Advertisement

ಸುರತ್ಕಲ್‌ ಮಾರುಕಟ್ಟೆ ನಿರ್ಮಾಣ ಮಹತ್ವದ ಯೋಜನೆ

12:40 PM May 02, 2018 | Team Udayavani |

ಸುರತ್ಕಲ್‌: ರಾಜ್ಯದ 13 ಮಹಾನಗರ ಪಾಲಿಕೆಗಳಿಗೆ ಇದುವರೆಗೂ ಸಾಧ್ಯವಾಗದ ಬೃಹತ್‌ ಯೋಜನೆಯೊಂದನ್ನು ಮಂಗಳೂರು ಉತ್ತರ ವಿಧಾನಸಭಾ ವ್ಯಾಪ್ತಿಯಲ್ಲಿ ಸಾಕಾರಗೊಳಿಸುವ ಮೂಲಕ ಮಹಾನಗರ ಪಾಲಿಕೆಗೆ ಕಿರೀಟ ತೊಡಿಸಲಾಗುತ್ತಿದೆ. ಈ ಯೋಜನೆ ಸಾಕಾರಗೊಳ್ಳುತ್ತಿರುವುದು ಸುರತ್ಕಲ್‌ನಲ್ಲಿ ಎಂದು  ಹಾಲಿ ಶಾಸಕ, ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮೊದಿನ್‌ ಬಾವಾ ಹೇಳಿದರು.

Advertisement

ಸುರತ್ಕಲ್‌ನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 126 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್‌
ಮಾದರಿಯ ಮಾರುಕಟ್ಟೆ ಸಿದ್ಧಗೊಳ್ಳುತ್ತಿದೆ. ಇದುವರೆಗೂ ಯಾವುದೇ ಪಾಲಿಕೆಗೂ ನೀಡದ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ ಎಂದರು.

400ಕ್ಕೂ ಮಿಕ್ಕಿ ಸುಸಜ್ಜಿತ ಅಂಗಡಿಗಳ, ಬ್ಯಾಂಕುಗಳ ಏಕ ಕಿಂಡಿ ವ್ಯವಸ್ಥೆ, ಬಸ್‌ ನಿಲ್ದಾಣ, ಹೈಟೆಕ್‌ ಪಾರ್ಕಿಂಗ್‌ ವ್ಯವಸ್ಥೆ ಎಲ್ಲವೂ ಈ ಬೃಹತ್‌ ಯೋಜನೆಯಲ್ಲಿ ಅಡಕವಾಗಿವೆ. ಈಗಾಗಲೇ 61 ಕೋಟಿ ರೂ. ವೆಚ್ಚದಲ್ಲಿ ಪ್ರಥಮ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ. ಕೇವಲ ಒಂದೂವರೆ ವರ್ಷದಲ್ಲಿ ಈ ಬೃಹತ್‌ ಮಾರುಕಟ್ಟೆ ಎದ್ದು ನಿಲ್ಲಲಿದ್ದು ರಾಜ್ಯದ ಜನರ ಗಮನ ಸೆಳೆಯಲಿದೆ ಎಂದರು.

ಜೋಪಡಿ ಇದ್ದ ಜಾಗದಲ್ಲಿ ಅರಮನೆ !
ಸುರತ್ಕಲ್‌ ಸಂತೆ ಅಂದ್ರೆ ಇಕ್ಕಟ್ಟಾದ , ಮುರಿದ ಮಾಡುಗಳು, ನೇತಾಡುವ ತಗಡು ಶೀಟುಗಳು ಹೀಗೆ
ಕುಗ್ರಾಮವೊಂದನ್ನು ನೆನಪಿಸುವಂತಿತ್ತು. ಆದರೆ ಇದೀಗ ಅದೇ ಜಾಗದಲ್ಲಿ ಹೈಟೆಕ್‌ ಮಾರುಕಟ್ಟೆ ತಲೆ ಎತ್ತುತ್ತಿದೆ. ಸುರತ್ಕಲ್‌ನಲ್ಲಿ ಕಳೆದ ಐದು ವರ್ಷದಲ್ಲಿ ನಡೆಯುತ್ತಿರುವ ಬದಲಾವಣೆ ಸ್ಥಳೀಯರಿಗೆ ಗೋಚರಿಸುತ್ತಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂಬುದನ್ನು ಮನದಟ್ಟು ಮಾಡಿವೆ. ಸುರತ್ಕಲ್‌ ಮಾರುಕಟ್ಟೆಗೆ ಪ್ರಥಮ ಹಂತದ 62 ಕೋಟಿ ರೂ. ಅನುದಾನಕ್ಕೆ ಕ್ಯಾಬಿನೆಟ್‌ನಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತ ತತ್‌ಕ್ಷಣ ಸುರತ್ಕಲ್‌ನಲ್ಲಿ ನಡೆದ ಹರ್ಷಾಚರಣೆ  ಇತಿಹಾಸದ ಪುಟದಲ್ಲಿ ದಾಖಲಾಗಿದೆ ಎಂದರು.

ತಾತ್ಕಾಲಿಕ ಮಾರುಕಟ್ಟೆಯಲ್ಲೂ ಸೌಲಭ್ಯ ಸುರತ್ಕಲ್‌ನಲ್ಲಿ ಹೊಸ ಮಾರುಕಟ್ಟೆಗಾಗಿ ಹಳೆ ಮಾರುಕಟ್ಟೆ ತೆರವು ಅಗತ್ಯವಾಗಿತ್ತು. ವ್ಯಾಪಾರಿಗಳ, ಗ್ರಾಹಕರ ಅನುಕೂಲಕ್ಕಾಗಿ 5 ಕೋಟಿ ರೂ. ವೆಚ್ಚದಲ್ಲಿ ತಾತ್ಕಾಲಿಕ ಮಾರುಕಟ್ಟೆ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಇದೀಗ ವ್ಯಾಪಾರ ಕೇಂದ್ರದಲ್ಲಿ ವ್ಯಾಪಾರಿಗಳು ಸಂತೃಪ್ತಿಯಿಂದ ವ್ಯಾಪಾರ ಮಾಡುತ್ತಿದ್ದರೆ ಗ್ರಾಹಕರಿಗೂ ಶುಚಿತ್ವದ ಜಾಗದಲ್ಲಿ ಸರ್ವ ವ್ಯವಸ್ಥೆಗಳಿ ಸಿಕ್ಕಿವೆ ಎಂದರು.

Advertisement

ಮುಂದಿನ ದಿನಗಳಲ್ಲಿ ಸುರತ್ಕಲ್‌ ಮಂಗಳೂರಿಗೆ ಪರ್ಯಾಯವಾಗಿ ಬೆಳೆಯುವತ್ತಾ ಮುನ್ನಗ್ಗುತ್ತಿದ್ದು ಮುಂದಿನ ಐದು ವರ್ಷಗಳಲ್ಲಿ ಸುರತ್ಕಲ್‌ ಮಹತ್ತರ ಬದಲಾವಣೆಗೆ ಒಗ್ಗಿಕೊಳ್ಳಲಿದೆ. ಅಭಿವೃದ್ಧಿ ಕಾರ್ಯಗಳು ಕಣ್ಣ ಮುಂದಿರುವಾಗ ಮತದಾರರು ಅಭಿವೃದ್ಧಿಯ ಪಕ್ಷಕ್ಕೆ ಮತ ಹಾಕ ಬೇಕೊ ಅಥವಾ ಸದಾ ಜಾತೀಯತೆಯನ್ನೇ ಬಿಂಬಿಸಿ ಒಡಕು ಮೂಡಿಸುವ ಪಕ್ಷವನ್ನು ಬೆಂಬಲಿಸ ಬೇಕೊ ಎಂಬುದನ್ನು ನಿರ್ಧರಿಸಬೇಕು ಎಂದರು.

ಹಂಗಾಮಿ ಅಧ್ಯಕ್ಷ ದೀಪಕ್‌ ಪೂಜಾರಿ, ದೇವಿಪ್ರಸಾದ್‌ ಶೆಟ್ಟಿ, ಪ್ರತಿಭಾ ಕುಳಾç ಶಶಿಧರ್‌ ಹೆಗ್ಡೆ, ಕೆ. ಸದಾಶಿವ ಶೆಟ್ಟಿ, ಬಶೀರ್‌ ಬೈಕಂಪಾಡಿ, ಗಿರೀಶ್‌ ಆಳ್ವ, ಶಕುಂತಳಾ ಕಾಮತ್‌ ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next