಾತೆ ಒಲಿಯುತ್ತದೆಂಬುದು ಅವರ ಕ್ಷೇತ್ರದ ಜನರ ಮತ್ತು ರಾಜ್ಯದ ಜನತೆಯ ನಂಬಿಕೆಯಾಗಿತ್ತು. ಆದರೂ ರೈಲ್ವೇ ಖಾತೆಯ ರಾಜ್ಯ ಸಚಿವರೆಂಬುದು ಮಹತ್ವದ ಖಾತೆಯೇ ಆಗಿದ್ದರಿಂದ ಸುರೇಶ್ ಅಂಗಡಿಯವರು ತಮಗೆ ಸಿಕ್ಕಿದ ಆ ಜವಾಬ್ದಾರಿಯನ್ನು ಸಮರ್ಥವಾಗಿಯೇ ನಿಭಾಯಿಸುತ್ತಿದ್ದರು.

ಅಂಗಡಿಯವರು ರೈಲ್ವೇ ಖಾತೆಯ ರಾಜ್ಯ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದು ಸರಿಸುಮಾರು ಒಂದೂವರೆ ವರ್ಷಗಳ ಕಾಲ ಮಾತ್ರ. ಈ ಅವಧಿಯಲ್ಲಿ ಅವರು ರಾಜ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುವಲ್ಲಿ ಹಿಂದೆ ಉಳಿಯಲಿಲ್ಲ.

ಈ ಅವಧಿಯಲ್ಲಿ ಸಚಿವ ಅಂಗಡಿ ಅವರು ಬೆಳಗಾವಿ – ಬೆಂಗಳೂರು ಸೂಪರ್ ಫಾಸ್ಟ್ ರೈಲು, ಬೆಳಗಾವಿ – ಕಿತ್ತೂರು – ಧಾರವಾಡ ರೈಲು ಮಾರ್ಗ ಸಮೀಕ್ಷೆಗೆ ಒಪ್ಪಿಗೆ, ಬಾಗಲಕೋಟೆ – ಕುಡುಚಿ ರೈಲು ಮಾರ್ಗ ಕಾಮಗಾರಿಗೆ ಚುರುಕು, ಕಿಸಾನ್ ರೈಲು ಪ್ರಾರಂಭ ಮತ್ತು ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಭಾಗವನ್ನು ಬೆಸೆಯುವ ವಿಜಯಪುರ – ಮಂಗಳೂರು ರೈಲು ಸೇವೆಗೆ ಚಾಲನೆ ನೀಡುವ ಮೂಲಕ ಮುಂಬರುವ ದಿನಗಳಲ್ಲಿ ಇನ್ನಷ್ಟು ರೈಲ್ವೇ ಯೋಜನೆಗಳು ರಾಜ್ಯಕ್ಕೆ ದಕ್ಕುವಂತ ನಿರೀಕ್ಷೆಯನ್ನು ಮೂಡಿಸಿದ್ದರು.

ಆದರೆ ದುರಾದೃಷ್ಟವೆಂಬಂತೆ ಒಬ್ಬ ದೂರಗಾಮಿ ನಾಯಕನನ್ನು ಕಳೆದುಕೊಂಡ ಪಕ್ಷ ಹಾಗೂ ಜನನಾಯಕನನ್ನು ಕಳೆದುಕೊಂಡ ಬೆಳಗಾವಿ ಕ್ಷೇತ್ರದ ಜನತೆ ಇದೀಗ ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಸಮನ್ವಯಕಾರರಾಗಿದ್ದ ಅನಂತ ಕುಮಾರ್ ನಿಧನವನ್ನೇ ಕೇಸರಿ ಪಕ್ಷ ಇನ್ನೂ ಅರಗಿಸಿಕೊಂಡಿಲ್ಲ. ಇದರ ನಡುವೆಯೇ ಪಕ್ಷ ನಿಷ್ಠ ನಾಯಕರಾಗಿದ್ದ ಅಶೋಕ್ ಗಸ್ತಿ ಮತ್ತು ಸಂಸದ, ಕೇಂದ್ರ ಸಚಿವ ಸುರೇಶ್ ಅಂಗಡಿಯವರಂತಹ ನಾಯಕರ ಸಾವು ಭಾರತೀಯ ಜನತಾ ಪಕ್ಷಕ್ಕೊಂದು ಆಘಾತವೇ ಸರಿ.

– ಹರಿ

Advertisement

Udayavani is now on Telegram. Click here to join our channel and stay updated with the latest news.

Next