Advertisement

Surathkal: ಬೀಚ್‌ಗಳಲ್ಲಿ ಎಚ್ಚರಿಕೆ ಫಲಕಗಳಿಲ್ಲದೆ ಅಪಾಯ

06:05 PM Nov 11, 2024 | Team Udayavani |

ಸುರತ್ಕಲ್‌: ಸುರತ್ಕಲ್‌, ಸಸಹಿತ್ಲು, ಪಣಂಬೂರು ಸಹಿತ ಪ್ರವಾಸಿ ಬೀಚ್‌ ಎಂದು ಗುರುತಿಸಲ್ಪಟ್ಟ ಬೀಚ್‌ಗಳಲ್ಲಿ ಪ್ರವಾಸಿಗರು, ಅನ್ಯ ಊರುಗಳಿಂದ ಬರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಮುದ್ರದ ಏರಿಳಿತ ತಿಳಿಯದೆ ಈಜಾಡುವುದು ಅಮೂಲ್ಯ ಪ್ರಾಣವನ್ನೇ ಕಳೆದುಕೊಳ್ಳ ಬಹುದು ಎಂಬ ಕನಿಷ್ಠ ಮಾಹಿತಿಯಿಲ್ಲದೆ ಇಂದು ಅನೇಕ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

Advertisement

ಬೀಚ್‌ಗೆ ಬಂದ ಅನೇಕರ ಪ್ರಾಣವನ್ನು ಸ್ಥಳೀಯರು, ಬೀಚ್‌ ರಕ್ಷಕರು ರಕ್ಷಿಸಿದ್ದರೆ ಕೆಲವೇ ತಿಂಗಳಲ್ಲಿ ಪ್ರಾಣ ಕಳೆದುಕೊಂಡವರ ಅಂಕಿ ಸಂಖ್ಯೆ ತೆಗೆದರೆ ಆತಂಕವನ್ನುಂಟು ಮಾಡುತ್ತದೆ.

ಯಾವುದೇ ಬೀಚ್‌ ದಡದ ಮೇಲಿನಿಂದ ಸಾಮಾನ್ಯ ಮತ್ತು ಒಂದೇ ರೀತಿಯಾಗಿ ಕಂಡರೂ ಸಮುದ್ರದಾಳದಲ್ಲಿ ನೀರಿನ ರಭಸ, ಸುಳಿಯಲ್ಲಿ ಬಹಳಷ್ಟು ವ್ಯತ್ಯಾಸಗಳಿರುತ್ತದೆ. ಅನ್ಯರಾಜ್ಯಗಳ ಯುವಕರು ಕೆರೆ, ಹಳ್ಳಗಳಲ್ಲಿ ಈಜಿದ್ದನ್ನೇ ಅನುಭವ ಪಡೆದು ಸಮುದ್ರದಲ್ಲಿ ಇಳಿದು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇತ್ತೀಚೆಗೆ ಸುರತ್ಕಲ್‌ ರೆಡ್‌ ರಾಕ್‌ ಬೀಚ್‌ನಲ್ಲಿ ಯುವಕನೊಬ್ಬ ಪ್ರಾಣ ಕಳೆದುಕೊಂಡರೆ ಸಸಿಹಿತ್ಲು ಸಹಿತ ಸ್ಥಳೀಯ ಬೀಚ್‌ಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

ಭೀಕರತೆ ತೆರೆದಿಡಿ
ಬೀಚ್‌ಗಳಲ್ಲಿ ಎಚ್ಚರಿಕೆ ನಾಮಫಲಕ ಅದೆಷ್ಟು ಮುಖ್ಯ ಎಂಬುದು ಇದೀಗ ಅರಿವಾಗತೊಡಗಿದೆ. ಹಲವೆಡೆ ಸ್ಪಷ್ಟ ಮಾಹಿತಿ ನೀಡುವ ಫಲಕಗಳು ಕಂಡು ಬರುತ್ತಿಲ್ಲ. ಬೀಚ್‌ಗೆ ಬರುವ ಪ್ರವಾಸಿಗರಿಗೆ ಕೇವಲ ಎಚ್ಚರಿಕೆ ಫಲಕ ಹಾಕುವ ಬದಲು ತೀರ ಪ್ರದೇಶದಲ್ಲಿ ಸಮುದ್ರದ ಆಳ, ಸುಳಿ ಇರುವ ಪ್ರದೇಶದ ಮಾಹಿತಿ, ಅದರ ಭೀಕರತೆ ಎಲ್ಲವನ್ನೂ ಸ್ಪಷ್ಟವಾಗಿ ನಮೂದಿಸಬೇಕಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ ನಗರದ ಸಮುದ್ರ ತೀರ ಪ್ರದೇಶಗಳಾದ ಇಡ್ಯ, ಸುರತ್ಕಲ್‌ ಲೈಟ್‌ ಹೌಸ್‌, ಎನ್‌.ಐ.ಟಿ.ಕೆ., ಕೆ.ಆರ್‌.ಇ.ಸಿ. ಬೀಚ್‌, ಮಲಮಾರ್‌ ಬೀಚ್‌, ಮುಕ್ಕ ಇಂತಹ ಪ್ರದೇಶಗಳಲ್ಲಿ ಎಚ್ಚರಿಕೆ ಮತ್ತು ಮಾಹಿತಿ ಫಲಕಗಳ ಅಗತ್ಯವಿದೆ. ಪ್ರತೀ ಶನಿವಾರ, ರವಿವಾರ ಇಲ್ಲಿ ಬರುವ ಜನರ ಸಂಖ್ಯೆ ಕನಿಷ್ಠ ಐನೂರು ದಾಟುತ್ತದೆ.

ವಿದ್ಯಾರ್ಥಿಗಳಿಗೆ ಮಾಹಿತಿ ಅಗತ್ಯ
ಬೀಚ್‌ ಪ್ರದೇಶಗಳಿಗೆ ಹೊರ ರಾಜ್ಯದ ಹೊರ ಜಿಲ್ಲೆಗಳಿಂದ ಬಹುಪಾಲು ವಿದ್ಯಾರ್ಥಿಗಳೇ ಬರುತ್ತಿರುತ್ತಾರೆ. ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಸ್ಥಳೀಯರು, ಗೃಹ ರಕ್ಷಕರು ಎಚ್ಚರಿಸಿದರೂ ಅವರ ಮಾತುಗಳು ಪರಿಣಾಮ ಬೀರುತ್ತಿಲ್ಲ.ಹೀಗಾಗಿ ಸಿಗರೇಟ್‌ ಪ್ಯಾಕಿನಲ್ಲಿ ಅಪಾಯದ ಚಿತ್ರ ಮುದ್ರಿಸಿದಂತೆ ಚಿತ್ರ ಸಹಿತ ಸಮುದ್ರ ಎಷ್ಟು ಅಪಾಯಕಾರಿ, ಎಷ್ಟು ಅಳವಿದೆ, ಇಲ್ಲಿ ಅನೇಕರು ಮೃತಪಟ್ಟಿದ್ದು, ಪ್ರವಾಸಿಗರು ವಹಿಸ ಬೇಕಾದ ಎಚ್ಚರಿಕೆ ಕ್ರಮಗಳನ್ನು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಮೂರು ನಾಲ್ಕು ಕಡೆ ‘ಎಚ್ಚರಿಕೆ’ಯ ನಾಮಫಲಕ’ ಅಳವಡಿಸುವ ಮೂಲಕ, ಜಾಗೃತಿ ಮೂಡಿಸಲು ಪರಿಣಾಮಕಾರಿ ಕ್ರಮ ಜರಗಿಸಬೇಕಿದೆ. ಜೀವಗಳನ್ನು ರಕ್ಷಿಸುವ ಸಲುವಾಗಿ ಪ್ರವಾಸೋದ್ಯಮ ಇಲಾಖೆ ಈ ನಿಟ್ಟಿನಲ್ಲಿ ಬೀಚ್‌ ಬದಿಗಳಲ್ಲಿ ಗೋಡೆ ಚಿತ್ರ, ನಾಮಫಲಕ ಮುದ್ರಿಸಲು ಮುಂದಾಗಬೇಕಿದೆ. ಇದಕ್ಕೆ ಸ್ಥಳೀಯ ಸಂಘ – ಸಂಸ್ಥೆಗಳ ಸಹಕಾರವೂ ಅಗತ್ಯವಿದೆ.

Advertisement

ನಾಮಫಲಕ ಅಳವಡಿಸಲು ಮನವಿ
ಬೀಚ್‌ಗೆ ಬರುವ ವಿದ್ಯಾರ್ಥಿಗಳು, ಅನ್ಯ ಪ್ರವಾಸಿಗರಿಗೆ ಬೀಚ್‌ ಬಗ್ಗೆ ಮಾಹಿತಿ ಇರದೆ ನೀರಿಗಿಳಿದು ಅಪಾಯ ತಂದುಕೊಳ್ಳುತ್ತಾರೆ. ಇದಕ್ಕಾಗಿ ಜನ ಸೇರುವ ಬೀಚ್‌ಗಳಲ್ಲಿ ಆಳ, ಒಳಸುಳಿ, ಅಪಾಯ ಇಲ್ಲದ ಸಂದರ್ಭ ಸೇರಿದಂತೆ ಸಚಿತ್ರ ವರದಿಯ ನಾಮಫಲಕ ಅಳವಡಿಸಬೇಕು. ಈ ಬಗ್ಗೆ ನಾನೂ ಪ್ರವಾಸೋದ್ಯಮ ಇಲಾಖೆಗೆ ಮನವಿ ಮಾಡಿದ್ದೇನೆ.
-ಪುಷ್ಪರಾಜ್‌ ಕುಳಾಯಿ, ಸಮಾಜಸೇವಕರು

ಬೀಚ್‌ ನಿರ್ವಾಹಕರ ನಿಯೋಜನೆ
ಎಲ್ಲೆಲ್ಲಿ ಅಗತ್ಯವಿದೆ ಅಲ್ಲಿ ನಾಮಫಲಕ ಅಳವಡಿಕೆಗೆ ಕ್ರಮ ಜರಗಿಸಲಾಗುವುದು. ಈಗಾಗಲೇ ಕೆಲವಡೆ ಬೀಚ್‌ ನಿರ್ವಾಹಕರನ್ನು ನಿಯೋಜಿಸಲಾಗಿದೆ.
-ಮಾಣಿಕ್ಯ, ಉಪನಿರ್ದೇಶಕರು ಪ್ರವಾಸೋದ್ಯಮ ಇಲಾಖೆ

-ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next