Advertisement

ಸೂರತ್‌ನಲ್ಲಿ ಕೋಚಿಂಗ್‌ ಸೆಂಟರ್‌ಗೆ ಬೆಂಕಿ, 20 ಸಾವು

09:24 AM May 26, 2019 | mahesh |

ಸೂರತ್‌: ಗುಜರಾತ್‌ನ ಸೂರತ್‌ನಲ್ಲಿ ಶುಕ್ರವಾರ ತಕ್ಷಶಿಲಾ ಆರ್ಕೇಡ್‌ನ‌ ಮೂರು ಮಹಡಿ ಕಟ್ಟಡದಲ್ಲಿನ ಅಗ್ನಿ ಅನಾಹುತಕ್ಕೆ 20 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಈ ಕಟ್ಟಡದಲ್ಲಿ ತರಬೇತಿ ಕೇಂದ್ರವಿದ್ದು, ಇಲ್ಲಿನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳ ಜೀವ ಉಳಿಸಿಕೊಳ್ಳಲು ಬೇರೆ ಯಾವುದೇ ದಾರಿ ಕಾಣದೇ ಇದ್ದಾಗ ಕಟ್ಟಡದಿಂದಲೇ ಹಾರಿದ್ದಾರೆ. ಈ ರೀತಿ ಹಾರಿದ ಆರು ವಿದ್ಯಾರ್ಥಿಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. 19 ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ಕಾರ್ಯಾಚರಣೆ ಆರಂಭಿಸಿದೆ. ಕ್ರೇನ್‌ಗಳನ್ನೂ ಬಳಸಿಕೊಂಡು ಜನರನ್ನು ಕಟ್ಟಡದಿಂದ ಇಳಿಸಲಾಗಿದೆ.

Advertisement

ತಡರಾತ್ರಿಯವರೆಗೂ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಘಟನೆಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ, ಗುಜರಾತ್‌ ಸಿಎಂ ವಿಜಯ್‌ ರೂಪಾನಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಗ್ನಿ ಅವಘಡದಲ್ಲಿ ಸಿಲುಕಿದ ಜನರನ್ನು ರಕ್ಷಿಸಲು ನಾಗರಿಕರೂ ಧಾವಿಸಿದ್ದು, ಬಿಜೆಪಿ ಕಾರ್ಯಕರ್ತರೂ ನೆರವು ನೀಡಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸೂಚಿಸಿದ್ದಾರೆ.

ಈ ಕೋಚಿಂಗ್‌ ಸೆಂಟರ್‌ ಅನ್ನು ಸೂರತ್‌ ನಗರಸಭೆಯೇ ನಡೆಸುತ್ತಿದ್ದು ಕಟ್ಟಡದ ನಿರ್ವಹಣೆಯ ಬಗ್ಗೆ ಅಪಸ್ವರ ಕೇಳಿಬಂದಿದೆ. ಘಟನೆಯ ಸಮಗ್ರ ತನಿಖೆಗೆ ಗುಜರಾತ್‌ ಸಿಎಂ ವಿಜಯ್‌ ರೂಪಾಣಿ ಆದೇಶಿಸಿದ್ದಾರೆ. ಅಲ್ಲದೆ ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರವನ್ನೂ ನೀಡುವುದಾಗಿ ರೂಪಾಣಿ ಘೋಷಿಸಿದ್ದಾರೆ. ಘಟನೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎಲ್ಲ ಟ್ಯೂಷನ್‌ ಕೇಂದ್ರ ಸ್ಥಗಿತ: ಸೂರತ್‌ ಘಟನೆಯಿಂದ ಎಚ್ಚೆತ್ತ ಸರ್ಕಾರ ಅಹಮದಾಬಾದ್‌ನಲ್ಲಿರುವ ಎಲ್ಲ ಟ್ಯೂಷನ್‌ ಕೇಂದ್ರಗಳನ್ನು ಸ್ಥಗಿತಗೊಳಿಸಿದೆ. ಅಗ್ನಿ ಶಾಮಕ ದಳ ಭೇಟಿ ನೀಡಿ ಎಲ್ಲ ಟ್ಯೂಷನ್‌ ಕೇಂದ್ರಗಳು ಅಗ್ನಿ ಅವಘಡಕ್ಕೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿವೆ ಎಂಬುದಾಗಿ ಪ್ರಮಾಣಪತ್ರ ನೀಡಬೇಕು. ನಂತರವೇ ಟ್ಯೂಷನ್‌ ಕೇಂದ್ರಗಳ ಆರಂಭಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಸರ್ಕಾರ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next