ಸುರತ್ಕಲ್: ಎರಡು ದಿನಗಳಿಂದ ಮುಂಗಾರು ಚುರುಕು ಆಗುತ್ತಿ ರುವಂತೆಯೇ ಸುರತ್ಕಲ್ ಸುತ್ತ ಕೆಲವೊಂದು ಸಮಸ್ಯೆಗಳು ಉಂಟಾಗಿವೆ. ಮುಕ್ಕ ಸಸಿಹಿತ್ಲು ಮುಖ್ಯ ರಸ್ತೆಯಲ್ಲಿ ಮರ ಉರುಳಿ ಬಿದ್ದು ರಸ್ತೆ ಸಂಚಾರಕ್ಕೆ ತೊಡಕು ಉಂಟಾಯಿತು.
ಸ್ಥಳೀಯ ರಿಕ್ಷಾ ಚಾಲಕ, ಸಾಮಾಜಿಕ ಕಾರ್ಯಕರ್ತ ನಾರಾಯಣ ಕರ್ಕೇರ ನೇತೃತ್ವದಲ್ಲಿ ರಿಕ್ಷಾ ಚಾಲಕರಾದ ಜಗದೀಶ್, ಹನೀಫ್ ಸಹಾಯದಿಂದ ರಸ್ತೆಗೆ ಬಿದ್ದ ಮರವನ್ನು ಕಡಿದು ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮುಕ್ಕ ಜಿಲ್ಲಾ ಬಾಯಿ ರಸ್ತೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಬುಧವಾರ ಭಾರೀ ಮಳೆಗೆ ರಸ್ತೆಯಲ್ಲಿ ನೀರು ನಿಂತು ಪಾದಚಾರಿ ಸಂಚಾರಕ್ಕೆ ಸಮಸ್ಯೆಯಾಯಿತು. ಬೈಕಂಪಾಡಿಯಲ್ಲಿ ಮಳೆಗೆ ಹೆದ್ದಾರಿಯಲ್ಲೇ ಬೃಹತ್ ಹೊಂಡ ಉಂಟಾಗಿದ್ದು, ವಾಹನಗಳು ವೇಗದಲ್ಲಿ ಬಂದು ಹೊಂಡಕ್ಕೆ ಬೀಳುತ್ತಿವೆ. ಪಣಂಬೂರು, ಕೂಳೂರು ವರೆಗೆ ಅಲ್ಲಲ್ಲಿ ರಸ್ತೆಯಲ್ಲಿ ಹೊಂಡಗಳು ಬಿದ್ದಿವೆ.
ನೀರಿನ ಸಮಸ್ಯೆ
ಕಣ್ಣೂರು ಬಳಿ ಮುಖ್ಯ ಪೈಪ್‌ಲೈನ್‌ನಲ್ಲಿ ಕಾಣಿಸಿಕೊಂಡ ಬಿರುಕನ್ನು ದುರಸ್ತಿಗೊಳಿಸಲಾಗಿದೆ. ನಾಲ್ಕು ದಿನಗಳಿಂದ ನೀರಿನ ಸಮಸ್ಯೆ ಎದುರಾಗಿತ್ತು. ಮಳೆಯಿಂದ ದುರಸ್ತಿಗೆ ಅನಾನುಕೂಲವಾದರೂ ಪಾಲಿಕೆ ಅಧಿಕಾರಿಗಳು ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ಶುಕ್ರವಾರದಿಂದ ಯಥಾಸ್ಥಿತಿ ನೀರಿನ ಪೂರೈಕೆ ನಡೆಯಲಿದೆ ಎಂದು ಮಾಜಿ ಮೇಯರ್ ಶಶಿಧರ ಹೆಗ್ಡೆ ತಿಳಿಸಿದ್ದಾರೆ. ಇನ್ನೆರಡು ದಿನ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಸ್ಥಳೀಯ ಟಾಸ್ಕ್ ಫೋರ್ಸ್‌ಗಳನ್ನು ಜಾಗೃತ ಸ್ಥಿತಿಯಲ್ಲಿಡಲಾಗಿದೆ.