Advertisement

Surathkal: ಸುರತ್ಕಲ್‌ ಕೊಂಕಣ ರೈಲು ನಿಲ್ದಾಣಕ್ಕೆ ಬೇಕಿದೆ ಅಭಿವೃದ್ಧಿಯ ಭಾಗ್ಯ

06:28 PM Aug 09, 2023 | Team Udayavani |

ಸುರತ್ಕಲ್‌: ಕೊಂಕಣ ರೈಲ್ವೇ ನಿಗಮದ ಪ್ರಮುಖ ರೈಲು ನಿಲ್ದಾಣಗ ಳಲ್ಲಿ ಸುರತ್ಕಲ್‌ ಕೂಡ ಒಂದು. ಆದರೆ ಇಲ್ಲಿನ ಸಮಗ್ರ ಅಭಿವೃದ್ಧಿಯ ಪ್ರಯತ್ನಕ್ಕೆ ಅನುದಾನದ ಕ್ರೋಡೀಕರಣವೇ ದೊಡ್ಡ ಸಮ ಸ್ಯೆಯಾಗಿದೆ. 14 ವರ್ಷದಲ್ಲಿ ಕೇಂದ್ರದ ಅನುದಾನ ನಿರೀಕ್ಷಿಸಿದಷ್ಟು ಬಂದಿಲ್ಲ. ಮಂಗ ಳೂರು ಜಂಕ್ಷನ್‌ ಅಭಿವೃದ್ಧಿಗೆ ಚಾಲನೆ ನೀಡಿರುವ ವೇಳೆಯೇ ಸುರತ್ಕಲ್‌ ನಿಲ್ದಾಣದ ಅಭಿವೃದ್ಧಿಯ ಕನಸು ಚಿಗುರೊಡೆದಿದೆ.

Advertisement

ಸುರತ್ಕಲ್‌ ನಿಲ್ದಾಣದಲ್ಲಿ ನಿಲ್ಲುವ ರೈಲುಗಳು 500 ಮೀಟರ್‌ಗಿಂತಲೂ ಹೆಚ್ಚು ಉದ್ದವಿದೆ. ಆದರೆ ಫ್ಲಾಟ್‌ಫಾರ್ಮ್ ರೂಫೀಂಗ್‌ ಸುಮಾರು 60 ಮೀಟರ್‌ ಗಳಷ್ಟು ಮಾತ್ರ ಹಾಕಲಾಗಿದ್ದು, ಉಳಿದ ಕಡೆ ಬಸ್‌ ನಿಲ್ದಾಣದಂತೆ ಸಣ್ಣ ಸಣ್ಣ ಶೆಲ್ಟರ್‌ ಹಾಕಲಾಗಿದೆ. ಮಹಿಳೆಯರು ಮತ್ತು ಮಕ್ಕಳನ್ನೊಳಗೊಂಡ ಪ್ರಯಾಣಿಕರು ರೈಲಿನಿಂದ ಇಳಿಯುವಾಗ ಮಳೆಗಾಲದಲ್ಲಿ ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೆ ರಾತ್ರಿ ಪ್ರಯಾಣಿಕರಿಗೆ ಇಲ್ಲಿ ಬಹಳ ಸಂಕಷ್ಟ ಎದುರಾಗುತ್ತಿದೆ.

ಸೊಳ್ಳೆ ಕಾಟದಿಂದ ದೂರಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೆ ಪ್ರಧಾನ ಸ್ಥಳದಲ್ಲೇ ಕಾಯುವಂತಾಗಿದೆ. ಅಲ್ಲದೆ ರೈಲು ಬಂದಾಗ
ಬೇಗನೆ ಬಂದು ಹತ್ತುವುದು ಕಷ್ಟಕರವಾಗಿದೆ. ಮೂಲ ಸೌಲಭ್ಯ ಅಗತ್ಯ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಫ್ಲಾಟ್‌ಫಾರಂ ಉದ್ದಕ್ಕೂ ಮಳೆ, ಬಿಸಿಲಿನ ರಕ್ಷಣೆಗೆ ಮೇಲ್ಛಾವಣಿ, ದೀಪ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ, ಕಲ್ಲು ತೂರಾಟ ಕಿಡಿಗೇಡಿಗಳ ಕಣ್ಗಾವಲಿಗೆ ಸಿಸಿ ಟಿವಿ ಸಹಿತ ಹತ್ತು ಹಲವು ಸೌಲಭ್ಯದ ಅಗತ್ಯವಿದೆ.

ಇಲ್ಲಿನ ನಿಲ್ದಾಣದಲ್ಲಿ ಓಬಿರಾಯನ ಕಾಲದ ಹಾಸುಗಲ್ಲು ಹಾಕಲಾಗಿದೆ. ಮಾರ್ಬಲ್‌ ಹಾಕಿ ಆಧುನೀಕರಣ ಮಾಡಲು ಇಲಾಖೆ ಯೋಜನೆ ರೂಪಿಸಿತ್ತು. ಇದಕ್ಕಾಗಿ ಸ್ಥಳೀಯ ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರ ಪ್ರಯತ್ನ ದಿಂದ 75 ಲಕ್ಷ ರೂ. ಅನುದಾನ ಬಿಡುಗಡೆಯಾಗುವ ಹಂತಕ್ಕೆ ಮುಟ್ಟಿ ತ್ತಾದರೂ ಇದೀಗ ಬದಲಾದ ಸರಕಾರದಲ್ಲಿ ಹೊಸ ಕ್ರಿಯಾ ಯೋಜನೆ ನೀಡಬೇಕಾದ ಅಗತ್ಯ ಎದುರಾಗಿದೆ.

ಮೇಲ್ಛಾವಣಿಯನ್ನು ಈಗಿನ ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಿಸುವ ಅಗತ್ಯವಿದೆ. ಸುರತ್ಕಲ್‌ ರೈಲು ನಿಲ್ದಾಣ ಸಂಪರ್ಕಿಸುವ
ರಸ್ತೆಯನ್ನು ದ್ವಿಪಥ ಇಲ್ಲವೇ ಚತುಷ್ಪಥ ಗೊಳಿಸಿ ಹೈಟೆಕ್‌ ರಸ್ತೆಯನ್ನಾಗಿ ನಿರ್ಮಿಸುವ, ನಿಲ್ದಾಣದ ಮುಂಭಾಗ ಪ್ರಿಪೇಡ್‌ ಆಟೋ ನಿಲ್ದಾಣ, ಖಾಸಗಿ ವಾಹನ ಪಾರ್ಕಿಂಗ್‌ಗೆ ನಿಗದಿತ ಜಾಗ ಗುರುತು, ಸ್ವಚ್ಛತೆಯ ವ್ಯವಸ್ಥೆ ಮುಂತಾದ ಸೌಲಭ್ಯ ಒದಗಿಸಲು ಬೇಕಾದ ಅನುದಾನವನ್ನು ತರಲು ಜನಪ್ರತಿನಿಧಿಗಳು, ಸಂಸದರು ಗಮನ ಹರಿಸಬೇಕಿದೆ. ಸದ್ಯಕ್ಕೆ ರೈಲು ಬೋಗಿ ಬಂದು ನಿಲ್ಲುವ ಒಂದೊಂದು ಸ್ಥಳದಲ್ಲಿ ಸಾಮಾಜಿಕ ಸೇವಾ ಸಂಸ್ಥೆಗಳು ಪ್ರಯಾಣಿಕರ ಅನುಕೂಲಕ್ಕಾಗಿ ಸಣ್ಣ ನಿಲ್ದಾಣವನ್ನು ನಿರ್ಮಿಸಿಕೊಟ್ಟಿದೆ.

Advertisement

ಲಾಭಾಂಶದಿಂದಲೇ ಅಭಿವೃದಿ ಕಾರ್ಯ
ಮಂಗಳೂರು, ಮೂಲ್ಕಿ ನಡುವೆ ಇ ರುವ ಹೆದ್ದಾರಿಗೆ ಅತೀ ಸಮೀಪದಲ್ಲಿರುವ ನಿಲ್ದಾಣವೂ ಇದಾಗಿದೆ. ಟಿಕೆಟ್‌ ಕಾಯ್ದಿರಿಸುವ ವ್ಯವಸ್ಥೆ ಇರುವುದರಿಂದ ಹಾಗೂ ಪಡುಬಿದ್ರಿಯಿಂದ ದೂರದ ಮಂಗಳೂರಿನಿಂದಲೂ ರೈಲು ಪ್ರಯಾಣಕ್ಕೆ ಸುರತ್ಕಲ್‌ ನಿಲ್ದಾಣವೇ ಪ್ರಮುಖವಾಗಿ ಗರುತಿಸಿಕೊಂಡಿದೆ. ನಿತ್ಯ ನೂರಾರು ಮಂದಿ ಸುರತ್ಕಲ್‌ ಮೂಲಕವೇ ಮುಂಬಯಿ, ದಿಲ್ಲಿ ಕಡೆ ಪ್ರಯಾಣ ಬೆಳೆಸುತ್ತಾರೆ. ಎನ್‌ಐಟಿಕೆ, ಎಂಆರ್‌ಪಿಎಲ್‌, ಕೈಗಾರಿಕೆ ಪ್ರದೇಶಕ್ಕೆ ಉದ್ಯೋಗ, ಶಿಕ್ಷಣಕ್ಕಾಗಿ ಬರುವವರಿಗೆ ಸುರತ್ಕಲ್‌ ರೈಲು ನಿಲ್ದಾಣವೇ ಆಧಾರ.

ಈ ರೈಲ್ವೇ ನಿಗಮಕ್ಕೆ ಇತರ ರೈಲ್ವೇ ವಲಯದಂತೆ ಸರಕಾರದ ಅನುದಾನ ಸಿಗದೆ ಇರುವ ಕಾರಣ ತನ್ನ ಲಾಭಾಂಶದಲ್ಲಿಯೇ ಅಭಿವೃದ್ಧಿ ಮಾಡಿಕೊಂಡು ಹೋಗುವ ಸವಾಲನ್ನು ಹೊಂದಿದೆ. ಈಗಾಗಲೇ ವಿದ್ಯುದ್ಧೀಕರಣ ಮಾಡಲಾಗಿದೆ. ಪ್ರಮುಖ ರೈಲುಗಳೂ ಓಡಾಡುತ್ತಿವೆ. ಬೆಂಗಳೂರು ಸಂಪರ್ಕದ ಪಂಚಗಂಗ ನಿತ್ಯ ಜನಜಂಗುಳಿಯಿಂದ ತುಂಬಿರುತ್ತದೆ. ಮತ್ತಷ್ಟು ಉತ್ತಮ ಸೌಲಭ್ಯವನ್ನು ಈ ನಿಲ್ದಾಣಕ್ಕೆ ಒದಗಿಸಿದರೆ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣವಾಗಿ ಮೂಡಿ ಬರುವುದರಲ್ಲಿ ಎರಡು ಮಾತಿಲ್ಲ.

ಅಭಿವೃದ್ಧಿಗೆ ವಿಶೇಷ ಒತ್ತು
ಕೊಂಕಣ ರೈಲ್ವೇ ನಿಗಮದ ವ್ಯಾಪ್ತಿಯಲ್ಲಿರುವ ಸುರತ್ಕಲ್‌ ರೈಲು ನಿಲ್ದಾಣದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದೇವೆ. ಶೆಲ್ಟರ್‌ ನಿರ್ಮಾಣಕ್ಕೆ ವಿವಿಧ ಸೇವಾ ಸಂಸ್ಥೆಗಳು ಸಹಕಾರ ನೀಡುತ್ತಿವೆ. ನಿಲ್ದಾಣದ ಹಾಸುಗಲ್ಲು, ಸಂಪರ್ಕ ರಸ್ತೆ ನಿರ್ಮಾಣದ ಬಗ್ಗೆ ಸ್ಥಳೀಯ ಶಾಸಕರು ಭರವಸೆ ನೀಡಿದ್ದಾರೆ. ಶೀಘ್ರದಲ್ಲೆ ಆಗುವ ವಿಶ್ವಾಸವಿದೆ.
ಸುಧಾಕೃಷ್ಣಮೂರ್ತಿ,
ಪಿಆರ್‌ಒ, ಕೊಂಕಣ ರೈಲ್ವೇ

*ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next