Advertisement
ಹೆದ್ದಾರಿ ಬದಿಯಲ್ಲಿ ಅತಿಕ್ರಮಣ ಮಾಡಿ ಕಟ್ಟಿಕೊಂಡಿರುವ ಕಟ್ಟಡ, ಗೂಡಂಗಡಿ, ಬಸ್ ನಿಲ್ದಾಣ, ಜಾಹೀರಾತು ಫಲಕ ಸಹಿತ ಎಲ್ಲ ರೀತಿಯ ನಿರ್ಮಾಣಗಳ ತೆರವು ಕಾರ್ಯಾಚರಣೆಯು ಶನಿವಾರ ಸುರತ್ಕಲ್‌ನಿಂದ ಆರಂಭವಾಗಬೇಕಿತ್ತು.ಕಾರ್ಯಾಚರಣೆಗೆ ಪೊಲೀಸ್ ರಕ್ಷಣೆ ಅಗತ್ಯವಾಗಿದ್ದು, ಎನ್‌ಎಚ್‌ಎಐನ ಏಜೆನ್ಸಿಯವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕಾರ್ಯಾಚರಣೆಗೆ ರಕ್ಷಣೆ ಕೇಳಿದಾಗ ತಮ್ಮಲ್ಲಿ ಇಂದು ಸಿಬಂದಿಯಿಲ್ಲ. ಬೇರೆ ಬೇರೆ ಕೆಲಸಗಳಲ್ಲಿ ನಿರತರಾಗಿದ್ದಾರೆ ಎಂಬ ಉತ್ತರ ನೀಡಿದ್ದಾರೆ. ಹೀಗಾಗಿ ಕಾರ್ಯಾಚರಣೆ ಡಿ. 25ರಿಂದ ಆರಂಭವಾಗಲಿದೆ ಎಂದು ಎನ್‌ಎಚ್‌ಎಐನ ಅಧಿಕಾರಿಗಳು ತಿಳಿಸಿದ್ದಾರೆ.
ಹೆದ್ದಾರಿ ಬದಿಯ ಅನಧಿಕೃತ ನಿರ್ಮಾಣಗಳ ತೆರವಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಒಪ್ಪಿಗೆ ನೀಡಿದ್ದಾರೆ. ಕಾರ್ಯಾಚರಣೆ ವೇಳೆ ರಕ್ಷಣೆ ನೀಡುವಂತೆ ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಪತ್ರ ಬರೆದಿದ್ದಾರೆ. ಈ ಬೃಹತ್ ಅನಧಿಕೃತ ನಿರ್ಮಾಣ ತೆರವು ಕಾರ್ಯಾ ಚರಣೆಗೆ ಸೂಕ್ತ ರಕ್ಷಣೆ ನೀಡುವುದಾಗಿ ಎಸ್ಪಿಯವರು ಎನ್‌ಎಚ್‌ಎಐಗೆ ಭರವಸೆ ನೀಡಿದ್ದಾರೆ. ಹೆದ್ದಾರಿ ಬದಿಯ ಅಕ್ರಮಗಳನ್ನು ತೆರವುಗೊಳಿಸದಿರುವುದಕ್ಕೆ ಹಲವು ಸಭೆಗಳಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವುದಕ್ಕೆ ತಗಲುವ ವೆಚ್ಚವನ್ನು ಜಿಲ್ಲಾಡಳಿತದಿಂದ ಎನ್‌ಎಚ್‌ಎಐಗೆ ಪಾವತಿಯಾಗಿದ್ದರೂ, ಇಲ್ಲಿವರೆಗೂ ತೆರವುಗೊಂಡಿಲ್ಲ ಎಂಬ ಆರೋಪ ಕೇಳಿಬಂದಿತ್ತು.
Related Articles
Advertisement
ಒಟ್ಟು 40 ಮೀ. ಹೆದ್ದಾರಿ ಸ್ಥಳಸುರತ್ಕಲ್-ಬಿ.ಸಿ. ರೋಡ್ ಮಧ್ಯೆ ಹೆದ್ದಾರಿ ಹಾದು ಹೋಗುವ ಪ್ರದೇಶದಲ್ಲಿ ಹೆದ್ದಾರಿ ಮಧ್ಯದಿಂದ ಎರಡೂ ಬದಿಗಳಲ್ಲಿ ತಲಾ 20 ಮೀ. ಸ್ಥಳ ಎನ್‌ಎಚ್‌ಎಐನ ವ್ಯಾಪ್ತಿಗೆ ಬರಲಿದೆ. ಆದರೆ ಕೆಲವೊಂದು ಪ್ರದೇಶದಲ್ಲಿ ಸ್ಥಳಾವಕಾಶದ ಕೊರತೆಯಿಂದ ಕಡಿಮೆ ಇದೆ. ಎನ್‌ಎಚ್ ಎಐಯು ಹೆದ್ದಾರಿ ಜಾಗಕ್ಕೆ ಬೌಂಡರಿಯನ್ನು ಅಳವಡಿಸಿದ್ದು, ಅದರ ಒಳಗಿರುವ ಅಕ್ರಮಗಳನ್ನು ತೆರವುಗೊಳಿಸಲಿದೆ. ಏನೆಲ್ಲ ಅಕ್ರಮ ತೆರವು?
ಹೆದ್ದಾರಿ ಹಾದು ಹೋಗುವ ಪ್ರದೇಶಗಳಾದ ಸುರತ್ಕಲ್, ಬೈಕಂಪಾಡಿ, ಫರಂಗಿಪೇಟೆ, ಬಿ.ಸಿ.ರೋಡ್ ಭಾಗದಲ್ಲಿ ಹೆಚ್ಚಿನ ಅಕ್ರಮ ನಿರ್ಮಾಣಗಳಿವೆ. ಅನಧಿಕೃತ ಗೂಡಂಗಡಿಗಳು, ಬಸ್ ನಿಲ್ದಾಣಗಳು, ಮೀನು ಮಾರುಕಟ್ಟೆ, ಆಟೋ ನಿಲ್ದಾಣಗಳು, ಕಟ್ಟಡಗಳು, ಜಾಹೀರಾತು ಹೋರ್ಡಿಂಗ್‌ಗಳು ತೆರವುಗೊಳ್ಳಲಿವೆ. ಖಾಸಗಿ ಸಂಸ್ಥೆಗಳ ಜಾಹೀರಾತು ಇರುವ ಅನಧಿಕೃತ ಪೊಲೀಸ್ ಚೌಕಿಗಳೂ ತೆರವುಗೊಳ್ಳಲಿವೆ. ಹೆದ್ದಾರಿ ಇಲಾಖೆಯು ಭೂಸ್ವಾಧೀನ ಪ್ರಕ್ರಿಯೆಯ ಸಂದರ್ಭದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಿದ್ದರೂ ಕೆಲವು ಮಂದಿ ಇನ್ನೂ ಕಟ್ಟಡಗಳನ್ನು ತೆರವುಗೊಳಿಸಿಲ್ಲ. ಅಲ್ಲಿ ತಮ್ಮ ವ್ಯಾಪಾರ-ವ್ಯವಹಾರವನ್ನೂ ಮುಂದುವರಿಸುತ್ತಿದ್ದಾರೆ. ಇಂತಹ ಕಟ್ಟಡಗಳೂ ನೆಲಸಮಗೊಳ್ಳಲಿವೆ. ಜಿಲ್ಲಾಧಿಕಾರಿಯ ದಿಟ್ಟ ನಡೆ
ಸುರತ್ಕಲ್-ಬಿ.ಸಿ. ರೋಡ್ ಹೆದ್ದಾರಿಯಲ್ಲಿ 10 ವರ್ಷದಿಂದ ಇರುವ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲು ಯಾರೂ ದಿಟ್ಟ ನಿರ್ಧಾರ ಮಾಡಿರಲಿಲ್ಲ. ಈ ಹಿಂದಿನ ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಅವರು ದಿಟ್ಟ ಹೆಜ್ಜೆ ಇಟ್ಟಿದ್ದರು. ಅದು ಕಾರ್ಯರೂಪಕ್ಕೆ ಬರುವುದಕ್ಕೆ ಮೊದಲೇ ಅವರ ವರ್ಗಾವಣೆಯೂ ಆಗಿತ್ತು. ಹಾಲಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಜಿಲ್ಲೆಗೆ ಬಂದ ಎರಡು ತಿಂಗಳಲ್ಲೇ ಒತ್ತುವರಿ ತೆರವಿಗೆ ಮುಂದಾಗಿದ್ದಾರೆ. ಸೆಂಥಿಲ್ ಅವರು ರಾಯಚೂರು ಜಿಲ್ಲಾಧಿಕಾರಿಯಾಗಿದ್ದಾಗಲೂ ಯಾರದೇ ಒತ್ತಡಕ್ಕೆ ಮಣಿಯದೆ ಸಾಕಷ್ಟು ರಸ್ತೆ ಅತಿಕ್ರಮಣಗಳನ್ನು ತೆರವುಗೊಳಿಸಿ ಖಡಕ್ ಜಿಲ್ಲಾಧಿಕಾರಿ ಎನಿಸಿಕೊಂಡಿದ್ದರು. ದಕ್ಷಿಣ ಕನ್ನಡದಲ್ಲೂ ಇಂತಹ ಕಾರ್ಯಾಚರಣೆಗೆ ಕೈಹಾಕಿದ್ದಾರೆ. ಈ ಬಗ್ಗೆ ‘ಉದಯವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ‘ಹೆದ್ದಾರಿ ಪ್ರಾಧಿಕಾರದ ಕೋರಿಕೆಯಂತೆ ಸುರತ್ಕಲ್-ಬಿ.ಸಿ. ರೋಡ್ ಹೆದ್ದಾರಿಯ ಅಕ್ರಮ ನಿರ್ಮಾಣಗಳ ತೆರವು ಕಾರ್ಯಾಚರಣೆಗೆ ಜಿಲ್ಲಾಡಳಿತದಿಂದ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದರು. ಎನ್‌ಎಚ್‌ಎಐ ಹೊಣೆಯಲ್ಲ
ಎನ್‌ಎನ್‌ಎಐನ ಏಜೆನ್ಸಿ ಮೂಲಕ ಅಕ್ರಮಗಳ ತೆರವು ಕಾರ್ಯಾಚರಣೆ ನಡೆಯಲಿದ್ದು, 15 ದಿನಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ತೆರವು ಕಾರ್ಯ ಮೆಷಿನ್ ಮೂಲಕ ನಡೆಯಲಿದ್ದು, ಈ ಸಂದರ್ಭದಲ್ಲಿ ಅಗತ್ಯ ಸೊತ್ತುಗಳಿಗೆ ಹಾನಿಯಾದರೆ ಹೆದ್ದಾರಿ ಇಲಾಖೆ ಹೊಣೆಯಲ್ಲ. ಹೆದ್ದಾರಿಯ ಬೌಂಡರಿ ಒಳಗಿರುವ ಅಕ್ರಮಗಳನ್ನು ತೆರವುಗೊಳಿಸಲಿದ್ದೇವೆ. ಕಾರ್ಯಾಚರಣೆಗೆ ಜಿಲ್ಲಾಧಿಕಾರಿಗಳು ಪರವಾನಿಗೆ ನೀಡಿದ್ದು, ಪೊಲೀಸರು ರಕ್ಷಣೆ ನೀಡುವ ಭರವಸೆ
ನೀಡಿದ್ದಾರೆ.
– ಸ್ಯಾಮ್ಸನ್ ವಿಜಯಕುಮಾರ್,
ಯೋಜನಾ ನಿರ್ದೇಶಕರು, ಎನ್‌ಎಚ್‌ಎಐ, ಮಂಗಳೂರು