Advertisement

ಸುರತ್ಕಲ್‌- ಕಬಕ ರಾಜ್ಯ ಹೆದ್ದಾರಿ ವಿಸ್ತರಣೆಗೆ ವಿಘ್ನ

04:59 PM Jan 24, 2018 | Team Udayavani |

ಇಡ್ಕಿದು: ಸುರತ್ಕಲ್‌ – ಕಬಕ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ದಿಢೀರನೆ ಸ್ಥಗಿತಗೊಂಡು ವಾಹನ ಸವಾರರು, ಸಾರ್ವಜನಿಕರು, ರಸ್ತೆ ಪಕ್ಕದ ಅಂಗಡಿ ಹಾಗೂ ಮನೆಗಳವರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

Advertisement

ಒಂದೂವರೆ ತಿಂಗಳಿಂದ ಕಾಮಗಾರಿ ಬಿರುಸಿನಿಂದಲೇ ನಡೆಯುತ್ತಿತ್ತು. ಸದ್ಯ 5.5 ಮೀ. ಅಗಲವಿರುವ ರಸ್ತೆಯನ್ನು 7 ಮೀ.ಗೆ ವಿಸ್ತರಿಸುವ ಯೋಜನೆ ಇದಾಗಿದ್ದು, ರಸ್ತೆಯ ಬದಿಗಳಲ್ಲಿ ಅಗೆದು, ಜಲ್ಲಿ ರಾಶಿ ಹಾಕಿದ್ದಾರೆ. ಇನ್ನೂ ಕೆಲವು ಕಡೆ ಜಲ್ಲಿ-ಮಣ್ಣು ಹಾಸಲಾಗಿದೆ. ಕೆಲವು ಕಡೆ ಹೊಂಡವನ್ನು ಹಾಗೆಯೇ ಬಿಡಲಾಗಿದೆ.

ಪಾದಚಾರಿಗಳು, ಸವಾರರಿಗೆ ಸಮಸ್ಯೆ ಉರಿಮಜಲುವಿನಿಂದ ಕಬಕದ ವರೆಗಿನ ರಸ್ತೆಯಲ್ಲಿ ಜಲ್ಲಿ ಮಣ್ಣು ಹಾಸಿದ್ದು, ಡಾಮರು ಹಾಕಿಲ್ಲದ ಕಾರಣ ವಾಹನಗಳು ಸಾಗುವಾಗ ಧೂಳು ಮೋಡದಂತೆ ಮೇಲೇಳುತ್ತಿದೆ. ಸಾರ್ವಜನಿಕರು ಹಾಗೂ ಸ್ಥಳೀಯರು ಕಣ್ಣುರಿ, ಕೆಮ್ಮು ಹಾಗೂ ನೆಗಡಿಯಿಂದ ಬಳಲುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಹಾಗೂ ಪಾದ ಚಾರಿಗಳು ಈ ರಸ್ತೆಯಲ್ಲಿ ಸಾಗುವುದೇ ಸಮಸ್ಯೆಯಾಗಿದೆ. ಕೆಲವು ಕಡೆ ದ್ವಿಚಕ್ರ ವಾಹನಗಳು ಸ್ಕಿಡ್‌ ಆಗುತ್ತಿದ್ದು, ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.

ಸಾರ್ವಜನಿಕರ ಆತಂಕ
ಗುತ್ತಿಗೆದಾರರು ಈ ರಸ್ತೆಯ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಎಲ್ಲ ಯಂತ್ರಗಳನ್ನು ಬೇರೆಡೆಗೆ ಸಾಗಿಸಿದ್ದಾರೆ. ಇದರಿಂದಾಗಿ ಕಾಮಗಾರಿ ಇಷ್ಟಕ್ಕೇ ನಿಲ್ಲುತ್ತದೆಯೇ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಇದರ ಬಗ್ಗೆ ಇಡ್ಕಿದು ಗ್ರಾ.ಪಂ. ಉಪಾಧ್ಯಕ್ಷ ಸುಧೀರ್‌ ಕುಮಾರ್‌ ಶೆಟ್ಟಿ ಪ್ರತಿಕ್ರಿಯಿಸಿ, ಈ ರಸ್ತೆಯ ಕಾಮಗಾರಿಯನ್ನು
ಗುತ್ತಿಗೆದಾರರು ಅರ್ಧದಲ್ಲೇ ನಿಲ್ಲಿಸಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕೆಲವು ಕಡೆ ಜಲ್ಲಿ ಹಾಕಿ ಹಾಗೇ ಬಿಟ್ಟು ಹೋಗಿದ್ದಾರೆ. ಅದನ್ನು ರಸ್ತೆಗೆ ಹಾಕಿ, ಮಣ್ಣು ಹರಡಿಲ್ಲ. ಜಲ್ಲಿ ಅಭಾವ ಇದ್ದರೆ ಕೆಲಸ ಬಾಕಿ ಇಟ್ಟು ಹೋಗುವುದು ಸರಿಯಲ್ಲ. ತಕ್ಷಣ ಸಂಬಂಧಪಟ್ಟವರ ಗಮನ ಸೆಳೆದು, ಕಾಮಗಾರಿ ಮುಂದುವರಿಸಲು ಒತ್ತಾಯಿಸುತ್ತೇನೆ ಎಂದರು

Advertisement

ಜಲ್ಲಿ ಕಲ್ಲು ಕೊರತೆ
ಎಂಜಿನಿಯರ್‌ ಪ್ರೀತಂ ಅವರನ್ನು ಸಂಪರ್ಕಿಸಿದರೆ, ಈ ರಸ್ತೆಯ ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಸಮಸ್ಯೆಯಾಗಿರುವುದು ನಿಜ. ಗುತ್ತಿಗೆದಾರರನ್ನು ಈ ಕುರಿತು ಪ್ರಶ್ನಿಸಿದ್ದು, ಜಲ್ಲಿ ಕಲ್ಲಿನ ಸಮಸ್ಯೆಯಿಂದ ಕಾಮಗಾರಿ ನಿಂತಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ, ರಸ್ತೆ ಬದಿಯ ಹೊಂಡಗಳನ್ನಾದರೂ ತತ್‌ಕ್ಷಣ ಮುಚ್ಚುವಂತೆ ಸೂಚಿಸಿದ್ದೇನೆ. ವಿಳಂಬ ಮಾಡಿದರೆ, ಇಲಾಖೆ ವತಿಯಿಂದಲೇ ಮಾಡಲಾಗುವುದು ಎಂದರು.

ಉಮ್ಮರ್‌ ಜಿ. ಕಬಕ

Advertisement

Udayavani is now on Telegram. Click here to join our channel and stay updated with the latest news.

Next