ಸುರತ್ಕಲ್: ಲೋಕಸಭೆ ಚುನಾವಣೆ ಮತ ಎಣಿಕೆ ಮೇ 23ರಂದು ನಡೆಯುವ ಎನ್‌ಐಟಿಕೆ ಪರಿಸದಲ್ಲಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಎನ್‌ಐಟಿಕೆ ಒಳಗೆ ಮತ್ತು ಮುಂಭಾಗ ಸರ್ಪಗಾವಲು ಹಾಕಲು ಸಿದ್ಧತೆ ನಡೆಸಲಾಗಿದೆ. ಹಲವಾರು ಕಾರ್ಮಿಕರು ರಾ.ಹೆ. 66ರಲ್ಲಿ ತಡೆಬೇಲಿ ರಚನೆ ಕಾಯಕದಲ್ಲಿ ನಿರತರಾಗಿದ್ದಾರೆ. ಎನ್‌ಐಟಿಕೆ ಮುಂಭಾಗ ತಡೆಬೇಲಿ ರಚಿಸಲಾಗಿದೆ. ಶೀಟ್ ಅಳವಡಿಕೆ ಕಾರ್ಯ ಭರದಿಂದ ನಡೆಯುತ್ತಿದೆ. ಕಾರ್ಯಕರ್ತರಿಗೆ ಈ ಬಾರಿ ಮತ ಎಣಿಕೆ ಮುಂಭಾಗ ನಿಲ್ಲಲೂ ಅವಕಾಶವಿಲ್ಲ. ದೂರದ ತಡಂಬೈಲ್ ಮತ್ತು ಮುಕ್ಕ ವ್ಯಾಪ್ತಿವರೆಗೆ ಬಿಗಿ ಪೊಲೀಸ್ ಕಾವಲು ಇರಲಿದ್ದು, ಮತ ಎಣಿಕೆಯ ಘೋಷಣೆ ಕೇಳಲು ಮೈಕ್‌ಗಳನ್ನು ಅಳವಡಿಸಲಾಗಿದೆ.
ಎನ್‌ಐಟಿಕೆ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಚುನಾವಣ ಗುರುತಿನ ಚೀಟಿ ಹೊಂದಿರುವವರು ಮಾತ್ರ ಕೊಠಡಿಯೊಳಗೆ ಪ್ರವೇಶಿಸಬೇಕು, ಬೇರೆಯವರಿಗೆ ಅವಕಾಶವಿಲ್ಲ. ವೀಕ್ಷರ ಸಮ್ಮುಖ ಮತ ಎಣಿಕೆ ನಡೆಯಲಿದ್ದು ಟೇಬಲ್ ಅಳವಡಿಕೆ ಕಾರ್ಯ ನಡೆಸಲಾಗಿದೆ.
ಎಣಿಕಾ ನಡೆಸುವ ಅಧಿಕಾರಿಗಳು, ಏಜೆಂಟರು ಮತದಾನದ ರಹಸ್ಯ ಕಾಪಾಡಲು ಮೊಬೈಲ್ ಕೊಂಡೊಯ್ಯುದನ್ನು ನಿಷೇಧಿಸಲಾಗಿದೆ.
ಮೇ 23ರಂದು ಬೆಳಗ್ಗೆ 8ಕ್ಕೆ ಎಣಿಕೆ ಆರಂಭವಾಗಲಿದ್ದು, ಮೊದಲು ಬ್ಯಾಲೆಟ್ ಪೇಪರ್ ಎಣಿಕೆ ಮುಗಿದ ಅನಂತರ ಇವಿಎಂ, ವಿವಿಪ್ಯಾಟ್ ಎಣಿಕೆ ನಡೆಯಲಿದೆ. ಮಧ್ಯಮ ದವರಿಗಾಗಿ ಪ್ರತ್ಯೇಕ ಕೊಠಡಿ ಮತ್ತು ಮಾಹಿತ ಸಂಗ್ರಹಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.