Advertisement

ಸೌಕರ್ಯದ ಕೊರತೆ; ಸಮರ್ಪಕ ಸೇವೆ ಒದಗಿಸಲು ವಿಫಲ

04:43 AM Feb 27, 2019 | |

ಸುರತ್ಕಲ್‌: ಇಲ್ಲಿಯ ಅಟಲ್‌ ಜನಸ್ನೇಹಿ ಕೇಂದ್ರದ ಅವ್ಯವಸ್ಥೆಯನ್ನು ಹೋಗಲಾಡಿಸಿ ಸಮರ್ಪಕ ಸೇವೆ ಒದಗಿಸುವಂತೆ ಸಾರ್ವಜನಿಕರು ಪದೇ ಪದೇ ಆಗ್ರಹಿಸಿದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮಾತ್ರ ಅಸಹಾಯಕರಾಗಿ ಕುಳಿತಿದ್ದಾರೆ! ಅಟಲ್‌ ಜನಸ್ನೇಹಿ ಕೇಂದ್ರದಲ್ಲಿ ಸಿಬಂದಿ ಕೊರತೆ, ಅಂತರ್ಜಾಲ ಪದೇ ಪದೇ ಕೈ ಕೊಡುವುದರಿಂದ ಜನರ ಸಮಯ ಪೋಲಾಗುತ್ತಿದೆ.

Advertisement

ನಾಗರಿಕರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಹಾಗೂ ಸುಲಭವಾಗಿ ಆದಾಯ, ಜಾತಿ ದೃಢೀಕರಣ ಪ್ರಮಾಣ ಪತ್ರ ಲಭಿಸಬೇಕು ಎಂಬ ನಿಟ್ಟಿನಲ್ಲಿ ಸರಕಾರ ತೆರೆದಿರುವ ಅಟಲ್‌ ಜನಸ್ನೇಹಿ ಕೇಂದ್ರ ಮೂಲ ಸೌಕರ್ಯದ ಕೊರತೆಯಿಂದ ಸಮರ್ಪಕ ಸೇವೆ ಒದಗಿಸಲು ವಿಫಲವಾಗುತ್ತಿದೆ.

ವಿದ್ಯಾರ್ಥಿಗಳು ಯಾವುದೇ ಕಾಲೇಜಿಗೆ ಉನ್ನತ ವಿದ್ಯಾಧ್ಯಾಸಕ್ಕೆ ಅರ್ಜಿ ಹಾಕಬೇಕಾದರೆ ಆದಾಯ, ಜಾತಿ ಪ್ರಮಾಣ ಪತ್ರ ಅಗತ್ಯವಾಗಿದೆ. ಜನ ಸ್ನೇಹಿ ಕೇಂದ್ರದಲ್ಲಿ ಮಾತ್ರ ಈ ಪ್ರಮಾಣ ಪತ್ರ ನೀಡಲಾಗುವುದರಿಂದ ಇದು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ.

ವಿಲೇವಾರಿ ವಿಳಂಬ
ಒಂದೇ ಕೌಂಟರ್‌ನಲ್ಲಿ ಅರ್ಜಿ ಪಡೆಯಲಾಗುತ್ತಿದ್ದು, ದಿನಕ್ಕೆ ಸಾವಿರಾರು ಜನ ಅರ್ಜಿ ಸಲ್ಲಿಸುತ್ತಿದ್ದಾರೆ. ಇದನ್ನು ಸಕಾಲದಲ್ಲಿ ವಿಲೇವಾರಿ ಮಾಡಲು ಆಗುತ್ತಿಲ್ಲ. ಇದಲ್ಲದೇ ಪಡಿತರ ಚೀಟಿ ಪಡೆಯಲು ಆದಾಯ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ 
ನೆಮ್ಮದಿ ಕೇಂದ್ರದಲ್ಲಿ ಮೂಲ ಸೌಕರ್ಯ ಕೊರತೆಯಿಂದ ಸಮಸ್ಯೆ ಉದ್ಭವಿಸಿ ಕೆಲವು ತಿಂಗಳಾದರೂ ಅ ಧಿಕಾರಿಗಳು ಈ ಬಗ್ಗೆ ಗಮನ ಹರಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಆದ್ದರಿಂದ ಈ ಕೂಡಲೇ ಅತಿ ವೇಗವಾಗಿ ಆದಾಯ, ಜಾತಿ ಪ್ರಮಾಣ ಪತ್ರ, ಆರ್‌ ಟಿಸಿ ನೀಡಲು ನೆಮ್ಮದಿ ಕೇಂದ್ರದಲ್ಲಿ ಕನಿಷ್ಠ 3 ಕೌಂಟರ್‌ ತೆರೆಯಬೇಕು. ಇನ್ನು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ದಾಖಲಾತಿಗೆ ಅಗತ್ಯವಾಗಿರುವುದರಿಂದ ಅವರಿಗಾಗಿಯೇ ಬೇರೊಂದು ಕೌಂಟರ್‌ ರನ್ನು ಪ್ರಾರಂಭಿಸಿ ಸಮರ್ಪಕ ಸೇವೆಗೆ ಅನುವು ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯ.

Advertisement

ಬಾಪೂಜಿ ಸೇವಾ ಕೇಂದ್ರಗಳೂ ಹೆಸರಿಗೆ!
ಇತ್ತ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬಾಪೂಜಿ ಸೇವಾ ಕೇಂದ್ರ ತೆರೆದು ಸ್ಥಳೀಯವಾಗಿ ಸವಲತ್ತು ವಿತರಿಸಲು ಸರಕಾರ ಯೋಜನೆ ರೂಪಿಸಿದೆ. ಆದರೆ ಇಲ್ಲೂ ಸಿಬಂದಿ, ಕಂಪ್ಯೂಟರ್‌, ನೆಟ್‌ವರ್ಕ್‌ ಸಮಸ್ಯೆ.ಹೀಗಾಗಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಗ್ರಾಮೀಣ ಜನತೆ ಸೌಲಭ್ಯ ಪಡೆಯಲು ಆಗುತ್ತಿಲ್ಲ. ಪಟ್ಟಣದ ಅಟಲ್‌ ಜನಸ್ನೇಹಿ ಕೇಂದ್ರದಲ್ಲಿ ಸಿಬಂದಿ ಕೊರತೆ, ಇಂಟರ್‌ನೆಟ್‌ ನೆಟ್‌ವರ್ಕ್‌ ಸಮಸ್ಯೆಯಿಂದ ಓರ್ವ ಆರ್‌ಟಿಸಿ ಇಲ್ಲವೆ, ಇತರ ದಾಖಲೆ ಪತ್ರ ಪಡೆಯಲು ಕನಿಷ್ಠ ಒಂದು ತಾಸಾದರೂ ಕಾಯಲೇ ಬೇಕು. ಹೀಗಾಗಿ ಅಧಿಕಾರ ವಿಕೇಂದ್ರೀಕರಣದ ಸೌಲಭ್ಯ ಮಾತ್ರ ಜನತೆಗೆ ಸಿಗದೆ ಮಂಗಳೂರನ್ನೇ ನೆಚ್ಚಿಕೊಳ್ಳಬೇಕಾದ ಸ್ಥಿತಿಯಿದೆ.

ಕ್ರಮಕ್ಕೆ ಸೂಚನೆ
ಸುರತ್ಕಲ್‌ ಅಟಲ್‌ ಜನಸ್ನೇಹಿ ಕೇಂದ್ರದಲ್ಲಿ ಕಂಪ್ಯೂಟರ್‌ ಕೊರತೆ, ಸಿಬಂದಿ ಕೊರತೆ ನೆಟ್‌ವರ್ಕ್‌ ಸಮಸ್ಯೆ ಗಮನಕ್ಕೆ ಬಂದಿದೆ. ತತ್‌ ಕ್ಷಣ ಹೆಚ್ಚುವರಿ ಕಂಪ್ಯೂಟರ್‌ ಅಳವಡಿಸಿ ಸಿಬಂದಿ ನೇಮಿಸಿ ಎಂದು ತಹಶೀಲ್ದಾರ್‌ ಅವರಿಗೆ ಸೂಚಿಸಲಾಗಿದೆ.
 - ಡಾ| ಭರತ್‌ ಶೆಟ್ಟಿ ವೈ
     ಶಾಸಕರು

 ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next