ಸುರಪುರ: ಸುಮಾರು ದಿನಗಳಿಂದ ನನೆಗುದಿಗೆ ಬಿದಿದ್ದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಕೊನೆಗೂ ಪ್ರಕಟವಾಗಿದೆ. ಇದರಿಂದ ಇಲ್ಲಿಯ ನಗರಸಭೆ ಚುನಾಯಿತ ಸದಸ್ಯರ ಆಕಾಂಕ್ಷಿಗಳಲ್ಲಿ ರಾಜಿಕೀಯ ಚಟುವಟಿಕೆ ಗರಿಗೆದರಿದೆ.
ನಗರಸಭೆ 31 ವಾರ್ಡ್‌ಗಳಿಗೆ 2018 ಆಗಸ್ಟ್‌ನಲ್ಲಿ ಚುನಾವಣೆ ನಡೆದು ಸದಸ್ಯರ ಆಯ್ಕೆ ಪ್ರಕ್ರಿಯೆ ಮುಗಿದಿತ್ತು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ ಸ್ಥಾನ ಸಾಮಾನ್ಯ ಪುರುಷ ಮೀಸಲಾತಿ ನಿಗದಿ ಮಾಡಲಾಗಿತ್ತು. ಚನಾವಣೆ ದಿನಾಂಕ ಮಾತ್ರ ಬಾಕಿ ಉಳಿದಿತ್ತು. ಅಷ್ಟರಲ್ಲಿ ನ್ಯಾಯಾಲಯದ ತಡೆಯಾಜ್ಞೆ ಬಂದಿದ್ದರಿಂದ ಅಂದಿನಿಂದ ಇಂದಿನವರೆಗೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ನನೆಗುದುಗೆ ಬಿದ್ದಿತ್ತು. ಚುನಾಯಿತರಾಗಿದ್ದ ಸದಸ್ಯರು ಅಲ್ಲಿಂದ ಇಲಿಯವರೆಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಚಾತಕಪಕ್ಷಿಯಂತೆ ಕಾಯುತ್ತ ಕುಳಿತಿದ್ದರು. ಸರಕಾರ ಕೊನೆಗೂ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ ನಿಗದಿಗೊಳಿಸಿ ಮೀಸಲಾತಿ ಪ್ರಕಟಿಸಿದ್ದು, ಚುನಾವಣಾ ದಿನಾಂಕ ಬಾಕಿ ಉಳಿದಿದೆ. ಚುನಾವಣಾ ದಿನಾಂಕ ಮುನ್ನವೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಕಂಡು ಬರುತ್ತಿದೆ.
ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗಳಿಸಿದರೆ, ಬಿಜೆಪಿ 16 ಸ್ಥಾನ ಗಳಿಸುವ ಮೂಲಕ ಆಡಳಿತದ ಗದ್ದುಗೆ ಹಿಡಿಯುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗಾಗಿ ಬಿಜೆಪಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಲಾಬಿ ಶುರುವಾಗಿದೆ. ಆಕಾಂಕ್ಷಿಗಳು ಶಾಸಕರ ಮನೆಗೆ ಎಡತಾಕುತ್ತಿದ್ದಾರೆ.
ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಶಾಸಕರಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪಕ್ಷದ ಆಯಾ ಜಾತಿವಾರು ಮುಖಂಡರು, ಪ್ರಮುಖರು ತಮ್ಮವರ ಪರವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಹೀಗಾಗಿ ಶಾಸಕ ರಾಜೂಗೌಡ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಿದರೆ ಸೂಕ್ತ ಎಂಬ ಗೊಂದಲದಲ್ಲಿದ್ದಾರೆ. ಅಂತಿಮ ನಿರ್ಣಯ ಶಾಸಕರ ಮೇಲಿದ್ದು, ಯಾರಿಗೆ ಹಸಿರು ನಿಶಾನೆ ತೋರುತ್ತಾರೆ ಎಂಬ ಕಾತರ ಆಕಾಂಕ್ಷಿಗಳಲ್ಲಿ ದುಗುಡ
ಶುರುವಾಗಿದೆ.
16 ಸ್ಥಾನ ಗೆದ್ದಿರುವ ಬಿಜೆಪಿಯಲ್ಲಿ ಆರು ಜನ ಮಹಿಳೆಯರು ಇದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ 6 ಜನ ಮಹಿಳೆಯರಲ್ಲಿ ಅಧ್ಯಕ್ಷ ಸ್ಥಾನದ ಆಸೆ ಚಗರೊಡೆದಿರುವುದು ಸಹಜ ಮತ್ತು ಸ್ವಾಭಾವಿಕ. ಧೋಭಿ ಗಲ್ಲಿಯ ಸುಜಾತ ವೇಣುಗೋಪಾಲ ಜೇವರ್ಗಿ, ಮೋಜಂಪುರ ವಾರ್ಡ್‌ನ ಶಹನಾಜ ಬೇಗಂ, ವೆಂಕಟಾಪುರ ವಾರ್ಡ್, ಕಾಶಿಬಾಯಿ ಕರಿಗುಡ್ಡ, ಮೇದಾಗಲ್ಲಿಯ ಸರೋಜಾ ಬಸವರಾಜ ಕೊಡೇಕಲ್, ಗುಡಾಳಕೇರಿಯ ನಾಗಮ್ಮ ಹಣಮಂತ, ವಣಕಿಹಾಳ ವಾರ್ಡ್ ಮುತ್ತಮ್ಮ ಅಯ್ಯಪ್ಪ ಅಕ್ಕಿ, ಲಲಿತಾ ಸೋಮನಾಥ ಕಜ್ಜಿ ಆಕಾಂಕ್ಷಿಗಳು. ಈ 7 ಜನ ಸದಸ್ಯರಲ್ಲಿ ಸುಜಾತ ಜೇವರ್ಗಿ ಮತ್ತು ಮುತ್ತಮ್ಮ ಅಕ್ಕಿ ಅವರ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದೆ. ಅಂತಿಮವಾಗಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ಸಮಯವೇ ಉತ್ತರಿಸಬೇಕು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
ಅಲ್ಲಿಯೂ ತೀವ್ರ ಲಾಬಿ ಶುರುವಾಗಿದೆ. ಸತತ 4 ಬಾರಿಗೆ ಚುನಾಯುತರಾಗುತ್ತ ಬಂದಿರುವ ವೇಣು ಮಾಧವನಾಯಕ ಮತ್ತು ವಿಷ್ಣು ಗುತ್ತೇದಾರ ನಡುವೆ ಪೈಪೋಟಿ ಇದೆ ಎನ್ನಲಾಗುತ್ತಿದೆ. ನರಸಿಂಹಕಾಂತ ಪಂಚಮಗಿರಿ, ಶಿವುಕುಮಾರ ಝಂಡದಕೇರಾ, ಮಹೇಶ ಪಾಟೀಲ, ಅಯ್ಯಪ್ಪ ಶಾಂತಪುರ, ಮಹಮದ್ ಗೌಸ್ ಕಿಣ್ಣಿ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ತೆರೆಮರೆಯಲ್ಲಿ ಶಾಸಕರ ಮನವೊಲಿಸುವ ಕಸರತ್ತು ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಅಂತಿಮವಾಗಿ ಶಾಸಕರ ಸೂಚನೆ ಸ್ಪಷ್ಟ ಉತ್ತರ ನೀಡಲಿದೆ.