ಸುರತ್ಕಲ್: ಎಐ ತಂತ್ರಜ್ಞಾನ ಭವಿಷ್ಯದಲ್ಲಿ ಬಹುದೊಡ್ಡ ಸವಾಲಾಗಲಿದ್ದು, ಬಹಳಷ್ಟು ಉನ್ನತ ಹುದ್ದೆಯ ಉದ್ಯೋಗಕ್ಕೆ ಹೊಡೆತ ಬೀಳಲಿದೆ. ಜತೆಗೆ ಸತ್ಯವನ್ನು ಮತ್ತಷ್ಟು ಪರಾಂಬರಿಸಿ ನೋಡಬೇಕಾದ ಅಗತ್ಯ ಉಂಟಾಗಲಿದೆ ಎಂದು ಬೆಂಗಳೂರಿನ ಐಐಎಸ್‌ಸಿ ನಿರ್ದೇಶಕ ಪ್ರೊ| ಗೋವಿಂದನ್ ರಂಗರಾಜನ್ ಹೇಳಿದರು.
ಸುರತ್ಕಲ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ) ಇದರ 22ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆ ಉಂಟು ಮಾಡಬಹು ದಾದ ಗಂಭೀರ ಪರಿಣಾಮಗಳನ್ನು ಎದುರಿಸಲು ಸಂಸ್ಥೆಗಳು ಸಜ್ಜಾಗಬೇಕಿವೆ. ಕೋಡಿಂಗ್ ವ್ಯವಸ್ಥೆಯನ್ನು ಎಐ ಸ್ಪಷ್ಟವಾಗಿ ಮಾಡುತ್ತದೆ. ಚಿಪ್ ನಿರ್ಮಾಣಗಳಲ್ಲಿ ಶೇ. 100ರಷ್ಟು ಸ್ಪಷತೆಯನ್ನು ನೀಡುತ್ತದೆ. ಇದು ಉದ್ಯೋಗ ಸೃಷ್ಟಿಯ ಮೇಲೆ ನೇರ ಪರಿಣಾಮ ಬೀರಬಹುದು ಎಂದರು.
ಸಿಕಂದರಾಬಾದ್‌ನ ಕಿಮ್ಸ್ ಫೌಂಡೇಷನ್ ಆ್ಯಂಡ್ ರಿಸರ್ಚ್ ಸೆಂಟರ್ ಅಧ್ಯಕ್ಷ ಡಾ| ಭುಜಂಗ ರಾವ್ ಮಾತನಾಡಿ, ಎಂಜಿನಿ ಯರ್‌ಗಳು ಸಮಾಜದ ಬೆನ್ನೆಲುಬು ಇದ್ದಂತೆ. ವಿಜ್ಞಾನ ಕ್ಷೇತ್ರದಲ್ಲಿ ಎಂಜಿನಿಯರ್‌ಗಳದ್ದೇ ಪ್ರಮುಖ ಪಾತ್ರ. ಪದವಿ ಪಡೆದು ಹೊರ ಹೋಗುವ ವಿದ್ಯಾರ್ಥಿ ಸಮುದಾಯ ಸಂಶೋಧನೆ, ಆವಿಷ್ಕಾರ ಜತೆಗೆ ಸಾಮಾಜಿಕವಾಗಿಯೂ ತಮ್ಮ ಕೊಡುಗೆ ನೀಡುವಂತಾಗಬೇಕು ಎಂದರು.
ಸಂಸ್ಥೆಯ ನಿರ್ದೇಶಕ ಪ್ರೊ| ಬಿ.ರವಿ ಪ್ರಸ್ತಾವಿಸಿ, ಎನ್‌ಐಟಿಕೆ ದೇಶದ ಉನ್ನತ 20 ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಆಯ್ಕೆಯಾಗುವ ವಿದ್ಯಾರ್ಥಿನಿಯರ ಸಂಖ್ಯೆಯೂ ಹೆಚ್ಚುತ್ತಿದೆ. ಮೂಲಸೌಕರ್ಯದ ಅಂಗವಾಗಿ ಮೂರು ಹೊಸ ವಿದ್ಯಾರ್ಥಿ ನಿಲಯವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಸಂಸ್ಥೆಯು ಗುಣಮಟ್ಟದ ಶಿಕ್ಷಣದ ಜತೆಜತೆಗೆ ಹೊಸ ಹೊಸ ಅನ್ವೇಷಣೆಗೂ ಪ್ರೋತ್ಸಾಹ ನೀಡುತ್ತಿದೆ ಎಂದರು.
ವಿಶೇಷ ಸಾಧನೆಗೈದ 40 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನಿಸಲಾಯಿತು. ಕಾರ್ಯಕ್ರಮದಲ್ಲಿ 1002 ಬಿ.ಟೆಕ್., 758 ಎಂ.ಟೆಕ್., 179 ಇತರ, 139 ಪಿಎಚ್‌ಡಿ ಪದವಿಗಳನ್ನು ಪ್ರದಾನಿಸ ಲಾಯಿತು. ಸಂಸ್ಥೆಯ ಡೆಪ್ಯುಟಿ ಡೈರೆಕ್ಟರ್ ಡಾ| ಸುಭಾಶ್ ಸಿ.ಯಾರಗಲ್ ಅತಿಥಿ ಗಳನ್ನು ಪರಿಚಯಿಸಿದರು. ವಿವಿಧ ವಿಭಾಗದ ಮುಖ್ಯಸ್ಥರು ವೇದಿಕೆಯಲ್ಲಿದ್ದರು.