Advertisement

ಸುರತ್ಕಲ್‌ ಎನ್‌ಐಟಿಕೆ ಟೋಲ್‌ಗೇಟ್‌ ಮುಚ್ಚಲು ಆಗ್ರಹ

01:00 AM Feb 20, 2019 | Team Udayavani |

ಮಂಗಳೂರು: ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಸುರತ್ಕಲ್‌ ಟೋಲ್‌ಗೇಟನ್ನು ಮುಚ್ಚಬೇಕು, ಸ್ಥಳೀಯ ವಾಹನಗಳಿಂದ ಸುಂಕ ವಸೂಲಿ ತೀರ್ಮಾನ ಕೈ ಬಿಡಬೇಕು, ಕೂಳೂರು ನೂತನ ಸೇತುವೆ ನಿರ್ಮಾಣವನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿ ಫೆ. 28ರ ಬೆಳಗ್ಗೆ 10.30ಕ್ಕೆ ಎನ್‌ಐಟಿಕೆ ಬಳಿಯ ಟೋಲ್‌ಗೇಟ್‌ ಮುಂಭಾಗ ಸುರತ್ಕಲ್‌ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿಯು ಜನಾಗ್ರಹ ಸಭೆ, ಪ್ರತಿಭಟನ ಪ್ರದರ್ಶನ ಹಮ್ಮಿಕೊಂಡಿದೆ.

Advertisement

ನಾಗರಿಕ ಹೋರಾಟ ಸಮಿತಿ ಸಂಚಾಲಕ ಮುನೀರ್‌ ಕಾಟಿಪಳ್ಳ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪರಿಸರದ ಜನತೆಯ ತೀವ್ರ ಪ್ರತಿಭಟನೆಯ ನಡುವೆ ಮೂರು ತಿಂಗಳ ಅನಂತರ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ವಿಲೀನಗೊಳಿಸುವ ಭರವಸೆ ನೀಡಿ ತಾತ್ಕಾಲಿಕ ನೆಲೆಯಲ್ಲಿ 2016ರಲ್ಲಿ ಎನ್‌ಐಟಿಕೆ ಸಮೀಪ ಟೋಲ್‌ ಕೇಂದ್ರ ಆರಂಭಿಸಲಾಯಿತು. ಆದರೆ 9 ಕಿ.ಮೀ. ದೂರದ ಹೆಜಮಾಡಿಯಲ್ಲಿ ಟೋಲ್‌ ಕೇಂದ್ರ ಆರಂಭಗೊಂಡು ತಿಂಗಳುಗಳು ಉರುಳಿದರೂ ನಿಯಮದಂತೆ ಸುರತ್ಕಲ್‌ ಕೇಂದ್ರವನ್ನು ಮುಚ್ಚದೇ ಅಕ್ರಮವಾಗಿ ಟೋಲ್‌ ಸಂಗ್ರಹಿಸಲಾಗುತ್ತಿದೆ. ಈ ಅಕ್ರಮದ ವಿರುದ್ಧ ಸುರತ್ಕಲ್‌ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ, ಕಳೆದ ಎರಡು ವರ್ಷಗಳಿಂದ ಸತತವಾಗಿ ಹೋರಾಟ ನಡೆಸುತ್ತಾ ಬಂದಿದೆ. ನಮ್ಮ ಹೋರಾಟದ ಪರಿಣಾಮ ಹೆದ್ದಾರಿ ಪ್ರಾಧಿಕಾರವು ಎನ್‌ಐಟಿಕೆ ಟೋಲ್‌ ಕೇಂದ್ರವನ್ನು ಹೆಜಮಾಡಿ ಟೋಲ್‌ ಕೇಂದ್ರದೊಂದಿಗೆ ವಿಲೀನಗೊಳಿಸುವ ತೀರ್ಮಾನ ಕೈಗೊಂಡಿತ್ತು ಹಾಗೂ 2018 ಜ. 3ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ರಾಜ್ಯ ಸರಕಾರದಿಂದ ಅನುಮೋದನೆ ಪಡೆದುಕೊಂಡಿತ್ತು. ಇಷ್ಟಾದರೂ ಟೋಲ್‌ ಕೇಂದ್ರವನ್ನು ಸ್ಥಳಾಂತರಿಸದೆ ತಾತ್ಕಾಲಿಕ ನೆಲೆಯಲ್ಲಿ ಟೋಲ್‌ ಸಂಗ್ರಹ ಗುತ್ತಿಗೆಯನ್ನು ನವೀ ಕರಿಸುತ್ತಾ ಬರಲಾಗುತ್ತಿದೆ ಎಂದರು.

ಭರವಸೆ ಮಾತ್ರ!
ಅಕ್ರಮ ಸುಂಕ ಸಂಗ್ರಹ ವಿರೋಧಿಸಿ ಅ. 22ರಿಂದ ಸುರತ್ಕಲ್‌ನಲ್ಲಿ ಅನಿರ್ದಿಷ್ಟಾವಧಿ ಹಗಲು ರಾತ್ರಿ ಧರಣಿ ನಡೆಸಲಾಯಿತು. ಈ ಸಂದರ್ಭ ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ರಾಜ್ಯ ಸರಕಾರದ ಮಟ್ಟದಲ್ಲಿ ಹೆದ್ದಾರಿ ಪ್ರಾಧಿಕಾರದ ಸಭೆ ಕರೆದು ಟೋಲ್‌ಗೇಟ್‌ ಸಮಸ್ಯೆ ಇತ್ಯರ್ಥಗೊಳಿಸುವ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು ಹಾಗೂ ಧರಣಿಯನ್ನು ಹಿಂಪಡೆಯುವಂತೆ ವಿನಂತಿಸಿದ್ದರು. ಅದೇ ಸಂದರ್ಭ ಸಂಸದ ನಳಿನ್‌ಕುಮಾರ್‌ ಕಟೀಲು ಅವರು ವಿಲೀನದ ಬದಲಿಗೆ ಟೋಲ್‌ ಕೇಂದ್ರವನ್ನೇ ರದ್ದುಗೊಳಿಸಲಾಗುವುದು ಎಂದು ಸಾರ್ವಜನಿಕ ಹೇಳಿಕೆ ನೀಡಿದ್ದರು. ಆದರೂ ಈ ಬಗ್ಗೆ ಯಾವುದೇ ಕ್ರಮಗಳು ಆಗಿಲ್ಲ ಎಂದು ಮನೀರ್‌ ಆರೋಪಿಸಿದರು.

ಮಂಗಳೂರು ಮನಪಾ ಸದಸ್ಯರಾದ ಪುರುಷೋತ್ತಮ ಚಿತ್ರಾಪುರ, ದಯಾನಂದ ಶೆಟ್ಟಿ, ಸಮಿತಿಯ ಮೂಸಬ್ಬ ಪಕ್ಷಿಕೆರೆ, ದಿನೇಶ್‌ ಕುಂಪಲ, ಬಿ. ಕೆ. ಇಮಿ¤ಯಾಜ್‌, ರಘು ಎಕ್ಕಾರು, ಮುಸ್ತಫ ಅಂಗರಗುಂಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next