Advertisement

ಸಾಮಾಜಿಕ ಅಂತರ ಕಾಯ್ದುಕೊಳ್ಳಿ

03:50 PM Jun 21, 2020 | Naveen |

ಸುರಪುರ: ಕೋವಿಡ್‌-19 ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜೂ. 25ರಿಂದ ಆರಂಭವಾಗಲಿದೆ. ಆಯಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರದೊಂದಿಗೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ್‌ ನಿಂಗಣ್ಣ ಬಿರಾದಾರ ಹೇಳಿದರು.

Advertisement

ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರಕಾರದ ನಿರ್ದೇಶನದಂತೆ ಆಯಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಕೇಂದ್ರಗಳ ಮುಖ್ಯದ್ವಾರದಲ್ಲಿ ಕಡ್ಡಾಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯ ಆರೋಗ್ಯ ತಪಾಸಣೆ ಮಾಡಿ ಒಳ ಬಿಡಬೇಕು. ಒಳ ಹೋಗುವ ಮೊದಲು ವಿದ್ಯಾರ್ಥಿಗಳಿಗೆ ಸ್ಯಾನಿಟೈಸ್‌ ಮಾಡಿ ಮಾಸ್ಕ್ ವಿತರಿಸಬೇಕು. ಪ್ರತಿ ಡೆಸ್ಕ್ ಗೆ ಇಬ್ಬರಂತೆ ಪ್ರತಿ ಕೊಠಡಿಯಲ್ಲಿ 16ರಿಂದ 18 ವಿದ್ಯಾರ್ಥಿಗಳು ಕೂಡಲು ಆಸನದ ವ್ಯವಸ್ಥೆ ಮಾಡಬೇಕು. ಕಂಟೇನ್ಮೆಂಟ್‌ ವಲಯದಿಂದ ಬಂದವರಿಗೆ ವಿಶೇಷ ಕೊಠಡಿ ಕಾಯ್ದರಿಸಬೇಕು. ಪ್ರತಿ ಕೇಂದ್ರಗಳಲ್ಲಿ ಎರಡು ಹೆಚ್ಚುವರಿ ಕೊಠಡಿ ನಿರ್ಮಿಸಿಕೊಳ್ಳಬೇಕು. ಸಾಮಾಜಿಕ ಅಂತರದಲ್ಲಿ ಲೋಪದೋಷ ಆಗದಂತೆ ಪರೀಕ್ಷೆ ನಡೆಯುವಂತೆ ನೋಡಿಕೊಳ್ಳಬೇಕು. ಪರೀಕ್ಷೆ ನಂತರ ವಿದ್ಯಾರ್ಥಿಗಳನ್ನು ಸಾಮಾಜಿಕ ಅಂತರದಲ್ಲಿ ಹೊರ ಬಿಡಬೇಕು ಎಂದು ಹೇಳಿದರು.

ಒಟ್ಟು 5837 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಹುಣಸಗಿ-2, ವಜ್ಜಲ್‌-1, ಕೆಂಭಾವಿ 4 ಹೆಚ್ಚುವರಿ 2, ಸುರಪುರ-4 ಹೆಚ್ಚುವರಿ 1, ಕಕೇರಾ-1 ದೇವಾಪುರ-1, ಕೊಡೇಕಲ್‌-2, ನಾರಾಯಣಪುರ-2 ಸೇರಿ 15 ಮುಖ್ಯ ಕೇಂದ್ರ 6 ಉಪ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 40 ಬಸ್‌ ಒದಗಿಸುವಂತೆ ಸಾರಿಗೆ ಸಂಸ್ಥೆಗೆ ಕೋರಲಾಗಿದೆ ಎಂದು ಬಿಇಒ ನಾಗರತ್ನ ಓಲೇಕಾರ ಮಾಹಿತಿ ನೀಡಿದರು.

ತಾಪಂ ಇಒ ಅಮರೇಶ, ಪಿಎಸ್‌ಐ ಚೇತನ ಪಾಟೀಲ, ಅಧಿಕಾರಿಗಳಾದ ಮೌನೇಶ ಕಂಬಾರ, ದಾನಪ್ಪ ಕತ್ನಳ್ಳಿ, ಸಂತೋಷ, ಲಾಲಸಾಬ್‌ ಪೀರಾಪುರ, ಶಂಕರರೆಡ್ಡಿ, ಜೆ.ಕೆ. ಪವ್ಹಾರ, ಸಂಗೀತಾ ಮಾಡ್ಯಾಳ, ವೆಂಕಟೇಶ ಟಿ.ಸಿ. ಸತ್ಯನಾರಾಯಣ, ಬಿಆರ್‌ಪಿ ಹಣಮಂತ ಪೂಜಾರಿ, ಬಸವರಾಜ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next