ಸುರತ್ಕಲ್: ಮೋಜಿಗಾಗಿ ಸಿನಿಮೀಯ ಮಾದರಿಯಲ್ಲಿ ಸಮುದ್ರ ಕಿನಾರೆಯಲ್ಲಿ ಕಾರು ಚಲಾಯಿಸಲು ಹೋಗಿ ಬೆಂಗಳೂರಿನ ಯುವಕರ ತಂಡ ಫಜೀತಿಗೆ ಸಿಲುಕಿಕೊಂಡ ಘಟನೆ ಸುರತ್ಕಲ್ ಗುಡ್ಡೆಕೊಪ್ಲ ಸಮುದ್ರ ಕಿನಾರೆಯಲ್ಲಿ ನಡೆದಿದೆ.
ಸುರತ್ಕಲ್ ಗುಡ್ಡೆಕೊಪ್ಲ ಸಮುದ್ರ ಕಿನಾರೆಯಲ್ಲಿ ಕಾರು ಚಲಾಯಿಸಿಕೊಂಡು ಕೆಟ್ಟು ನಿಂತ ಡ್ರಜ್ಜರ್ ಬಳಿ ಹೋಗುವ ಯೋಜನೆ ಬೆಂಗಳೂರಿನ ಯುವಕರ ತಂಡದಾಗಿತ್ತು. ಆದರೆ ಅತ್ತ ತೆರಳುತ್ತಿದ್ದಂತೆ ಕಾರು ಸಮುದ್ರದ ಮರಳಿನಲ್ಲಿ ಹೂತು ಹೋಗಿದೆ.
ಸಮುದ್ರ ಉಬ್ಬರ ಆರಂಭವಾಗಿ ಕಾರಿಗೆ ತೆರೆ ಅಪ್ಪಳಿಸುತ್ತಿದ್ದಂತೆ ಕಾರು ಕೊಚ್ಚಿಕೊಂಡು ಹೋಗುವ ಅಪಾಯ ಎದುರಾಯಿತು. ಈ ವೇಳೆ ಯುವಕರ ತಂಡಕ್ಕೆ ಭೀತಿ ಶುರುವಾಗಿ ಕಾರನ್ನು ಮೇಲೆತ್ತಲು ಕ್ರೇನ್ ತರಿಸುವ ಪ್ರಯತ್ನ ನಡೆಸಿದರು.
ಆದರೆ ಕ್ರೇನ್ ಸಮುದ್ರ ಕಿನಾರೆಗೆ ಬಂದರೆ ಅದೂ ಮರಳಲ್ಲಿ ಸಿಲುಕುವ ಸಾಧ್ಯತೆಯಿದ್ದರಿಂದ ಆ ಯೋಜನೆ ಕೂಡ ಸಫಲವಾಗಲಿಲ್ಲ. ಕೊನೆಗೆ ಸ್ಥಳೀಯರು ರಕ್ಷಣೆಗೆ ಮುಂದಾಗಿ ಕಾರನ್ನು ಮೇಲೆತ್ತಿ ದಡಕ್ಕೆ ತರುವಲ್ಲಿ ಯಶಸ್ವಿಯಾದರು.
ಮೀನುಗಾರ ಮುಂದಾಳು ಶ್ರೀಕಾಂತ್ ಸಾಲ್ಯಾನ್ ಗುಡ್ಡೆ ಕೊಪ್ಲ, ಕುಮಾರ್ ಸಾಲ್ಯಾನ್ ಗುಡ್ಡೆಕೊಪ್ಲ ಮೊದಲಾದವರು ಸಹಕರಿಸಿ ಯುವಕರಿಗೆ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.