Advertisement

ಸುರತ್ಕಲ್:ಭರದಿಂದ ಸಾಗುತ್ತಿದೆ ಕಾಲುವೆಗಳ ಹೂಳೆತ್ತುವಿಕೆ ಕಾಮಗಾರಿ

10:44 AM May 01, 2019 | Naveen |

ಸುರತ್ಕಲ್: ಸುರತ್ಕಲ್ ಮಹಾನಗರ ಪಾಲಿಕೆ ವಿಭಾಗೀಯ ವ್ಯಾಪ್ತಿಯಲ್ಲಿ ಕಳೆದ ಮೇ 29ರಂದು ಒಂದೇ ಮಳೆಗೆ ಮುಳುಗಡೆಯಾಗಿರುವ ದೃಶ್ಯ ಈಗಲೂ ಕಣ್ಣ ಮುಂದೆ ಇರುವುದರಿಂದ ಈಗ ಪಾಲಿಕೆಗೆ ಮನವಿಗಳ ಮಹಾಪೂರವೇ ಬರುತ್ತಿದೆ.

Advertisement

ವಿವಿಧೆಡೆ ಚರಂಡಿ ಹೂಳೆತ್ತುವಿಕೆಗೆ ಬೇಡಿಕೆಗಳು ಬರುತ್ತಲೇ ಇವೆ. ನಿಯಮಿತವಾಗಿ ಇರುವ ಜೆಸಿಬಿಗಳನ್ನು ಬಳಸಿಕೊಂಡು ಪಾಲಿಕೆ ಮುಖ್ಯ ಕಾಲುವೆಗಳ ಹೂಳೆತ್ತುವ ಕೆಲಸ ಭರದಿಂದ ನಡೆಯುತ್ತಿದೆ.

ಆದರೆ ಕೆಲವಡೆ ಇನ್ನೂ ಚರಂಡಿಗಳ ಕಾಮಗಾರಿಗಳು ನಡೆದಿಲ್ಲ. ಕೊಟ್ಟಾರ, ಫೋರ್ತ್‌ ಮೈಲ್ನ ಬೃಹತ್‌ ರಾಜಕಾಲುವೆಯ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ. ಇನ್ನು ಬೈಕಂಪಾಡಿಯ ರಾಜಕಾಲುವೆಯನ್ನು ಹೂಳೆತ್ತಲಾಗಿದೆ. ಫೋರ್ತ್‌ ಮೈಲ್ ಪ್ರದೇಶದಲ್ಲಿ ಒತ್ತುವರಿಯಾಗಿದ್ದ ರಾಜ ಕಾಲುವೆಯನ್ನು ವಶಕ್ಕೆ ಪಡೆದು ಹೂಳೆತ್ತಲಾಗಿದೆ. ಆದರೆ ಕೆಲವು ವಾರ್ಡ್‌ಗಳಲ್ಲಿ ಕಾಮಗಾರಿ ಇನ್ನೂ ಆರಂಭಿಸಲಾಗಿಲ್ಲ. ತಡೆಗೋಡೆ ರಚನೆಯ ಕಾಮಗಾರಿ ಅನುದಾನವಿದ್ದಷ್ಟೇ ನಡೆದಿದೆ.

ಈ ಬಾರಿ ಹೂಳೆತ್ತುವಿಕೆ ರಾಜಕಾಲುವೆಗಳನ್ನು ಗುರಿಯಾಗಿಸಿ ನಡೆಸಲಾಗುತ್ತಿದೆ. ಕಳೆದ ವರ್ಷ ಮೇ 29ರಂದು ಭಾರೀ ನೆರೆ ಆವರಿಸಲು ರಾಜಕಾಲುವೆಗಳ ಒತ್ತುವರಿ, ಹೂಳೆತ್ತದಿರುವುದು ಮೇಲ್ನೋಟಕ್ಕೆ ಕಂಡು ಬಂದ ಕಾರಣ ಈ ಬಾರಿ ಇದಕ್ಕೆ ಆದ್ಯತೆ ನೀಡಲಾಗಿದೆ. ಈಗ ಪಾಲಿಕೆಯಲ್ಲಿ ಆಡಳಿತ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯುತ್ತಿದ್ದು, ಕಳೆದ ಬಾರಿಯ ಭೀಕರ ಅನುಭವವನ್ನು ಜಿಲ್ಲಾಧಿಕಾರಿಗೆ ವಿವರಿಸಿ ಪತ್ರ ಬರೆಯಲು ಸ್ಥಳೀಯರು ನಿರ್ಧರಿಸಿದ್ದಾರೆ.

ಬಹುತೇಕ ಕಾಮಗಾರಿ ಮುಕ್ತಾಯ
ಈಗಾಗಲೇ ಮುಕ್ಕಾಲು ಭಾಗ ರಾಜಕಾಲುವೆ ಕಾಮಗಾರಿ ಮುಗಿದಿದೆ. ಮುಂದಿನ ಅನುದಾನದಲ್ಲಿ ತಡೆಗೋಡೆ ಪೂರ್ತಿಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.

Advertisement

ಹೂಳೆತ್ತುವ ಪ್ರಕ್ರಿಯೆ ಎಲ್ಲೆಡೆ ನಡೆಸಲು ಪಾಲಿಕೆ ಈಗಾಗಲೇ ಕ್ರಮ ಕೈಗೊಳ್ಳ ಬೇಕೆಂದು ಮಾಜಿ ಕಾರ್ಪೊರೇಟರ್‌ ಗುಣಶೇಖರ ಶೆಟ್ಟಿ ಹೇಳಿಕೆ. ಇನ್ನು ಸುರತ್ಕಲ್, ರೀಜೆಂಟ್ ಪಾರ್ಕ್‌ ಬಳಿ ಮತ್ತೂಂದು ರಾಜಕಾಲುವೆ ಕಾಮಗಾರಿ ಆಗುತ್ತಿದ್ದು ಇಲ್ಲಿಯೂ ಬಹುತೇಕ ಕಾಮಗಾರಿ ಮುಕ್ತಾಯಗೊಂಡಿದೆ. ಎರಡು ಕಡೆ ಸಣ್ಣ ಸಮಸ್ಯೆಗಳಿದ್ದು ಪಾಲಿಕೆ ನಿವಾರಿಸಬೇಕಾಗಿದೆ. ಸಣ್ಣ ತೋಡುಗಳನ್ನು ರಾಜಕಾಲುವೆಗೆ ಸೇರಿಸುವ ಪ್ರಕ್ರಿಯೆ ನಡೆಯಬೇಕಾಗಿದೆ ಎಂದು ಬೈಲಾರೆ ಹಿತರಕ್ಷಣಾ ಸಮಿತಿಯ ವಿಶ್ವೇಶ್ವರ ಭಟ್ ಬದವಿದೆ ಒತ್ತಾಯಿಸಿದ್ದಾರೆ.

ತುರ್ತು ಕಾಮಗಾರಿ ಸಿದ್ಧತೆಗೆ ಸೂಚನೆ
ಸುರತ್ಕಲ್ ಪ್ರದೇಶದ 2 ರಾಜಕಾಲುವೆಗಳ ಹೂಳೆತ್ತುವಿಕೆ ಭರದಿಂದ ಸಾಗಿದೆ. ಮಳೆಗಾಲದಲ್ಲೂ ಗುತ್ತಿಗೆದಾರರು ನಿಗಾವಹಿಸಿ ತುರ್ತು ಸಂದರ್ಭ ಕಾಮಗಾರಿ ನಡೆಸಲು ಸಿದ್ಧವಾಗಿರಬೇಕು ಎಂದು ಸೂಚಿಸಲಾಗಿದೆ.
 ಕೃಷ್ಣಮೂರ್ತಿ ರೆಡ್ಡಿ
ಎಂಜಿನಿಯರ್‌ ಪಾಲಿಕೆ

ನೆರೆ ಭೀತಿ
ಸುರತ್ಕಲ್ ಚೊಕ್ಕಬೆಟ್ಟುವಿನಲ್ಲಿ ಕಳೆದ ಬಾರಿ ದಿಢೀರ್‌ ನೆರೆ ಬಂದ ಬಳಿಕ ಸುಮಾರು 4 ಕೋಟಿ ರೂ. ಅನುದಾನದಲ್ಲಿ 2 ಕೋಟಿ ರೂ. ವೆಚ್ಚದಲ್ಲ್ಲಿ ಒಳಚರಂಡಿ ಕಾಮಗಾರಿ ಹೂಳೆತ್ತುವಿಕೆ ಮತ್ತು ಕಾಂಕ್ರೀಟ್ ತಡೆಗೋಡೆ ಮಾಡಲಾಗಿದೆ. ರೈಲ್ವೇ ಮಾರ್ಗದ ಬಳಿ ನೂರು ಮೀಟರ್‌ ಕಾಮಗಾರಿ ಉಳಿದಿದ್ದು, ಈಗ ಸ್ಥಳೀಯರಲ್ಲಿ ಮತ್ತೆ ನೆರೆ ಭೀತಿ ಉಂಟಾಗಿದೆ.ರೈಲ್ವೆ ಬಳಿಯ ಸಣ್ಣ ತೋಡು ಹಾಗೂ ಉಳಿದ ಭಾಗದಲ್ಲಿ ಹೂಳೆತ್ತಿ ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕು ಎಂಬುದು ಪಾಲಿಕೆಗೆ ಸ್ಥಳೀಯ ನಿವಾಸಿ ಹಿರಿಯರಾದ ಸಿರಿಲ್ ರಸ್ಕಿನಾ ಹಾಗೂ ನಿವಾಸಿಗಳ ಒತ್ತಾಯ.

Advertisement

Udayavani is now on Telegram. Click here to join our channel and stay updated with the latest news.

Next