Advertisement

ಮತದಾರ ಪಟ್ಟಿ ಪರಿಷ್ಕರಣೆ ಪಾರದರ್ಶಕವಾಗಿರಲಿ

11:33 AM Sep 01, 2019 | Naveen |

ಸುರಪುರ: ಮತಗತಟ್ಟೆ ಅಧಿಕಾರಿಗಳು ತಮಗೆ ವಹಿಸಿರುವ ಮತ ಪಟ್ಟಿ ಪರಿಷ್ಕರಣೆ ಮತ್ತು ದೃಢೀಕರಣ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಯಾವುದೇ ಲೋಪದೋಷ ಆಗದಂತೆ ಜಾಗೃತಿ ವಹಿಸಿ ಪಾರದರ್ಶಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ತಾಕೀತು ಮಾಡಿದರು.

Advertisement

ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ತಾಲೂಕು ಆಡಳಿತದಿಂದ ಶನಿವಾರ ಮತಗಟ್ಟೆ ಅಧಿಕಾರಿಗಳಿಗೆ ಏರ್ಪಡಿಸಿದ್ದ ಮತದಾರ ಪಟ್ಟಿ ಪರಿಷ್ಕರಣೆ ಮತ್ತು ದೃಢೀಕರಣ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮತದರ ಪಟ್ಟಿ ಲೋಪದೋಷ ಕುರಿತು ಈ ಹಿಂದೆ ಸಾಕಷ್ಟು ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ. ಪ್ರಸಕ್ತ ಬಾರಿ ಹೀಗಾಗದಂತೆ ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಮತಗಟ್ಟೆ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

ಪ್ರಸಕ್ತ ಸಾಲಿನಲ್ಲಿ ಮತದಾರ ಪಟ್ಟಿ ಪರಿಷ್ಕರಣೆಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ದೇಶದಾದ್ಯಂತ ಒಂದೇ ಮಾದರಿಯ ಮತಗಟ್ಟೆ ಜಾರಿಗೊಳಿಸಲು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಬೇಕು. ಮತದಾರರ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಬೇಕು. ಆಧಾರ ಸಂಖ್ಯೆಯೊಂದಿಗೆ ನಿಗದಿಪಡಿಸಿದ ದಾಖಲೆಗಳನ್ನು ಪಡೆದುಕೊಳ್ಳಬೇಕು ಎಂದರು. ಮೃತಪಟ್ಟಿದ್ದರೆ, ಸ್ಥಳಾಂತರಗೊಂಡಿದ್ದರೆ, ಮದುವೆಯಾಗಿ ಹೋಗಿದ್ದರೆ ಮತ್ತು ಎರಡೆರಡು ಕಡೆ ಮತಪಟ್ಟಿಗಳಲ್ಲಿ ಹೆಸರು ಹೊಂದಿದ್ದರೆ, ಅಂತವರ ಹೆಸರು ತಗೆದು ಹಾಕಬೇಕು. ನೂತನವಾಗಿ ಸೇರ್ಪಡೆ ಮಾಡಿಕೊಳ್ಳಲು ದಾಖಲೆಯೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ ಕೊಂಡು ಮಾಹಿತಿ ನೀಡಿದವರ ರುಜು ಪಡೆದುಕೊಳ್ಳಬೇಕು. ಇದನು ಅತ್ಯಂತ ಜಾಗೃತಿಯಿಂದ ನಿರ್ವಹಿಸಬೇಕು ಎಂದರು. ಮತದಾರ ಪಟ್ಟಿ ತಂತ್ರಾಂಶದ ಬಗ್ಗೆ ಮಾಹಿತಿ ನೀಡಿ ಪ್ರತಿ ಮತಗಟ್ಟೆ ಅಧಿಕಾರಿಗಳಿಗೆ ಪ್ರತೇಕ ಲಾಗಿನ್‌ ನೀಡಲಾಗುವುದು. ಮೊಬೈಲ್ ಆ್ಯಪ್‌ ಡೌನ್‌ ಲೋಡ್‌ ಮಾಡಿಕೊಂಡು ಸಂಗ್ರಹಿಸಿರುವ ಮತದಾರರ ಮಾಹಿತಿಯನ್ನು ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಸಾರ್ವಜನಿಕರಿಗಾಗಿ ನಾಡ ಕಚೇರಿ, ಗ್ರಾಪಂ ಕಚೇರಿ, ಗ್ರಾಹಕ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಬಹುದು ಎಂದು ತಿಳಿಸಿದರು.

ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮ ಲೆಕ್ಕಿಗರು, ಕಂದಾಯ ಅಧಿಕಾರಿಗಳು, ಗ್ರಾಪಂ ಸಿಬ್ಬಂದಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಸರಿಯಾಗಿ ತಿಳಿಯದಿದ್ದಲ್ಲಿ ತಹಶೀಲ್ದಾರ್‌, ಉಪ ತಹಶೀಲ್ದಾರ್‌, ಕಂದಾಯ ಅಧಿಕಾರಿಗಳ ಸಲಹೆ ಪಡೆದುಕೊಳ್ಳಬೇಕು. ಇದೊಂದು ಹೆಚ್ಚಿನ ಹೊರೆ ಎಂದು ತಿಳಿಯದೆ ರಾಷ್ಟ್ರೀಯ ಕರ್ತವ್ಯ ಎಂದು ಭಾವಿಸಿ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಮತದಾರ ಪಟ್ಟಿ ಪರಿಷ್ಕರಣೆ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

Advertisement

ಸಾಹಯಕ ಆಯುಕ್ತ ಶಂಕರಗೌಡ ಸೋಮನಾಳ ಮಾತನಾಡಿ, ಸೆಪ್ಟೆಂಬರ್‌ 1ರಿಂದ 30ರ ವರೆಗೆ ಮತದಾರ ಪಟ್ಟಿ ಪರಿಷ್ಕರಣಿ ಅಭಿಯಾನ ನಡೆಯಲಿದೆ. ನೂತನವಾಗಿ ಹೆಸರು ಸೇರ್ಪಡೆ ಮಾಡಿಕೊಳ್ಳಬಯಸುವ ಮತದಾರರು ಸಂಬಂಧಿಸಿದ ಬಿಎಲ್ಒಗಳ ಬಳಿ ಸಮರ್ಪಕ ಮಾಹಿತಿ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಸಾರ್ವಜನಿಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಿಬ್ಬಂದಿಗಳಿಗೆ ಸಹಾಯ ಸಹಕಾರ ನೀಡಿ ಪಾರದರ್ಶಕ ಮತದಾರ ಪಟ್ಟಿ ಪರಿಷ್ಕರಣೆ ಮತ್ತು ದೃಢೀಕರಣಕ್ಕೆ ನೆರವಾಗಬೇಕು ಎಂದು ತಿಳಿಸಿದರು. ತಹಶೀಲ್ದಾರ್‌ ಸುರೇಶ ಅಂಕಲಗಿ, ಹುಣಸಗಿ ತಹಶೀಲ್ದಾರ್‌ ಸುರೇಶ ಚವಲ್ಕರ್‌, ಚುನಾವಣಾ ಶಿರಸ್ತೇದಾರ್‌ ಅಶೋಕ ಸುರಪುರ, ಸಹಾಯಕ ಅಶೋಕ ಬಿರಾದಾರ, ಕಂದಾಯ ನಿರೀಕ್ಷಕರಾದ ಗುರುಬಸಪ್ಪ ಪಾಟೀಲ, ಮಹ್ಮದ್‌ ರಾಜಾ ಸಾಬಾ, ವಿಠ್ಠಲ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next